ರಾಜ್ಯದಲ್ಲಿ ಗರಿಗೆದರಿದ ರಾಜಕೀಯ; ಈಗಲ್ ಟನ್ ರೆಸಾರ್ಟ್`ಗೆ ತೆರಳಿದ ಜೆಡಿಎಸ್-ಕಾಂಗ್ರೆಸ್ ನಾಯಕರು

Thu, 17 May 2018-4:30 pm,

ಪ್ರಮುಖ ರಾಜಕೀಯ ಬೆಳವಣಿಗೆಯೊಂದರಲ್ಲಿ ಜೆಡಿಎಸ್-ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ಈಗಲ್ ಟನ್ ರೆಸಾರ್ಟ್`ಗೆ ತೆರಳಿದ್ದಾರೆ.

ಬೆಂಗಳೂರು : ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿ ಹಿನ್ನೆಲೆಯಲ್ಲಿ ಯಾರಿಗೆ ಸರ್ಕಾರ ರಚನೆಗೆ ಅವಕಾಶ ಸಿಗಲಿದೆ ಎಂಬ ಕುತೂಹಲಕ್ಕೆ ಈಗ ತೆರೆಬಿದ್ದಿದ್ದು, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಸರ್ಕಾರ ರಚಿಸಲು ಮತ್ತು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್-ಕಾಂಗ್ರೆಸ್ಗೆ ತೀವ್ರ ಮುಖಭಂಗವಾಗಿದ್ದು, ಇಂದು ಬೆಳಿಗ್ಗೆ 9 ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದರು.


COMMERCIAL BREAK
SCROLL TO CONTINUE READING

 


ಬುಧವಾರ ರಾತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಮ್ಮತಿ ಸೂಚಿಸುತ್ತಿದ್ದಂತೆಯೇ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದನ್ನು ತಡೆಯಬೇಕು ಮತ್ತು ಬಹುಮತ ಸಾಬೀತು ಪಡಿಸಿದ ತಮಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಹೇಳಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಹಾಕಿದ ಹಿನ್ನೆಲೆಯಲ್ಲಿ ರಾತ್ರಿಯಿಡೀ ಸಖತ್ ಹೈಡ್ರಾಮ ನಡೆಯಿತು. ನಂತರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಬಹುದೇ ಹೊರತೂ, ತಡೆ ನೀಡುವ ಅಧಿಕಾರ ಸುಪ್ರೀಂಕೋರ್ಟಿಗೆ ಇಲ್ಲ. ರಾಜ್ಯಪಾಲರು ನೀಡಿರುವ ಸೂಚನೆಯಂತೆ ಬಿ.ಎಸ್.ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಯಾವುದೇ ರೀತಿ ತಡೆ ನೀಡಲು ಸಾಧ್ಯವಿಲ್ಲ. ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿಯಿಂದ ರಾಜ್ಯಪಾಲ ವಜುಭಾಯಿ ವಾಲ ಅವರಿಗೆ ಸಲ್ಲಿಕೆಯಾಗಿರುವ ಶಾಸಕರ ಬೆಂಬಲ ಪತ್ರ(ಮೇ 15 ಹಾಗೂ 16ರಂದು ನೀಡಿದ್ದು) ವನ್ನು ಗುರುವಾರ ಮಧ್ಯಾಹ್ನ 2ಗಂಟೆಯೊಳಗೆ ಸಲ್ಲಿಸುವಂತೆ ತ್ರಿಸದಸ್ಯ ಪೀಠ ಸೂಚಿಸಿದ್ದು, ಕಾಂಗ್ರೆಸ್ -ಜೆಡಿಎಸ್ ಸಲ್ಲಿಸಿರುವ ಅರ್ಜಿ ತಿರಸ್ಕೃತಗೊಂಡಿಲ್ಲ. ಈ ಕುರಿತಂತೆ ಕೇಂದ್ರ ಹಾಗೂ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ಶುಕ್ರವಾರ ಬೆಳಗ್ಗೆ 10.30ಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ.


 


ಕರ್ನಾಟಕ ವಿಧಾನಸಭೆಯ 224 ಸ್ಥಾನಗಳ ಪೈಕಿ ಮೇ 12 ರಂದು 222 ಸ್ಥಾನಗಳಿಗೆ ಚುನಾವಣೆ ನಡೆದು, ಮೇ 15ರಂದು ಪ್ರಕಟವಾದ ಫಲಿತಾಂಶದ ಪ್ರಕಾರ ಬಿಜೆಪಿ 104, ಕಾಂಗ್ರೆಸ್ 78 ಮತ್ತು ಜೆಡಿಎಸ್ 38 ಮತ್ತು ಇತರರು 2 ಸ್ಥಾನಗಳನ್ನು ಗಳಿಸಿದ್ದರು. ಈ ಮೂಲಕ ಯಾವ ಪಕ್ಷವೂ ಬಹುಮತ ಪಡೆಯದ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹೊಂದಿ ಸರ್ಕಾರ ರಚನೆಗೆ ಪತ್ರ ಸಲ್ಲಿಸಿದ್ದವು. ಆದರೆ 104 ಸ್ಥಾನಗಳನ್ನು ಪಡೆದಿರುವ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ತಮಗೇ  ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ರಾಜ್ಯಪಾಲ ವಾಜುಭಾಯಿ ವಾಲಾ ಅವರಿಗೆ ಬುಧವಾರ ಪತ್ರ ಸಲ್ಲಿಸಿದ್ದರು. 

Latest Updates

  • ಬೆಂಗಳೂರಿನಲ್ಲಿ ಆರ್.ಅಶೋಕ್ ಸುದ್ದಿಗೋಷ್ಠಿ. ನಾವು ಬಹುಮತ ಸಾಬೀತುಪಡಿಸಲು ಬೇಕಾದ ಎಲ್ಲಾ ತಂತ್ರಗಳು, ಉಪಾಯಗಳನ್ನು ಸಂವಿಧಾನದಡಿಯಲ್ಲಿ ಮಾಡುತ್ತಿದ್ದೇವೆ. 120 ಶಾಸಕರ ಬಹುಮತವನ್ನು ಬಿಜೆಪಿ ಪಡೆದುಕೊಳ್ಳುತ್ತದೆ. ಶೀಘ್ರದಲ್ಲೇ ಸದನದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ. ಕಾಂಗ್ರೆಸ್ ನವರು ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ- ಬಿಜೆಪಿ ನಾಯಕ ಆರ್. ಅಶೋಕ್

    COMMERCIAL BREAK
    SCROLL TO CONTINUE READING

     

  • ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ಈಗಲ್ ಟನ್ ರೆಸಾರ್ಟ್ಗೆ ಜೆಡಿಸ್-ಕಾಂಗ್ರೆಸ್ ಶಾಸಕರ ಆಗಮನ. ಮುಂದಿನ ನಡೆ ಸಂಬಂಧ ಚರ್ಚೆ. ಆಪರೇಶನ್ ಕಮಲಕ್ಕೆ ಬಲಿಯಾಗದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳ ಪಾಲನೆ. ಎಲ್ಲಾ ಶಾಸಕರಿಗೂ ಯಾವುದೇ ದೂರವಾಣಿ ಕರೆ ಸ್ವೀಕರಿಸದಂತೆ ಜೆಡಿಎಸ್-ಕಾಂಗ್ರೆಸ್ ನಾಯಕರ ತಾಕೀತು. 

  • ಶಾಂಗ್ರಿಲಾ ಹೋಟೆಲ್ ನಲ್ಲಿ ಜೆಡಿಎಸ್ ಶಾಸಕರೊಂದಿಗೆ ಹೆಚ್.ಡಿ.ಕುಮಾರಸ್ವಾಮಿ ಸಭೆ ಆರಂಭ. ಮುಂದಿನ ರೂಪುರೇಷೆಗಳ ಕುರಿತು ಚರ್ಚೆ. ಯಾವುದೇ ಕಾರಣಕ್ಕೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದಂತೆ ಶಾಸಕರಿಗೆ ಹೆಚ್.ಡಿ.ಕುಮಾರಸ್ವಾಮಿ ತಾಕೀತು.

  • ಬಹುಮತ ಇಲ್ಲದಿದ್ದರೂ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡಿದ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ. ಬಿ.ಎಸ್.ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿದ್ದು ಸಂವಿಧಾನ ಬಾಹಿರ ಎಂದು ಘೋಷಿಸಬೇಕು, ಶಾಸಕರ ಪಕ್ಷಾಂತರಕ್ಕೆ ನಿರ್ಬಂಧ ಹೇರಬೇಕು ಎದ್ನು ಒತ್ತಾಯಿಸಿ ವಕೀಲ ಎನ್.ಪಿ.ಅಮೃತೇಶ್ ಅವರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ. 

    COMMERCIAL BREAK
    SCROLL TO CONTINUE READING

     

  • ಶಾಂಗ್ರಿಲಾ ಹೋಟೆಲ್ ನಲ್ಲಿ ಜೆಡಿಎಸ್ ಶಾಸಕರೊಂದಿಗೆ ಹೆಚ್.ಡಿ.ಕುಮಾರಸ್ವಾಮಿ ಸಭೆ ಆರಂಭ. ಮುಂದಿನ ರೂಪುರೇಷೆಗಳ ಕುರಿತು ಚರ್ಚೆ. 

  • ಮಹಾರಾಷ್ಟ್ರದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದಾಗ ವಿಲಾಸ್​ ರಾವ್​ ದೇಶಮುಖ್​ಕ್ಕೆ ಹೊಣೆ ನೀಡಿದ್ದರು. ಗುಜರಾತ್ ರಾಜ್ಯಸಭಾ ಚುನಾವಣೆ ವೇಳೆ ಶಾಸಕರ ರಕ್ಷಣೆ ಹೊಣೆಯನ್ನು ನಾನು ಹೊತ್ತಿದ್ದೆ. ಈಗ ಕರ್ನಾಟಕದ ಕಾಂಗ್ರೆಸ್​ ಶಾಸಕರ ಹೊಣೆಯೂ ನನ್ನ ಮೇಲಿದೆ. ಹಿರಿಯ ನಾಯಕರಿದ್ದಾರೆ, ದೇವರಿದ್ದಾರೆ ನಾವು ಬಹುಮತ ಸಾಬೀತು ಮಾಡುತ್ತೇವೆ. ಈ ಹೊಣೆ ಹೊತ್ತಿರುವುದರಿಂದ ನನಗೆ ನೂರೆಂಟು ಸಮಸ್ಯೆ ಎದುರಾಗಬಹುದು. ಹೆಚ್ಚೆಂದರೆ ನನ್ನನ್ನು ಜೈಲಿಗೆ ಕಳುಹಿಸಬಹುದು. ಅದಕ್ಕೂ ನಾನು ಸಿದ್ಧ : ಸುದ್ದಿಗಾರರಿಗೆ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

  • ಬಿಜೆಪಿ ಸರ್ಕಾರ ಬಹುದಿನ ಉಳಿಯುವುದಿಲ್ಲ. ಇದು ಅಲ್ಪ ಕಾಲದ ಸರ್ಕಾರ. ಈ ಬಗ್ಗೆ ನಮಗೆ ವಿಶ್ವಾಸವಿದೆ. ಏಕೆಂದರೆ ನಾವು ಬಹುಮತ ಹೊಂದಿದ್ದೇವೆ. ನಮ್ಮ ಶಾಸಕರನ್ನು ಸೆಳೆಯಲು ಬಿಜೆಪಿಗೆ ಸಾಧ್ಯವಿಲ್ಲ. ಶೇ.100 ಶಾಸಕರು ನಮ್ಮೊಂದಿಗಿದ್ದಾರೆ : ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್

  • ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಹಿನ್ನೆಲೆ ಬಿಎಸ್ಪಿ ನಾಯಕಿ ಹಾಗೂ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ ವಾಗ್ದಾಳಿ. "ಇದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ನಾಶಪಡಿಸುವ ಪಿತೂರಿಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೇ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ" ಎಂದು ಮಾಯಾವತಿ ವಾಗ್ದಾಳಿ. 

  • ವಿಧಾನಸೌಧದ ಮುಂದೆ ಲಘು ಲಾಠಿ ಪ್ರಹಾರ. ಜೆಡಿಎಸ್ ಶಾಸಕರು ತೆರಳುತ್ತಿದ್ದ ಬಸ್ ತಡೆದ ಪೊಲೀಸರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರು ಚಲಿಸುತ್ತಿದ್ದ ಹಿನ್ನೆಲೆಯಲ್ಲಿ ಜನರನ್ನು ಚದುರಿಸಿದ ಪೊಲೀಸರು. 

  • ಕರ್ನಾಟಕದಲ್ಲಿ ಬಹುಮತ ಇಲ್ಲದ ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿ, ಬಿ.ಎಸ್.ಯಡಿಯೂರಪ್ಪಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡಿದ್ದನ್ನು ಪ್ರಶ್ನಿಸಿ ರಾಜ್ಯಪಾಲರ ನಡೆ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಹಿರಿಯ ವಕೀಲ ರಾಮ್ ಜೇಟ್ ಮಲಾನಿ ಅರ್ಜಿ ಸಲ್ಲಿಸಿದ್ದಾರೆ. 

  • ಕರ್ನಾಟಕ ಜನತೆಗೆ ಧನ್ಯಾವಾದ ಸಲ್ಲಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್

  • ಬಿಜೆಪಿ ಜೊತೆ ಪಕ್ಷೇತರ ಶಾಸಕರು ಇದ್ದಾರೆ. ಕಾಂಗ್ರೆಸ್-ಜೆಡಿಎಸ್ ನಲ್ಲಿ ಸಾಕಷ್ಟು ಅಸಮಾಧಾನಿತರಿದ್ದಾರೆ. ಅವರು ನಮ್ಮ ಜೊತೆ ಬರಲಿದ್ದಾರೆ. ಯಾರೂ ಉಹಿಸಲಾಗದ ಸಂಖ್ಯೆಯಲ್ಲಿ ಬಹುಮತ ಸಾಬೀತು ಮಾಡುತ್ತೇವೆ : ಶಾಸಕ ಬಿ.ಶ್ರೀರಾಮುಲು ಹೇಳಿಕೆ

