ಬಹಿರಂಗ ಚರ್ಚೆಯಲ್ಲಿ ಭಾಗವಹಿಸಲು ಯಡಿಯೂರಪ್ಪಗೆ ಸಿಎಂ ಸವಾಲು!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ.ಎಸ್.ಯಡಿಯೂರಪ್ಪ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.
ಬೆಂಗಳೂರು : ರಾಜ್ಯ ವಿಧಾನಸಭಾ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳ ನಾಯಕರು ಕರ್ನಾಟಕದಲ್ಲಿ ಬೀಡುಬಿಟ್ಟಿದ್ದು, ಭರ್ಜರಿ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಈ ಮಧ್ಯೆ, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ನಾಯಕರ ವಾಕ್ಸಮರ ಮುಂದುವರೆದಿದೆ.
ಕಾಂಗ್ರೆಸ್ ನಾಯಕರು ಈ ಹಿಂದೆ ಇದ್ದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿಯುತ್ತಿದ್ದರೆ, ಸ್ವತಃ ಪ್ರಧಾನಿ ಮೋದಿ ಅವರೇ, ಕರ್ನಾಟಕ ಸರ್ಕಾರವನ್ನು ಭ್ರಷ್ಟ ಸರ್ಕಾರ, ಡೀಲ್ ಸರ್ಕಾರ ಎಂದು ಆರೋಪಿಸುತ್ತಿದ್ದಾರೆ. ಹೀಗಾಗಿ ರಾಜಕೀಯ ವಲಯದಲ್ಲಿ ಆರೋಪ-ಪ್ರತ್ಯಾರೋಪಗಳ ಸಮರವೇ ನಡೆಯುತ್ತಿದೆ.
ಆದರೆ, ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಯಡಿಯೂರಪ್ಪ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. "ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಣ್ಣದ ಮಾತುಗಳಿಂದ, ವೃಥಾ ಆರೋಪ ಮಾಡುವ ಮೂಲಕ ಕರ್ನಾಟಕದ ಮತದಾರರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಆದರೆ ಸ್ಪರ್ಧೆ ಇರುವುದು ನನ್ನ ಮೋದಿ ವಿರುದ್ಧ ಅಲ್ಲ; ನನ್ನ ಮತ್ತು ನಿಮ್ಮ (ಯಡಿಯೂರಪ್ಪ) ನಡುವೆ! ಹಾಗಾಗಿ ಯಡಿಯೂರಪ್ಪ ಅವರನ್ನು ಒಂದೇ ವೇದಿಕೆಯಲ್ಲಿ ನನ್ನೊಂದಿಗೆ ಬಹಿರಂಗ ಚರ್ಚೆಗೆ ಆಹ್ವಾನಿಸುತ್ತಿದ್ದೇನೆ. ಇದನ್ನು ಯಡಿಯೂರಪ್ಪ ಸ್ವೀಕರಿಸುತ್ತಾರೆಯೇ? ಮೋದಿ ಅವರಿಗೂ ಸ್ವಾಗತ!" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಯಡಿಯೂರಪ್ಪ ಏನು ಹೇಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.