ಬೆಂಗಳೂರು : 'ಕರ್ನಾಟಕ ಹೆಮ್ಮೆ ಕಾಂಗ್ರೆಸ್ ಮತ್ತೊಮ್ಮೆ' ಎಂಬ ಘೋಷ ವಾಕ್ಯದೊಂದಿಗೆ ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಶನಿವಾರ 'CM Talks' (ಮುಖ್ಯಮಂತ್ರಿ ಮಾತು) ಎಂಬ ಆಪ್ ಬಿಡುಗಡೆ ಮಾಡಿದೆ. 


COMMERCIAL BREAK
SCROLL TO CONTINUE READING

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರ ಕೈಗೊಂಡಿರುವ ಕಾಂಗ್ರೆಸ್ ಈ ಬಾರಿಯೂ ರಾಜ್ಯದಲ್ಲಿ ಶತಾಯಗತಾಯ ಅಧಿಕಾರದ ಗದ್ದುಗೆ ಹಿಡಿಯಲೆಬೇಕೆಂಬ ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರತಿಯೊಬ್ಬ ಮತದಾರನನ್ನು ತಲುಪುವ ಉದ್ದೇಶದಿಂದ 'ಮುಖ್ಯಮಂತ್ರಿ ಮಾತು' ಆಪ್ ಬಿಡುಗಡೆ ಮಾಡಿದೆ. ಈ ಆಪ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ವತಃ ಬಿಡುಗಡೆ ಮಾಡಿದ್ದಾರೆ.



ಇದೇ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈ ಬಾರಿ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆ ಏರಬಹುದೆಂಬ ಆಸೆಯಿಂದ ಬಿಜೆಪಿ ಕಾಯುತ್ತಿದೆ, ಹಾಗೇ ಅತಂತ್ರ ವಿಧಾನಸಭೆ ಆಗಲಿ ಎಂದು ಜೆಡಿಎಸ್ ಕಾಯುತ್ತಿದೆ. ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಸಮ್ಮಿಶ್ರ ಸರ್ಕಾರ ರಚಿಸಿ, ಸರ್ಕಾರ ರಚನೆಯಲ್ಲಿ ಪ್ರಮುಖ ಸ್ಥಾನ ಗಿಟ್ಟಿಸುವ ಜೆಡಿಎಸ್ ಕನಸು ಎರಡೂ ಕೇವಲ ಭ್ರಮೆ ಅಷ್ಟೇ ಎಂದು ಹೇಳಿದರು.


ಮುಂದುವರಿದು ಮಾತನಾಡಿದ ಅವರು, ‘ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು. ಸರ್ಕಾರದ ಸಾಧನೆಯ ಮೇಲೆ ಮತ ಚಲಾಯಿಸುತ್ತಾರೆ. ರಾಜ್ಯದ ಜನರ ಬಗ್ಗೆ ವಿಶ್ವಾಸವಿದೆ. ಅನ್ನ, ನೀರು ಕೊಟ್ಟವರನ್ನು ಮತದಾರರು ಕೈ ಬಿಡುವುದಿಲ್ಲ’ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. 


ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕ ಮುಖಂಡರು ಈ ಸಂದರ್ಭದಲ್ಲಿ ಉಪಸ್ತಿತರಿದ್ದರು.