ಮೈಸೂರು: ಭಾರೀ ಕುತೂಹಲ ಮೂಡಿಸಿದ್ದ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹೀನಾಯ ಸೋಲು ಅನುಭವಿಸಿದ್ದಾರೆ. 


COMMERCIAL BREAK
SCROLL TO CONTINUE READING

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 24,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿರುವ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರು ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ. ಈ ಬಾರಿ ಚುನಾವಣೆಯಲ್ಲಿ 37,279 ಮತಗಳನ್ನು ಗಳಿಸಿದ ಸಿದ್ದರಾಮಯ್ಯ ವಿರುದ್ಧ ಜಿ.ಟಿ.ದೇವೇಗೌಡರು 61,351ಮತಗಳನ್ನು ಗಳಿಸಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುರುಬರು ಮತ್ತು ಒಕ್ಕಲಿಗ ಸಮುದಾಯ ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಕಳದ ಬಾರಿಯೂ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಜಿ.ಟಿ.ದೇವೇಗೌಡ ಈ ಬಾರಿ ಮುಖ್ಯಮಂತ್ರಿಯನ್ನೇ ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ. 


ಈ ಸಂದರ್ಭದಲ್ಲಿ ಎಎನ್ಐ ಜೊತೆ ಮಾತನಾಡಿರುವ ಜಿ.ಟಿ,ದೇವೇಗೌಡ ಅವರು, ಸಿದ್ದರಾಮಯ್ಯ ಅವರನ್ನು ಈ ಕ್ಷೇತ್ರದ ಜನತೆ ತಿರಸ್ಕರಿಸಿದ್ದಾರೆ. ಇತರರ ವಿರುದ್ಧ ಸಿದ್ದರಾಮಯ್ಯ ಅವರ ಹಿಡಿತವಿಲ್ಲದ ಮಾತುಗಳು ಮತ್ತು ಅವರ ಅಹಂ ದುರ್ವರ್ತನೆಯೇ ಅವರ ಸೋಲಿಗೆ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. 



ಚಾಮುಂಡೇಶ್ವರಿಯಲ್ಲಿ ಗೆಲುವು ಕಷ್ಟ ಎಂದು ಅರಿತಿದ್ದರೂ ಸ್ಪರ್ಧಿಸಿದ್ದ ಸಿದ್ದರಾಮಯ್ಯ
ಚುನಾವಣೆಗೂ ಮುನ್ನವೇ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಕಷ್ಟ ಎಂದು ಹಲವು ವರದಿಗಳು ಬಂದಿದ್ದರೂ ತಮ್ಮ ಪುತ್ರ ಯತೀಂದ್ರನನ್ನು ರಾಜಕಾರಣಕ್ಕೆ ಕರೆತರುವ ಉದ್ದೇಶದಿಂದ, ಈ ಹಿಂದೆ ಸ್ಪರ್ಧಿಸಿದ್ದ ವರುಣಾ ಕ್ಷೇತ್ರದಲ್ಲಿ ಮಗನಿಗೆ ಟಿಕೆಟ್ ಕೊಡಿಸಿ, ತಾವು ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಿದ್ದರು. ಅಲ್ಲದೆ, ಸೋಲಿನ ಭಯ ಇದ್ದ ಹೆನ್ನೆಲೆಯಲ್ಲಿ ಸಿದ್ದರಾಮಯ್ಯ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದರು.


ಸ್ನೇಹಿತರಾಗಿದ್ದ ಜಿ.ಟಿ.ದೇವೇಗೌಡ ಮತ್ತು ಸಿದ್ದರಾಮಯ್ಯ 
ಒಂದು ಕಾಲದಲ್ಲಿ ಸಿದ್ದರಾಮಯ್ಯ ಜೆಡಿಎಸ್ ಪಕ್ಷದಲ್ಲಿ ಇದ್ದ ಸಂದರ್ಭದಲ್ಲಿ ಜಿ.ಟಿ.ದೇವೇಗೌಡ -ಸಿದ್ದರಾಮಯ್ಯ ಸ್ನೇಹಿತರಾಗಿದ್ದವರು. 1983ರಿಂದ ಒಟ್ಟಿಗೆ ಇದ್ದ ಅವರು ಬೇರೆಯಾಗಿ 3 ದಶಕಗಳು ಕಳೆದಿವೆ. ಈಗ ಅವರು ಬೇರೆ-ಬೇರೆ ಪಕ್ಷದಲ್ಲಿದ್ದು, ಈ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖಾಮುಖಿಯಾಗಿ ಚುನಾವಣಾ ಅಖಾಡಕ್ಕಿಳಿದಿದ್ದರು.