ಕರ್ನಾಟಕ ಸರ್ಕಾರ ನಿದ್ದೆಯಲ್ಲಿಯೇ ಐದು ವರ್ಷ ಕಳೆದಿದೆ: ಯೋಗಿ ಆದಿತ್ಯನಾಥ್
ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗಳಿಂದ ರಾಜ್ಯದಲ್ಲಿ ದೇಶದಲ್ಲಿಯೇ ಅತೀ ಹೆಚ್ಚು ಅನ್ನದಾತರ ಆತ್ಮಹತ್ಯೆ ಸಂಭವಿಸಿದೆ- ಯೋಗಿ ಆದಿತ್ಯನಾಥ್
ಶಿರಸಿ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ರಾಜ್ಯಕ್ಕೆ ಆಗಮಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕರ್ನಾಟಕ ಕಾಂಗ್ರೆಸ್ ಸರ್ಕಾರ ನಿದ್ದೆಯಲ್ಲಿಯೇ 5 ವರ್ಷಗಳನ್ನು ಕಳೆದಿದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.
ಶಿರಸಿಯಲ್ಲಿ ವಿಕಾಸಾಶ್ರಮ ಮೈದಾನದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಶಿರಸಿಯ ಮಹಾ ಜನತೆಗೆ ಯೋಗಿಯ ಹೃದಯ ಪೂರ್ವಕ ನಮಸ್ಕಾರಗಳು ಎಂದು ಕನ್ನಡದಲ್ಲಿ ತಮ್ಮ ಭಾಷಣ ಪ್ರಾರಂಭಿಸಿದ ಅವರು, ಕರ್ನಾಟಕ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗಳಿಂದ ದೇಶದಲ್ಲಿಯೇ ಅತೀ ಹೆಚ್ಚು ಅನ್ನದಾತರ ಆತ್ಮಹತ್ಯೆಗಳು ಇಲ್ಲಿ ಸಂಭವಿಸಿದ್ದರೂ ,ಇಲ್ಲಿನ ಸರ್ಕಾರ ನಿದ್ದೆಯಲ್ಲಿಯೇ 5 ವರ್ಷಗಳನ್ನು ಕಳೆದಿದೆ ಎಂದು ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿಲ್ಲ. ಕರ್ನಾಟಕ ರಾಜ್ಯ ವಿಕಾಸದೆಡೆಗೆ ಹೋಗಬೇಕಾಗಿದೆ. ಅದಕ್ಕಾಗಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಯೋಗಿ ಹೇಳಿದರು.
ಬಿಜೆಪಿಯ 23 ಕಾರ್ಯಕರ್ತರನ್ನು ಜೆಹಾದಿಗಳು ಹತ್ಯೆ ಮಾಡಿದರೂ ,ಇಲ್ಲಿನ ಸರ್ಕಾರ ದೇಶದ್ರೋಹಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.ಈ ಹಿಂದೂ ವಿರೋಧಿ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ಹಕ್ಕು ಇಲ್ಲ ಎಂದು ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹರಿಹೈದರು.
ಕರ್ನಾಟಕದಲ್ಲಿ ಅಭಿವೃದ್ದಿಯ ಬಗ್ಗೆ ಚಿಂತಿಸುವ ಸರ್ಕಾರದ ಅವಶ್ಯಕತೆ ಇದೆ.ಬಿಜೆಪಿ ಮಾತ್ರ ಅಭಿವೃದ್ಧಿಯ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡುತ್ತಿದೆ.ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಅಭಿವೃದ್ಧಿಗೆ ಹೆಚ್ಚು ವೇಗ ಸಿಗುತ್ತದೆ ಎಂದು ಯೋಗಿ ಸಮಾವೇಶದಲ್ಲಿ ನೆರೆದಿದ್ದ ಜನತೆಗೆ ತಿಳಿಸಿದರು.