  • ಯಡಿಯೂರಪ್ಪ ಸ್ಥಾನದಲ್ಲಿ ನಾನಿದ್ದಿದ್ದರೆ ಸುಪ್ರೀಂ ತೀರ್ಪು ಬರುವವೆಗೂ ಕಾಯುತ್ತಿದೆ
    ಬಹುಮತ ಇಲ್ಲದಿದ್ದರೂ ಸರ್ಕಾರ ರಚನೆಗೆ ಮುಂದಾಗಿ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಗ್ಗೆ ಕಟುವಾಗಿ ಟೀಕಿಸಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ, "ರಾಜ್ಯಪಾಲರಿಗೆ ಯಡಿಯೂರಪ್ಪ ನೀಡಿರುವ ಪತ್ರದಲ್ಲಿ 104 ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನ ಹೊಂದಿರುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಅಲ್ಲದೆ, ರಾಜ್ಯಪಾಲರು ನೀಡಿರುವ ಆಹ್ವಾನದಲ್ಲೂ ಸ್ಥಾನಗಳ ಉಲ್ಲೇಖವಿಲ್ಲ. ಹಾಗಾಗಿ "ನಾನೇನಾದರೂ ಯಡಿಯೂರಪ್ಪ ಅವರ ಸ್ಥಾನದಲ್ಲಿದ್ದಿದ್ದರೆ ಮೇ 18ರಂದು ಬೆಳಿಗ್ಗೆ 10.30ಕ್ಕೆ ಸುಪ್ರೀಂ ಕೋರ್ಟ್ ನಡೆಸಲಿರುವ ವಿಚಾರಣೆ ಮುಗಿಯುವವರೆಗೂ ಕಾಯುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ. 

  • ಜನಾದೇಶ ನನ್ನ ಮತ್ತು ಬಿಜೆಪಿ ಪರವಿದ್ದರೂ ಕಾಂಗ್ರೆಸ್​-ಜೆಡಿಎಸ್​ ಅಧಿಕಾರ ಕಬಳಿಸಲು ಯತ್ನಿಸುತ್ತಿದೆ. ಆದರೆ ನಮ್ಮ ಪರ ಕಾಂಗ್ರೆಸ್​-ಜೆಡಿಎಸ್​ ಅನೇಕ ಶಾಸಕರಿದ್ದಾರೆ. ಅವರು ನಮಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ. 60ರ ದಶಕದಲ್ಲಿ ಇಂದಿರಾಗಾಂಧಿಗೆ ಬಹುಮತವಿರಲಿಲ್ಲ. ಆತ್ಮ ಸಾಕ್ಷಿಯಿಂದ ಮತ ಕೇಳಿ ಇಂದಿರಾ ಯಶಸ್ವಿಯಾಗಿದ್ದರು. ಅದೇ ರೀತಿ ನಮಗೂ ಬೆಂಬಲ ಸಿಗಲಿದೆ. ರಾಜ್ಯಪಾಲರು ವಿಶ್ವಾಸ ಮತ ಸಾಬೀತು ಪಡಿಸಲು 15ದಿನಗಳ ಕಾಲಾವಕಾಶ ನೀಡಿದ್ದಾರೆ. ಆದರೆ ಅಲ್ಲಿಯವರೆಗೂ ಕಾಯದೇ, ಆದಷ್ಟು ಬೇಗ ಬಹುಮತ ಸಾಬೀತು ಪಡಿಸುತ್ತೇವೆ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

  • ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಬಿ.ಎಸ್.ಯಡಿಯೂರಪ್ಪ ಪತ್ರಿಕಾಗೋಷ್ಠಿ. ವಿಧಾನಸೌಧದ ಸಂಮೆಲೆನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ರೈತರ ಸಾಲ ಮನ್ನಾ ಬಗ್ಗೆ ಮಾತನಾಡಿದ ಯಡಿಯೂರಪ್ಪ. "ರಾಷ್ಟ್ರೀಕೃತ ಬ್ಯಾಂಕುಗಳ, ಸಹಕಾರಿ ಬ್ಯಾಂಕುಗಳ 1 ಲಕ್ಷ ರೂ.ದವರೆಗಿನ ರೈತರ ಮತ್ತು ನೇಕಾರರ ಸಾಲ ಮನ್ನಾ ಮಾಡುವುದಾಗಿ ಭರವಸೆ ಕೊಟ್ಟಿದ್ದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಜೊತೆ ಚರ್ಚೆ ನಡೆಸಿದ್ದೇನೆ. ಸಂಜೆಯೊಳಗೆ ಅವರು ದಾಖಲೆಗಳನ್ನು ನೀಡಲಿದ್ದಾರೆ. ನಾಳೆ ಈ ಸಂಬಂಧ ದಾಖಲೆಗಳನ್ನು ಪರಿಶೀಲಿಸಿ ಇನ್ನೊಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳುತ್ತೇನೆ": ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

    COMMERCIAL BREAK
    SCROLL TO CONTINUE READING

     

  • ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರೂ ಬಹುಮತ ಸಾಬೀತು ಪಡಿಸುವುದು ಕಷ್ಟ. ರಾಜ್ಯಪಾಲರು ಬಹುಮತ ಹೊಂದಿದ್ದ ಪಕ್ಷಗಳಿಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕಿತ್ತು. ಆದರೀಗ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಯಾವುದೇ ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿರಲಿ ಅಥವಾ ಇಲ್ಲದಿರಲಿ, ಇದರಿಂದ ತೊಂದರೆಗೊಳಗಾಗುವವರು ಜನರೇ: ಸಂಜಯ್ ರಾವತ್, ಸಂಸದ ಹಾಗೂ ಶಿವಸೇನಾ ನಾಯಕ

  • ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನ ಸ್ವಿಕರಿಸಿದ ನಂತರ ಅವರ ಸ್ವ ಗ್ರಾಮವಾದ ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಗ್ರಾಮಸ್ಥರು ದೇವರಿಗೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಿದರು. 

  • ಕಾಂಗ್ರೆಸ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ ಮತ್ತು ಇತರ ಶಾಸಕರು. ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ತೀವ್ರಗೊಂಡ ಪ್ರತಿಭಟನೆ. ಬಿಸಿಲನ್ನೂ ಲೆಕ್ಕಿಸದೆ ಕಾಂಗ್ರೆಸ್-ಜೆಡಿಎಸ್ ಶಾಸಕರು ಪ್ರತಿಭಟನೆಯಲ್ಲಿ ಭಾಗಿ. 

  • ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಬಗ್ಗೆ ಕಾಂಗ್ರೆಸ್​ ಜೆಡಿಎಸ್​ ನಾಯಕರು ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ. ಬಿಜೆಪಿ ಮಣಿಸಲು ಭಿನ್ನಾಭಿಪ್ರಾಯ ಮರೆತು ಎಲ್ಲಾ ಪ್ರಾದೇಶಿಕ ಪಕ್ಷಗಳು ಒಂದಾಗಬೇಕು. ಈ ನಿಟ್ಟಿನಲ್ಲಿ ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳ ಎಲ್ಲ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲು ನಮ್ಮ ತಂದೆ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರಲ್ಲಿ ಈ ಮೂಲಕ ಮನವಿ ಮಾಡುತ್ತೇನೆ: ಹೆಚ್.ಡಿ.ಕುಮಾರಸ್ವಾಮಿ

  • ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಆರಂಭಿಸುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಶಾಂಗ್ರಿಲಾ ಹೋಟೆಲ್ ನಿಂದ ವಿಧಾನದೌಧದತ್ತ ತೆರಳಿದ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕರು.

  • ಮೋದಿ, ಅಮಿತ್ ಷಾರಿಂದ ಸಂವಿಧಾನದ ಕಗ್ಗೊಲೆ
    ಮೋದಿ, ಅಮಿತ್​ ಷಾರಿಂದ ಸಂವಿಧಾನದ ಕಗ್ಗೊಲೆಯಾಗುತ್ತಿದೆ. ರಾಜ್ಯಪಾಲರು ಕಾನೂನಾತ್ಮಕವಾಗಿ ಕ್ರಮ ಕೈಗೊಂಡಿಲ್ಲ. ಜೆಡಿಎಸ್​-ಕಾಂಗ್ರೆಸ್​ ಶಾಸಕರನ್ನು ಬೆದರಿಸುವ ಪ್ರಯತ್ನ ನಡೆಯುತ್ತಿದೆ. ತಮ್ಮೆಡೆ ಸೆಳೆಯಲು ಬಿಜೆಪಿ ನಮ್ಮ ಶಾಸಕರಿಗೆ ಆಮಿಷವನ್ನು ಒಡ್ಡಿದೆ. ಇ.ಡಿ. ಮೂಲಕ ಆನಂದ್ ಸಿಂಗ್ ವಿರುದ್ಧ ಇ.ಡಿ. ಛೂ ಬಿಟ್ಟಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಬೆದರಿಕೆ ಹಾಕಲಾಗುತ್ತಿದೆ: ಬಿಜೆಪಿ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

  • ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ತಂಗಿರುವ ಜೆಡಿಎಸ್ ಶಾಸಕರನ್ನು ಭೇಟಿ ಮಾಡಲು ಹೊರಟ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ.

  • ಬಿಜೆಪಿಗೆ ಬಹುಮತ ಇಲ್ಲದಿದ್ದರೂ ಸರ್ಕಾರ ರಚನೆ ಮಾಡುತ್ತೇವೆ ಎನ್ನುವುದು ವಿವೇಚನಾರಹಿತ ಒತ್ತಾಯ. ಇದು ಸಂವಿಧಾನವನ್ನು ಅಣಕಿಸಿದಂತಿದೆ. ಒಂದೆಡೆ ಇಂದು ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ವಿಜಯೋತ್ಸವ ಆಚರಿಸುತ್ತಿದ್ದರೆ, ಭಾರತವು ಪ್ರಜಾಪ್ರಭುತ್ವದ ಸೋಲನ್ನು ಕಂಡು ಮರುಗಲಿದೆ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ 

  • ವಿಧಾನಸೌಧದ ಮುಖ್ಯಮಂತ್ರಿ ಕೊಠಡಿಗೆ ಶಾಸಕ ಅರಗ ಜ್ಞಾನೇಂದ್ರ, ಪುತ್ರ ವಿಜೇಂದ್ರ, ಬಸವರಾಜ ಬೋಮ್ಮಾಯಿ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮನ.

