ಚಾಮರಾಜನಗರ : ಪ್ರಧಾನಿ ನರೇಂದ್ರ ಮೋದಿ ಅವರಿಗೆ 56 ಇಂಚಿನ ಎದೆ ಇದೆ. ಆದರೆ ಏನು ಪ್ರಯೋಜನ, ಬಡವರ ಪರವಾದ ಹೃದಯ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಸಿದ್ದರಾಮಯ್ಯ ಅವರು, ದೇಶ ಆಳಲು 56 ಇಂಚಿನ ಎದೆ ಅಲ್ಲ, ವಿಶಾಲವಾದ ಹೃದಯ ಬೇಕು. ಬಾಡಿ ಬಿಲ್ಡರ್ ಗೂ ಮೋದಿಯಂತೆ 56 ಇಂಚಿನ ಎದೆ ಇರುತ್ತದೆ ಎಂದು ಪ್ರಧಾನಿಯನ್ನು ಛೇಡಿಸಿದರಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಡವರ ಪರವಾದ ಹೃದಯ ಇಲ್ಲ, ಬಡವರ ಪರ ಕಾಳಜಿ ಇಲ್ಲ, ಮೋದಿ ಬರೀ ಮಾತನಾಡುತ್ತಾರೆಯೇ ಹೊರತು, ಅವರ ಸಾಧನೆ ಮಾತ್ರ ಶೂನ್ಯ. ಮನ್‌ ಕಿ ಬಾತ್ ಬದಲು ಕಾಮ್‌ ಕಿ ಬಾತ್ ಹೇಳಿ’ ಎಂದು ವಾಗ್ದಾಳಿ ನಡೆಸಿದರು. 


ದೇಶದ ಇತಿಹಾಸದಲ್ಲಿಯೇ ಅತ್ಯಂತ ಸುಳ್ಳು ಹೇಳುವ ಪ್ರಧಾನಿ ಎಂದಿದ್ದರೆ ಅದು ನರೇಂದ್ರ ಮೋದಿ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಸದಾ ಹೇಳುವ ಮೋದಿ, ಬಿಜೆಪಿಯಿಂದ ಮುಸ್ಲಿಂ, ಉಪ್ಪಾರ, ಸವಿತಾ ಸಮಾಜದವರಿಗೆ ಟಿಕೆಟ್ ನೀಡಿಲ್ಲ. ಚಾಮರಾಜನಗರಕ್ಕೆ ಬಂದರೆ ಸೋಲುವ ಭೀತಿ ಮೋದಿಗೆ ಇರುವುದರಿಂದಲೇ ಸಂತೇಮಾರನಹಳ್ಳಿಗೆ ಬಂದು ಹೋಗಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯ ಮಾಡಿದರು. 


ದೇಶದಲ್ಲಿ ಭ್ರಷ್ಟಾಚಾರವನ್ನು ಎಂದಿಗೂ ಸಹಿಸುವುದಿಲ್ಲ, ಚೌಕಿದಾರನಾಗಿ ಕೆಲಸ ಮಾಡುತ್ತೇನೆ ಎಂದು ಮೋದಿ ಹೇಳಿದ್ದರು. ಆದರೆ, ಉಧ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ದೇಶ ಲೂಟಿ ಮಾಡಿ ಹೋಗುವಾಗ ಪ್ರಧಾನಿ ಮೋದಿ ಎಲ್ಲಿ ಹೋಗಿದ್ದರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. 


ಇದೇ ಮೇ 12ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಕೇವಲ ನಾಲ್ಕೈದು ದಿನಗಳಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಆರೋಪ ಪ್ರತ್ಯಾರೋಗಳು ತಾರಕಕ್ಕೇರಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.