ದಾವಣಗೆರೆಯಲ್ಲಿಂದು ಕರ್ನಾಟಕ ಸಿಎಂ ಮತ್ತು ಉತ್ತರಪ್ರದೇಶ ಸಿಎಂ
ಬೆಣ್ಣೆ ದೋಸೆ ನಗರದಲ್ಲಿಂದು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಮತಬೇಟೆ ನಡೆಸಲಿರುವ ಕರುನಾಡ ಮುಖ್ಯಮಂತ್ರಿ ಮತ್ತು ಯುಪಿ ಮುಖ್ಯಮಂತ್ರಿ.
ದಾವಣಗೆರೆ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಅಬ್ಬರ ಕೂಡ ಜೋರಾಗಿಯೇ ಇದೇ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದ ವಿವಿಧ ಭಾಗಗಳಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ವಿಶೇಷ ಅಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಬ್ಬರೂ ಇಂದು ದಾವಣಗೆರೆಯಲ್ಲಿ ಪ್ರಚಾರ ನಡೆಸಲಿದ್ದಾರೆ.
ಬೆಣ್ಣೆ ನಗರಿಯ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿರುವ ಸಿಎಂ ಸಿದ್ದರಾಮಯ್ಯ ಬೆಳಿಗ್ಗೆ 11:30ಕ್ಕೆ ಹರಿಹರ ವಿಧಾನಸಭಾ ಕ್ಷೇತ್ರ, ಮಧ್ಯಾಹ್ನ 01:00ಕ್ಕೆ ಮಾಯಕೊಂಡ ವಿಧಾನಸಭಾ ಕ್ಷೇತ್ರ ಮತ್ತು ಮಧ್ಯಾಹ್ನ 03:30ಕ್ಕೆ ಹರಪನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ.
ಇನ್ನು ಚುನಾವಣಾ ಪ್ರಚಾರಕ್ಕಾಗಿ ಮತ್ತೆ ರಾಜ್ಯಕ್ಕೆ ಆಗಮಿಸುತ್ತಿರುವ ಯುಪಿ ಸಿಎಂ ಯೋಗಿ, ಹೊನ್ನಾಳಿಯ ಬಿಜೆಪಿ ಅಭ್ಯರ್ಥಿ ಎಂ.ಪಿ. ರೇಣುಕಾಚಾರ್ಯ ಪರ ಪ್ರಚಾರ ಕೈಗೊಳ್ಳಲಿದ್ದಾರೆ. ನಂತರ ನಗರದ ಹೆರೀಕಲ್ಮಠದಲ್ಲಿ ವಾಸ್ತವ್ಯ ಹೂಡಲಿರುವ ಯೋಗಿ ಈ ಸಂದರ್ಭದಲ್ಲಿ ಅನೇಕ ಸಾಧು ಸಂತರ ಜತೆ ಸಮಾಲೋಚನೆ ನಡೆಸಲಿದ್ದಾರೆ.