  • ರಾಜಭವನದಿಂದ ವಿಧಾನಸೌಧಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮನ. ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಒಳನಡೆದ ಉಅದಿಯುರಪ್ಪ. ಐಎಎಸ್, ಐಪಿಎಸ್ ಅಧಿಕಾರಿಗಳಿಂದ ಸ್ವಾಗತ. 

  • ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಿಜೆಪಿ ನಾಯಕರಾದ ಅನಂತ್ ಕುಮಾರ್, ಮುರುಳೀಧರರಾವ್ ಜೊತೆ ಬಿ.ಎಸ್.ಯಡಿಯೂರಪ್ಪ ಉಪಹಾರ ಸೇವನೆ.

  • ರಾಜ್ಯಪಾಲರ ಕ್ರಮ ಅಸಂವಿಧಾನಿಕ. ರಾಜ್ಯ ಮತ್ತು ದೇಶದ ಇತಿಹಾಸದಲ್ಲೇ ಎಂದೂ ಕೂಡ ಬಹುಮತ ಸಾಬೀತಿಗೆ 15 ದಿನ ಅವಕಾಶ ನೀಡಿಲ್ಲ. ಗೋವಾ, ಮಣಿಪುರಗಳಲ್ಲಿ ಬಹುಮತ ಸಾಬಿತುಮಾಡಿದವರಿಗೆ ಸರ್ಕಾರ ರಚಿಸಲು ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ರಾಜ್ಯಪಾಲರಿಗೆ ಮನವಿ ಮಾಡಿದರೂ ಅವಕಾಶ ನೀಡಿಲ್ಲ. ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಕ್ರಮವನ್ನು ಖಂಡಿಸಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದೇವೆ - ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

  • ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಟ್ವೀಟ್ ಮಾಡಿರುವ ಬಿ.ಎಸ್.ಯಡಿಯೂರಪ್ಪ "ಎಲ್ಲೆಡೆ ಕಮಲ ಅರಳಿದೆ-ವಿಕಾಸವು ಎಲ್ಲೆಡೆ ಹರಡಲಿದೆ, ರಾಜ್ಯದ ಐಸಿರಿಯನ್ನು ನವಿರೇಳಿಸಲಿದೆ" ಎಂದಿದ್ದಾರೆ. 

  • ಕರ್ನಾಟಕದ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದನ್ನು ವಿರೋಧಿಸಿ ಬೆಂಗಳೂರಿನ ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಹಿರಿಯ ನಾಯಕರಾದ ಗುಲಾಂ ನಬಿ ಅಜಾದ್, ಅಶೋಕ್ ಗೆಹ್ಲೋಟ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರಿಂದ ಪ್ರತಿಭಟನೆ ಆರಂಭ.

  • ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ರಾಜಭವನದ ಹೊರಗೆ ವಿಜಯೋತ್ಸವ ಆಚರಿಸುತ್ತಿರುವ ಬಿಜೆಪಿ ಕಾರ್ಯಕರ್ತರು.

  • ಬಹುಮತವಿದ್ದರೂ ಸರ್ಕಾರ ರಚನೆಗೆ ಅವಕಾಶ ನೀಡದಿದ್ದುದು ನಮ್ಮ ದುರಾದೃಷ್ಟ. ಸುಪ್ರೀಂ ಕೋರ್ಟ್ ತೀರ್ಪಿನ ನಿದರ್ಶನಗಳಿದ್ದರೂ ರಾಜ್ಯಪಾಲರು ಬಿಜೆಪಿಗೆ ಅವಕಾಶ ನೀಡಿದ್ದಾರೆ. ಬಹುಮತ ಇದೆ ಎಂದು ಪಟ್ಟಿ ಸಲ್ಲಿಸಿದರೂ ಸರ್ಕಾರ ರಚನೆಗೆ ಆಹ್ವಾನ ನೀಡಲಿಲ್ಲ. ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಬಹುಮತ ಸಾಬೀತುಪಡಿಸಿ ಸರ್ಕಾರ ರಚನೆ ಮಾಡುತ್ತಾರೆಯೇ ಇಲ್ಲವೇ ಎಂಬುದನ್ನು ಕಾದುನೋಡಬೇಕಿದೆ : ಪದ್ಮನಾಭನಗರದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿ ಹೆಚ್.ಡಿ.ರೇವಣ್ಣ ಹೇಳಿಕೆ

  • ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ವಿಜಯದ ಸಂಕೇತದೊಂದಿಗೆ ಗೆಲುವಿನ ನಗೆ ಬೀರಿದ ಬಿ.ಎಸ್.ಯಡಿಯೂರಪ್ಪ

  • ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ. ಪ್ರತಿಜ್ಞಾ ವಿಧಿ ಬೋಧಿಸಿದ ರಾಜ್ಯಪಾಲ ವಾಜುಭಾಯಿ ವಾಲಾ. ಮೂರನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ.  ದೇವರ ಹೆಸರಿನಲ್ಲಿ, ರೈತರ ಹೆಸರಿನಲ್ಲಿ ಹಸಿರು ಶಾಲು ಹೊದ್ದು ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ನಂತರ ರಾಜ್ಯಪಾಲರಿಂದ ಅಭಿನಂದನೆ.

  • ಕೆಲವೇ ಕ್ಷಣಗಳಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ. ರಾಜಭವನದ ಗಾಜಿನ ಮನೆಯಲ್ಲಿ ನಿರ್ಮಿಸಲಾಗಿರುವ ವೇದಿಕೆಯ ಮುಂದೆ ಬಿಜೆಪಿ ನಾಯಕರೊಂದಿಗೆ ಬಿ.ಎಸ್.ಯಡಿಯೂರಪ್ಪ ಆಸೀನ.

  • ರಾಜಭವನಕ್ಕೆ ಆಗಮಿಸಿದ ಯಡಿಯೂರಪ್ಪ. ಕೇಂದ್ರ ಸಚಿವರಾದ ಡಿ.ವಿ. ಸದಾನಂದ, ಅನಂತ್ ಕುಮಾರ್, ಜೆ.ಪಿ.ನಡ್ದಾ, ಪ್ರತಾಪ್ ಸಿಂಹ, ಶಾಸಕ ಬಿ.ಶ್ರೀರಾಮುಲು ಸೇರಿದಂತೆ ಹಲವು ನಾಯಕರಿಂದ ಸ್ವಾಗತ. 

  • ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಬಿ.ಎಸ್.ಯಡಿಯೂರಪ್ಪ ರಾಜಭವನಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ ರಾಜಭವನದ ಹೊರಗೆ ಬಿಜೆಪಿ ಕಾರ್ಯಕರ್ತರು 'ವಂದೇ ಮಾತರಂ' ಮತ್ತು 'ಮೋದಿ, ಮೋದಿ' ಎಂದು ಘೋಷಣೆ ಕೂಗುತ್ತಿದ್ದಾರೆ.

  • ಭಾರತಿಯ ಜನತಾ ಪಕ್ಷ ದೊಡ್ಡ ಪಕ್ಷವಾಗಿದೆ. ಭಾರತದ ಪ್ರಜಾಪ್ರಭುತ್ವದಲ್ಲಿ 70 ವರ್ಷಗಳ ಇತಿಹಾಸದಲ್ಲಿ ಈಗಾಗಲೇ ಕೇಂದ್ರ ಮತ್ತು ರಾಜ್ಯಗಳಲ್ಲಿ ಅತಿ ಹೆಚ್ಚು ಸ್ಥಾನಗಳಿಸಿದ ದೊಡ್ಡ ಪಕ್ಷ ಸರ್ಕಾರ ರಚಿಸಿ ಯಶಸ್ವಿ 5 ವರ್ಷಗಳ ಅಧಿಕಾರ ಪೂರ್ಣಗೊಳಿಸಿವೆ. ಹಾಗಾಗಿ ಸರ್ಕಾರ ರಚನೆಗೆ ಅವಕಾಶ ನೀಡಲಾಗಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯದಲ್ಲಿ 5 ವರ್ಷಗಳ ಆಡಳಿತವನ್ನು ಯಶಸ್ವಿಯಾಗಿ ಪೂರೈಸಲಿದ್ದಾರೆ : ಕೇಂದ್ರ ಸಚಿವ ಅನಂತ್ ಕುಮಾರ್

  • ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ರಾಜಭವನಕ್ಕೆ ತೆರಳುವ ಮುನ್ನ ಸಂಜಯ್ ನಗರದ ರಾಧಾಕೃಷ್ಣ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ಬಿ.ಎಸ್..ಯಡಿಯೂರಪ್ಪ

  • ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರಾದ ಸಿ.ಟಿ.ರವಿ, ಪಿ.ಸಿ. ಮೋಹನ್, ರಾಜೀವ್ ಚಂದ್ರಶೇಖರ್, ರಾಮಚಂದ್ರ ಗೌಡ, ಪ್ರತಾಪ್​ ಸಿಂಹ, ರಾಮದಾಸ್​ ಸೇರಿದಂತೆ ಹಲವರು ರಾಜಭವನಕ್ಕೆ ಆಗಮನ.

