ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರು ಏ. 13ರಂದು ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿ ಅಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ‌ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅದಕ್ಕೆ ಸಾಕ್ಷಿಯಾಗಿ ನಕಲಿ ವಿಮಾನ ಟಿಕೆಟ್ ಅನ್ನು‌ ವರದಿಯಲ್ಲಿ ತೋರಿಸಲಾಗಿದೆ. ಈ ವರದಿಗಳು ನಿಜಕ್ಕೂ ದುರದೃಷ್ಟಕರ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಮಾಧ್ಯಮ ಕಾರ್ಯದರ್ಶಿ ಸದಾನಂದ ಕೆ.ಸಿ ವಿಷಾದ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಮಾಧ್ಯಮಗಳಲ್ಲಿ ತೋರಿಸಲಾದ ಟಿಕೆಟ್ ನಕಲಿ. ಈ ರೀತಿಯ ಟಿಕೆಟ್ ಗಳನ್ನು ಯಾರ ಹೆಸರಲ್ಲಿ ಬೇಕಾದರೂ, ಯಾರು ಬೇಕಾದರೂ ನಕಲಿ ಟಿಕೆಟ್ ಸೃಷ್ಟಿಸಲು ತಂತ್ರಜ್ಞಾನದಲ್ಲಿ ಇಂದು ಅವಕಾಶವಿದೆ.  ಸಿದ್ದರಾಮಯ್ಯ ಜಮೀರ್ ಅಹ್ಮದ್ ಜತೆ ಕರಾಚಿಗೆ ವಿಮಾನದಲ್ಲಿ ಪ್ರಯಾಣಿಸಿದಂತೆ ನಾವೂ ಕೂಡ ಒಂದು ನಕಲಿ ಟಿಕೆಟ್ ಸೃಷ್ಟಿಸಬಹುದು. ಹಾಗೆಯೇ ಕುಮಾರಸ್ವಾಮಿ ಅವರ ಕುರಿತ ವರದಿಯಲ್ಲಿ ತೋರಿಸಿದ ಟಿಕೆಟ್ ಕೂಡ ನಕಲಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. 


ಅಲ್ಲದೇ, ಕುಮಾರಸ್ವಾಮಿ ಅವರು ಅಂಥ ಯಾವುದೇ ಭೇಟಿ, ಸಮಾಲೋಚನೆಗಳನ್ನು ಅಮಿತ್ ಶಾ ಅವರೊಂದಿಗೆ ಮಾಡಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಲು ಬಯಸುತ್ತೇವೆ ಎಂದು ಸದಾನಂದ ತಿಳಿಸಿದರು.