ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ಹಿರಿಮೆಯನ್ನು ಸ್ಮರಿಸಿದ ಪಾಕ್

ನವದೆಹಲಿ: ಮೈಸೂರಿನ ಹುಲಿ ಎಂದೇ ಖ್ಯಾತನಾದ ಟಿಪ್ಪು ಸುಲ್ತಾನ್ ನನ್ನು ಪಾಕಿಸ್ತಾನ್ ಸರ್ಕಾರವು ಟ್ವೀಟರ್ ಮೂಲಕ ಸ್ಮರಿಸಿದೆ.
ಟಿಪ್ಪು ಸುಲ್ತಾನರ 218 ಸ್ಮರಣದಿನೋತ್ಸವದ ಪ್ರಯುಕ್ತ ಟ್ವೀಟ್ ಮಾಡಿರುವ ಪಾಕಿಸ್ತಾನ್ ಸರ್ಕಾರ "ಐತಿಹಾಸಿಕ ಮತ್ತು ಸ್ಪೂರ್ತಿದಾಯಕ ವ್ಯಕ್ತಿತ್ವ ಹೊಂದಿರುವ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ರನ್ನು ಸ್ಮರಿಸಬೇಕಾಗಿದೆ. ಅವರು ತಮ್ಮ ಆರಂಭದ ದಿನಗಳಿಂದಲೂ ಯುದ್ದ ಕಲೆಯಲ್ಲಿ ಪರಿಣಿತರಾಗಿದ್ದರಲ್ಲದೆ ಕಲಿಕೆಯಲ್ಲಿ ಅತಿ ಹೆಚ್ಚಿನ ಉತ್ಸುಕತೆಯನ್ನು ಹೊಂದಿದ್ದರು ಎಂದು ಟ್ವೀಟ್ ಮೂಲಕ ಟಿಪ್ಪು ಸುಲ್ತಾನರ ಹಿರಿಮೆಯನ್ನು ಸ್ಮರಿಸಿದೆ.
ಟಿಪ್ಪು ಭಾರತದ ಆಧುನಿಕ ಇತಿಹಾಸದಲ್ಲಿ ಅಚ್ಚಳಿಯದ ಹೆಸರು 1799 ರಲ್ಲಿ ಬ್ರಿಟಿಷರ ವಿರುದ್ದ ನಾಲ್ಕನೆಯ ಆಂಗ್ಲೋ ಮೈಸೂರು ಯುದ್ದದಲ್ಲಿ ಸಾವನ್ನಪ್ಪಿದ್ದರು. ಆಗಿನ ಕಾಲದಲ್ಲಿಯೇ ರಾಕೆಟ್ ನಂತಹ ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದ ಟಿಪ್ಪು, ಕರ್ನಾಟಕದ ಜನ ಮಾನಸದಲ್ಲಿ ಇಂದಿಗೂ ಜನರ ಲಾವಣಿ ಪದಗಳಲ್ಲಿ ಅವರ ಹಿರಿಮೆ ಕುರಿತು ಹಾಡಿ ಹೊಗಳಲಾಗುತ್ತದೆ. ಅಲ್ಲದೆ ಖ್ಯಾತ ಸಾಹಿತಿ ಗಿರೀಶ್ ಕಾರ್ನಾಡ್ ರವರು ಹೇಳುವಂತೆ ಇತ್ತೀಚೆಗಿನ 500 ವರ್ಷಗಳಲ್ಲಿ ಕರ್ನಾಟಕ ಕಂಡಂತಹ ಶ್ರೇಷ್ಠ ಕನ್ನಡಿಗ ಟಿಪ್ಪು ಎನ್ನುತ್ತಾರೆ. ಈ ಎಲ್ಲ ಹಿನ್ನಲೆಯೊಂದಿಗೆ ಅವರನ್ನು ಸ್ಮರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಿಸಲು ಪ್ರಾರಂಭಿಸಿದ್ದನ್ನು ನಾವು ಗಮನಿಸಬಹುದು.