ಮಳವಳ್ಳಿ : ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಉಳಿದಿರುವ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದು ನರೇಂದ್ರ ಮೋದಿ ಅವರು ಬಹಳ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅವರಿಗೆ ಮತ ಹಾಕಿದರೆ ತಮಗೆ ಮತ ಹಾಕಿದಂತೆ ಎಂದು ಹೇಳಿದ್ದಾರೆ!


COMMERCIAL BREAK
SCROLL TO CONTINUE READING

ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನರೇಂದ್ರ ಸ್ವಾಮಿ ಪರ ಪ್ರಚಾರ ಮಾಡಿದ ಸಿದ್ದರಾಮಯ್ಯ ಅವರು, ಭಾಷಣ ಮಾಡುತ್ತಾ ನರೇಂದ್ರ ಸ್ವಾಮಿಗೆ ಮತ ಹಾಕಿ ಎಂದು ಹೇಳುವ ಬದಲು, ನರೇಂದ್ರ ಮೋದಿಗೆ ಮತ ಹಾಕಿ ಎಂದು ಹೇಳಿ ನಾಲಿಗೆ ಕಚ್ಚಿಕೊಳ್ಳುವಂತಾಯಿತು. ನರೇಂದ್ರ ಮೋದಿಗೆ ಮತ ಹಾಕಿ ಎಂದು ಹೇಳುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಜನ ಶಿಳ್ಳೆ ಹಾಕಿ ಹೋ ಎಂದು ಕೂಗಲಾರಂಭಿಸಿದರು. 


ಅಷ್ಟಕ್ಕೇ ಸುಮ್ಮನಿರದ ಸಿದ್ದರಾಮಯ್ಯ ಅವರು, ಮುಂದುವರೆದು ಮಾತನಾಡುತ್ತ, ನರೇಂದ್ರ ಮೋದಿ ಮಿತ್ಯ, ನರೇಂದ್ರ ಸ್ವಾಮಿ ಸತ್ಯ! ಎನ್ನುತ್ತಾ, ಮತ್ತೆ ನರೇಂದ್ರ ಮೋದಿಗೆ ಮತ ನೀಡಿದರೆ ನನಗೆ ನೀಡಿದಂತೆ ಎಂದು ಹೇಳಿ ಎಡವಟ್ಟು ಮಾಡಿಕೊಂಡರು. ತಕ್ಷಣ ಅಲ್ಲೀ ಪಕ್ಕದಲ್ಲಿದ್ದವರು ಮೋದಿ ಅಲ್ಲ... ಸ್ವಾಮಿ ಅಂತ ಸಿದ್ದರಾಮಯ್ಯ ಅವರಿಗೆ ಹೇಳಿದಾಗ, ತಪ್ಪು ತಿದ್ದಿಕೊಂಡು ನರೇಂದ್ರ ಸ್ವಾಮಿಗೆ ಮತ ಹಾಕಿ ಎಂದರಲ್ಲದೆ, 'ಮಳವಳ್ಳಿಗೆ ನರೇಂದ್ರ ಸ್ವಾಮಿ, ಮೋದಿ ಆ ಕಡೆ ಗುಜರಾತಿಗೆ’ ಎಂದರು. ಭಾಷಣದುದ್ದಕ್ಕೂ ನಾಲ್ಕು ಬಾರಿ ಹೀಗೇ ತಪ್ಪು ಮಾಡಿ, ಸಿದ್ದರಾಮಯ್ಯ ಮೋದಿ ಜಪ ಮಾಡಿದರು.


ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಈಗಲಾದರೂ ಸಿದ್ದರಾಮಯ್ಯ ಸತ್ಯ ಒಪ್ಪಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಸಿದ್ದರಾಮಯ್ಯ ಭಾಷಣದ ವೀಡಿಯೋ ಇಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.