ಬೆಂಗಳೂರು: ಎಚ್.ಡಿ. ಕುಮಾರಸ್ವಾಮಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಾಲುಕ್ಯ ಸರ್ಕಲ್‌ನಿಂದ  ವಿಧಾನಸೌಧದ ವರೆಗೆ ಭದ್ರತೆ ಕೂಡಾ ಇಲ್ಲದೆ ನಡೆದುಕೊಂಡೇ ಬಂದಿದ್ದರು. ಈ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಬಳಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕಸಿವಿಸಿ ಉಂಟಾಗಿದೆ.



COMMERCIAL BREAK
SCROLL TO CONTINUE READING

ಕಾರ್ಯಕ್ರಮಕ್ಕೆ ಮುನ್ನ ಸುರಿದ ಭಾರೀ ಮಳೆಯಿಂದಾಗಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು, ಈ ವೇಳೆ ಆಗಮಿಸಿದ್ದ ಸಿಎಂ ಮಮತಾ ಬ್ಯಾನರ್ಜಿ ಅವರು ನಗರದ ಚಾಲುಕ್ಯ ಸರ್ಕಲ್‌ನಿಂದ ವಿಧಾನಸೌಧಕ್ಕೆ ಭದ್ರತೆ ಇಲ್ಲದೆ ನಡೆದುಕೊಂಡು ಬಂದಿದ್ದರು. ಭದ್ರತಾ ಲೋಪ ಹಾಗೂ ಪೋಲೀಸ್ ಇಲಾಖೆಯ ವೈಫಲ್ಯದ ಹಿನ್ನೆಲೆಯಲ್ಲಿ ರಾಜ್ಯ ಪೋಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಹಾಗೂ ಗುಪ್ತಚರ ಇಲಾಖೆ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಜತೆ ತಮ್ಮ ಜೆಪಿ ನಗರ ನಿವಾಸದಲ್ಲಿ ಇಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚರ್ಚೆ ನಡೆಸಿ, ಕರ್ತವ್ಯ ಲೋಪದ ಬಗ್ಗೆ ಸ್ಪಷ್ಟನೆ ನೀಡುವಂತೆ ತಿಳಿಸಿದ್ದಾರೆ.


ಅಲ್ಲದೆ, ಇನ್ನು ಮುಂದೆ ಹೊರಗಿನಿಂದ ರಾಜ್ಯಕ್ಕೆ ಬರುವ ಗಣ್ಯರಿಗಾಗಲಿ ಅಥವಾ ಸಾರ್ವಜನಿಕರಿಗಾಗಲಿ ಭದ್ರತೆ ವಿಷಯದಲ್ಲಿ ಯಾವುದೇ ಲೋಪ ಉಂಟಾಗದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ.