ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ದಿನೇ ದಿನೇ ರಂಗೇರುತ್ತಿದ್ದು, ರಾಜ್ಯದಲ್ಲಿ ಮತದಾರರನ್ನು ಮತ್ತಷ್ಟು ಸೆಳೆಯಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಮತ್ತು ನಾಳೆ(ಏ.27) ಮತ್ತೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. 


COMMERCIAL BREAK
SCROLL TO CONTINUE READING

ಈಗಾಗಲೇ ಹಲವು ಬಾರಿ ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವ ರಾಹುಲ್ ಗಾಂಧಿ, ಈ ಬಾರಿ ದಕ್ಷಿಣ ಕನ್ನಡ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ದೆಹಲಿಯಿಂದ ಗೋವಾಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ, ಅಲ್ಲಿಂದ ಮಧ್ಯಾಹ್ನ 12.30ಕ್ಕೆ ಅಂಕೋಲಾಕ್ಕೆ ಭೇಟಿ ನೀಡಿ ರೋಡ್‌ ಶೋ ನಡೆಸಲಿದ್ದಾರೆ. ನಂತರ ಅಲ್ಲಿನ ಪುರಸಭೆ ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಮಧ್ಯಾಹ್ನ 2.30ಕ್ಕೆ ಉತ್ತರ ಕನ್ನಡ ಜಿಲ್ಲೆಯ ಕುಮುಟಾದಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ಹೊನ್ನಾವರದಲ್ಲಿ ರೋಡ್‌ ಶೋ ನಡೆಸಲಿರುವ ರಾಹುಲ್, ಸಂಜೆ 5.30ಕ್ಕೆ ಭಟ್ಕಳದಲ್ಲಿ ಕಾರ್ನರ್ ಮೀಟಿಂಗ್ ನಡೆಸಿ ರಾತ್ರಿ ಮುರುಡೇಶ್ವರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.



ಏಪ್ರಿಲ್ 27 ರಂದು ಬಂಟ್ವಾಳದಲ್ಲಿ ನಡೆಯುವ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗಿಯಾಗಲಿರುವ ರಾಹುಲ್ ಗಾಂಧಿ, ನಂತರ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು, ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಲಿದ್ದಾರೆ. ಇದಾದ ಬಳಿಕ ಕೊಡಗಿನ ಗೋಣಿಕೊಪ್ಪಲಿಗೆ ಪ್ರಯಾಣ ಬೆಳಸಲಿದ್ದು, ಅಲ್ಲಿ ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದಾರೆ. ನಂತರ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ರೋಡ್‌ ಶೋ ನಡೆಸಿ ಮೈಸೂರಿನಿಂದ ದೆಹಲಿಗೆ ತೆರಳಲಿದ್ದಾರೆ.