ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಚುನಾವಣಾ ಅಖಾಡಕ್ಕೆ ಕಾಲಿಟ್ಟ ಮೊದಲ ದಿನವೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಹಾಡಿ ಹೊಗಳಿರುವುದು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.


COMMERCIAL BREAK
SCROLL TO CONTINUE READING

ಅಂತಿಮ ಹಂತದ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿದ ಮೊದಲ ದಿನವೇ  ಪ್ರಧಾನಿ ನರೇಂದ್ರ ಮೋದಿಯವರು ಉಡುಪಿಯಲ್ಲಿ ಭಾಷಣ ಮಾಡುತ್ತಾ ಮಾಜಿ ದೇವೇಗೌಡರನ್ನು ಕೊಂಡಾಡಿದರು. ಮತ್ತೊಂದು ಪಕ್ಷದ ವರಿಷ್ಠ ನಾಯಕನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿರುವುದರ ಹಿಂದೆ ಒಂದು ವೇಳೆ ಯಾವುದೇ ಪಕ್ಷ ಬಹುಮತ ಬರದೆ ಇದ್ದರೆ ಪ್ರಧಾನಿ ಮೋದಿಯವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ರಾಜಕೀಯ ಲೆಕ್ಕಾಚಾರ ಅಡಗಿದೆ ಎನ್ನಲಾಗುತ್ತಿದೆ.


ರಾಷ್ಟ್ರೀಯ ಪಕ್ಷ ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ ಎರಡಕ್ಕೂ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಅನ್ನು ಶತಾಯಗತಾಯ ಮಣಿಸಲು ಪಣತೊಡಲಾಗಿದ್ದು, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಗೆಲ್ಲುವುದಕ್ಕೆ ಅವಕಾಶ ಮಾಡಿಕೊಡಬೇಡಿ ಎಂಬ ಸಂದೇಶವನ್ನು ಮೋದಿ ಅವರು ಈ ಮೂಲಕ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. 


ಉಡುಪಿಯ ಎಂಜಿಎಂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ನಮೋ, ದೇವೇಗೌಡರು ದೆಹಲಿಯಲ್ಲಿನ ತಮ್ಮ ಮನೆಗೆ ಬಂದಾಗಲೆಲ್ಲಾ ಬಾಗಿಲವರೆಗೂ ಬಂದು ಸ್ವಾಗತ ಕೋರುತೇನೆ, ಮತ್ತೆ ಹೋಗುವಾಗಲು ಕಾರಿನ ಬಳಿ ಹೋಗಿ ಬೀಳ್ಕೂಡುತ್ತೇನೆ ಎಂದು ಅವರ ಬಗ್ಗೆ ಕೊಂಡಾಡಿದರು.


ಮೊನ್ನೆ ಮೊನ್ನೆಯಷ್ಟೇ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು, '2006ರ ಸನ್ನಿವೇಶ ಮತ್ತೆ ಮರುಕಳಿಸುವುದಿಲ್ಲ. ಒಂದು ವೇಳೆ ನನ್ನ ಮಾತು ಮೀರಿ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೆ ಅವರನ್ನು ಕುಟುಂಬದಿಂದಲೇ ಹೊರ ಹಾಕುತ್ತೇವೆ ಎಂದಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಏಕಾಏಕಿ ಜೆಡಿಎಸ್ ವರಿಷ್ಠರನ್ನು ಹೊಗಳಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರ ಇರಬಹುದು ಎಂದು ಊಹಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ.