ಸಿದ್ದರಾಮಯ್ಯ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದರಲ್ಲಿ ತಪ್ಪೇನು: ಮಲ್ಲಿಕಾರ್ಜುನ ಖರ್ಗೆ
ಪ್ರಧಾನಿ ಮೋದಿ ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದ್ದಾಗ ಯಾರು ಅದನ್ನು ಪ್ರಶ್ನಿಸಲಿಲ್ಲ- ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅದರಲ್ಲಿ ತಪ್ಪೇನು ಎಂದಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಾರಣಾಸಿ ಮತ್ತು ವಡೋದರಾ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಆಗ ಅದನ್ನು ಯಾರೂ ಪ್ರಶ್ನಿಸಲಿಲ್ಲ. ಆದರೆ ಈಗ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವಾಗ ಏಕೀ ವ್ಯತ್ಯಾಸ ಎಂದು ಪ್ರಶ್ನಿಸಿದರು. ಮುಂದುವರೆದು ಮಾತನಾಡಿದ ಖರ್ಗೆ, ಸಿದ್ದರಾಮಯ್ಯ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವುದು ಹೈಕಮಾಂಡ್ ನಿರ್ಧಾರ. ಕೆಲವು ಮಾಧ್ಯಮಗಳಲ್ಲಿ ಚಾಮುಂಡೇಶ್ವರಿಯಿಂದ ಸಿದ್ದರಾಮಯ್ಯ ಗೆಲ್ಲುವುದು ಸಂದೇಹವಿದೆ. ಆದ್ದರಿಂದ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಬಿಜೆಪಿ ಪ್ರಚಾರ ಮಾಡುತ್ತಿದೆ ಎಂದು ಇದೇ ವೇಳೆ ಆರೋಪಿಸಿದರು. ಸಿಎಂ ಬಾದಾಮಿಯಿಂದ ಸ್ಪರ್ಧಿಸಬೇಕೆಂಬುದು ಬಾದಾಮಿ ಜನರ ಅಭಿಲಾಷೆ. ಹಾಗಾಗಿ ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದಿಂದ ಮಂಗಳವಾರ ಸಿಎಂ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಖರ್ಗೆ ತಿಳಿಸಿದರು.
ಬಾದಾಮಿಯಿಂದ ಗೆಲ್ಲುವ ಸಾಧ್ಯತೆ ಹೆಚ್ಚು
ಸಿದ್ದರಾಮಯ್ಯ ಅವರು ಎರಡು ಸ್ಥಳಗಳಿಂದ ಚುನಾವಣೆಗೆ ಸ್ಪರ್ಧಿಸಲು ಹೆದರುವುದಿಲ್ಲ. ಬಿಜೆಪಿ ಸುಳ್ಳು ಸುದ್ದಿ ಹರಡುತ್ತಿದೆ. 2006ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಿದ್ದರಾಮಯ್ಯರ ಗೆಲುವಿನ ಅಂಚು ಕೇವಲ 256 ಮತಗಳು. ಇಂತಹ ಸಂದರ್ಭಗಳಲ್ಲಿ ಅವರು ಹಾಗೆ ಮಾಡಲು ಕೇಳಿಕೊಂಡಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ. ಬಾದಾಮಿಯಲ್ಲಿ ಬಹಳಷ್ಟು ಕುರುಬಾ ಸಮುದಾಯಗಳಿವೆ. ಸಿದ್ದರಾಮಯ್ಯ ಕೂಡ ಇದೇ ಸಮುದಾಯಕ್ಕೆ ಸೇರಿದವರು. ಆದ್ದರಿಂದ, ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವುದು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. 2008 ರಿಂದ ಅವರು ಮೈಸೂರಿನ ವರುಣಾ ಕ್ಷೇತ್ರದಿಂದ ಪ್ರತಿನಿಧಿಸಿದ್ದಾರೆ. ಆದರೆ ಇದೀಗ ಪಕ್ಷ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರಗೆ ಅಲ್ಲಿಂದ ಟಿಕೆಟ್ ನೀಡಿದೆ.