  • ಯಡಿಯೂರಪ್ಪ ಪ್ರಮಾಣವಚನ  ಹಿನ್ನೆಲೆ; ಬಿಜೆಪಿ ಕಚೇರಿ ಬಳಿ ಬಿಗಿ ಪೋಲಿಸ್ ಭದ್ರತೆ.

  • ರಾಜಭವನಕ್ಕೆ ಹೊರಟ ಬಿ.ಎಸ್.ಯಡಿಯೂರಪ್ಪ

  • ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ಸಮಾರಂಭ ಆರಂಭ. ಕೇಂದ್ರ ಸಚಿವರಾದ ಜೆ.ಪಿ.ನಡ್ದಾ, ಧರ್ಮೇಂದ್ರ ಪ್ರಧಾನ್ ಮತ್ತು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ರಾಜಭವನಕ್ಕೆ ಆಗಮನ.

  • ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಬಿಗಿ ಭದ್ರತೆ ಒದಗಿಲಾಗಿದೆ. ಮುಖ್ಯಮಂತ್ರಿಯಾಗಿ ಪ್ರಮಾನವಚನ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ನಿವಾಸದ ಗೇಟ್'ಗೆ ಮೆಟಲ್ ಡಿಟೆಕ್ಟರ್ ಅವಳವಡಿಕೆ. ಮನೆಗೆ ಬರುವ ಪ್ರತಿಯೊಬ್ಬರನ್ನೂ ಪೊಲೀಸರು ತಪಾಸಣೆಗೆ ಒಳಪಡಿಸುತ್ತಿದ್ದಾರೆ. 

  • ರಾಜ್ಯದಲ್ಲಿ ಸರ್ವಾಧಿಕಾರ ಅಂತ್ಯವಾಗಲಿದೆ

    COMMERCIAL BREAK
    SCROLL TO CONTINUE READING

    ಕರ್ನಾಟಕದ ಸುವರ್ಣ ದಿನಗಳು ಆರಂಭವಾಗಿದೆ. ಈ ಐತಿಹಾಸಿಕ ದಿನದಂದು ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಇದು ರಾಜ್ಯದ ದುಷ್ಟ ಶಕ್ತಿಗಳ ವಿರುದ್ಧದ ಕನ್ನಡಿಗರ ಗೆಲುವು. ಎ ಟೀಂ ಮತ್ತು ಬಿ ಟೀಮ್ಗಳು ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಸಾಕಷ್ಟು ತಡೆದವು. ಆದರೆ ಜನತೆಯ ಆಶಿರ್ವಾದದಿಂದ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಕಾಂಗ್ರೆಸ್-ಜೆಡಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದನ್ನು ತಡೆಯಲು ಪ್ರಯತ್ನಿಸಿದರೂ ರಾಜ್ಯದ ಜನತೆ ಯಡಿಯೂರಪ್ಪ ಅವರ ಕೈ ಹಿಡಿದಿದ್ದಾರೆ. ಸರ್ವಾಧಿಕಾರ ಅಂತ್ಯವಾಗಲಿದೆ. ರಾಜ್ಯದಲ್ಲಿ ಜನತಾ ಸರ್ಕಾರ ಅಧಿಕಾರಕ್ಕೆ ಬರಲಿದೆ : ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟ್ವೀಟ್

  • ಬಿಜೆಪಿ ಸರ್ಕಾರ ರಚನೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ ರಾಜಭವನದ ಬಳಿ ಜಾನಪದ ಕಲಾ ತಂಡಗಳಿಂದ ಕಲಾ ಪ್ರದರ್ಶನ. ಬಿಜೆಪಿ ಕಾರ್ಯಕರ್ತರಲ್ಲಿ ಹಬ್ಬದ ಸಂಭ್ರಮ. ಬೆಳಿಗ್ಗೆ 9 ಗಂಟೆಗೆ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ.

  • ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿ ಮತ್ತು ರಾಜಭವನದ ಸುತ್ತ ಬಿಗಿ ಪೋಲಿಸ್ ಭದ್ರತೆ ಏರ್ಪಾಡು. ಒಂದು ಸಾವಿರಕ್ಕೂ ಹೆಚ್ಚು ಪೋಲೀಸರ ನಿಯೋಜನೆ

  • ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಬೆಂಗಳೂರಿನ ಸಂಜಯ್ ನಗರದಲ್ಲಿರುವ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ರಾಜಭವನಕ್ಕೆ ತೆರಳಲು ಬಿ.ಎಸ್.ಯಡಿಯೂರಪ್ಪ ನಿರ್ಧಾರ.

  • ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಯಡಿಯೂರಪ್ಪ ನಿವಾಸದ ಹೊರಗೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು

  • ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಜತೆ ನಾಲ್ವರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ- ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೆಕರ್

ZEENEWS TRENDING STORIES

By continuing to use the site, you agree to the use of cookies. You can find out more by Tapping this link