ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ರಮೇಶ್ ಕುಮಾರ್ ಹಾಗೂ ಸುರೇಶ್ ಕುಮಾರ್
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಿಂದ ಕೆ. ರಮೇಶ್ ಕುಮಾರ್ ಆವರನ್ನು ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಬೆಂಗಳೂರು: ಮೇ. 25 ರಂದು ಸದನದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ಮತ ಸಾಬೀತು ಪಡಿಸಲಿದ್ದಾರೆ. ಆದರೆ ಅದಕ್ಕೂ ಮೊದಲು ಸದನದಲ್ಲಿ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಇನ್ನು ಈ ಸಂಬಂಧ ಇಂದು ಬೆಳಗ್ಗೆ ವಿಧಾನಸೌಧಕ್ಕೆ ತೆರಳಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ಬಿಜೆಪಿ ಪಕ್ಷದ ನಾಯಕರು ಕಾರ್ಯದರ್ಶಿಗೆ ನಾಮಪತ್ರ ಸಲ್ಲಿಸಿದ್ದಾರೆ.
ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಿಂದ ಕೆ. ರಮೇಶ್ ಕುಮಾರ್ ಆಯ್ಕೆ ಮಾಡಲಾಗಿದೆ. ಇಂದು ಅವರು ಡಿಸಿಎಂ ಡಾ. ಜಿ. ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಇನ್ನು ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಬಿಜೆಪಿಯಿಂದ ರಾಜಾಜಿ ನಗರದ ಶಾಸಕರಾಗಿರುವ ಸುರೇಶಕುಮಾರ್ ಕೂಡ ನಾಮಪತ್ರ ಸಲ್ಲಿಸಿದ್ದಾರೆ.
ಈ ಹಿಂದೆ ಸ್ಪೀಕರ್ ಆಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ಹಿರಿಯ ಮುತ್ಸದ್ದಿ ರಮೇಶ್ ಕುಮಾರ್ ಅವರು ಮತ್ತೆ ಆಯ್ಕೆ ಆಗುತ್ತಾರೆ ಎನ್ನುವುದು ನನ್ನ ವಿಶ್ವಾಸ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.