ಚಾಮರಾಜನಗರ: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಂಬರ್ 1 ಅವಕಾಶವಾದಿ ಮತ್ತು ಪಲಾಯನವಾದಿ ಎಂದು ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ವಿ.ಶ್ರೀನಿವಾಸ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಧಾನಿ ನರೇಂದ್ರ ಮೋದಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ. ಅವರಿಗೆ ಕಾಳಜಿ ಇದ್ದಿದ್ದರೆ ಲೋಕಸಭೆಯಲ್ಲಿ ತಮ್ಮನ್ನು ವಿರೋಧ ಪಕ್ಷದ ನಾಯಕನಾಗಿ ಮಾಡುತ್ತಿದ್ದರು ಎಂದು ಕಾಂಗ್ರೆಸ್ ಮುಖಂಡ ಎಂ. ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀನಿವಾಸ ಪ್ರಸಾದ್ ಅವರು, ಮಲ್ಲಿಕಾರ್ಜುನ ಖರ್ಗೆ ಸ್ವಾಭಿಮಾನವೇ ಇಲ್ಲದ ದಲಿತ ನಾಯಕರು. ಕೇವಲ ಅಧಿಕಾರಕ್ಕಾಗಿ ಇರುವ ನಾಯಕರು. ಸಿದ್ದರಾಮಯ್ಯಗೆ ರಾಜ್ಯದಲ್ಲಿ‌ ಆಡಳಿತ ವಿರೋಧಿ ಅಲೆ ಇದೆ. ಹೀಗಾಗಿ ಚಾಮುಂಡೇಶ್ವರಿ ಬಿಟ್ಟು ಬಾದಾಮಿಗೆ ಹೋಗಿದ್ದಾರೆ. ಸಿದ್ದರಾಮಯ್ಯ ರಾಜಕಾರಣಿ ಅಲ್ಲ. ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಚಾಳಿ ಇದೆ ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ. 


ಮಳವಳ್ಳಿಯಲ್ಲಿಂದು ಕಾಂಗ್ರೆಸ್ ಅಭ್ಯರ್ಥಿ ನರೇಂದ್ರಸ್ವಾಮಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಖರ್ಗೆ ಅವರು, ಕಾಂಗ್ರೆಸ್ ಪಕ್ಷದ 48 ಸಂಸದರಿದ್ದರೂ, ನರೇಂದ್ರ ಮೋದಿ ತಮ್ಮನ್ನು ವಿರೋಧ ಪಕ್ಷದ ನಾಯಕನಾಗಿ ಮಾಡಲಿಲ್ಲ. ವಿರೋಧ ಪಕ್ಷದ ನಾಯಕನಾಗಿದ್ದರೆ ಕೇಂದ್ರ ಸಚಿವ ಸ್ಥಾನಮಾನ ದೊರಕುತಿತ್ತು ಎಂದು ಆರೋಪಿಸಿದ್ದರಲ್ಲದೆ, ವಿರೋಧ ಪಕ್ಷದ ನಾಯಕನಾಗಿ ಮಾಡಲು ಸಂವಿಧಾನ ತಿದ್ದುಪಡಿ ಮಾಡಬೇಕಿರಲಿಲ್ಲ, ಎಲ್ಲವೂ ಪ್ರಧಾನಿ ಅವರ ಕೈಯಲ್ಲಿದ್ದರೂ ಉದ್ದೇಶಪೂರ್ವಕವಾಗಿಯೇ ಆ ಹುದ್ದೆಯನ್ನು ನೀಡಲಿಲ್ಲ ಎಂದು ಕಿಡಿ ಕಾರಿದ್ದರು. ಈ ವಿಚಾರಕ್ಕೆ ಶ್ರೀನಿವಾಸ ಪ್ರಸಾದ್ ಅವರು ಖರ್ಗೆಯನ್ನು ಅವಕಾಶವಾದಿ ಎಂದು ಟೀಕಿಸಿದ್ದಾರೆ.