ಬಾದಾಮಿ : ಬಳ್ಳಾರಿ ರೆಡ್ಡಿ ಸಹೋದರರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್'ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ, 'ಬಾದಾಮಿಯಲ್ಲಿ ಸಿದ್ದರಾವಣ ಸಂಹಾರಕ್ಕೆ ಶ್ರೀರಾಮುಲು ಆಗಮಿಸಿದ್ದಾರೆ ಎಂದು ಟಾಂಗ್ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಇಂದಿಲ್ಲಿ ಶ್ರೀರಾಮುಲು ಪರ ಪ್ರಚಾರ ಕೈಗೊಂಡಿರುವ ಜನಾರ್ಧನರೆಡ್ಡಿ, ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೈಸೂರಿನಲ್ಲಿ ಚಾಮುಂಡೇಶ್ವರಿ ಕರುಣಿಸುವುದಿಲ್ಲ; ಮಹಿಷಾಸುರನ ಮರ್ಧನ ಆಗುತ್ತೆ ಅಂತ ಹೆದರಿ ಸಿದ್ದರಾಮಯ್ಯ ಬಾದಾಮಿಗೆ ಬಂದಿದ್ದಾರೆ. ಆದರೆ ಬಾದಾಮಿಯಲ್ಲಿ ತಾಯಿ ಬನಶಂಕರಿ ಮತ್ತೊಬ್ಬ ಶ್ರೀರಾಮನನ್ನು ತಯಾರು ಮಾಡಿದ್ದಾಳೆ. ಈ ಹಿಂದೆ ಯಡಿಯೂರಪ್ಪ ಅವರು ಸಿದ್ದರಾಮಯ್ಯ ಬಗ್ಗೆ ಒಂದು ಮಾತು ಹೇಳಿದ್ದರು. ಅವರು ಸಿದ್ದರಾಮಯ್ಯ ಅಲ್ಲ ಸಿದ್ದ 'ರಾವಣ' ಎಂದು. ಹಾಗಾಗಿ ಆ ರಾವಣನ ಸಂಹಾರಕ್ಕೆ ಭಾರತೀಯ ಜನತಾಪಕ್ಷ ಶ್ರೀರಾಮುಲು ಅವರನ್ನು ಆಯ್ಕೆ ಮಾಡಿದೆ. ಚಾಮುಂಡೇಶ್ವರಿಯಲ್ಲಿ ಮಹಿಷಾಸುರನ ಸಂಹಾರ ಆಗುವಂತೆ ಬಾದಾಮಿಯಲ್ಲಿ ರಾವಣನ ಸಂಹಾರವಾಗುತ್ತೆ" ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. 


"ರೆಡ್ಡಿ ಸಹೋದರರು ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ರಾಜ್ಯದ ಗಣಿ ಸಂಪತ್ತನ್ನು ಲೂಟಿ ಮಾಡಿದ್ದರು. ಇದೀಗ ಇವರ ರಕ್ಷಣೆಗೆ ಮೋದಿ ಸರ್ಕಾರ ನಿಂತಿದೆ. ರಾಜ್ಯದ ಸುಮಾರು 35ಸಾವಿರ ಕೋಟಿ ಗಣಿ ಸಂಪತ್ತು ಲೂಟಿ ಮಾಡಿದ ರೆಡ್ಡಿ ಸಹೋದರರಿಗೆ ಬಿಜೆಪಿ ಟಿಕೆಟ್ ನಿಡುವ ಮುಲ್ಕಾ ಕರ್ನಾಟಕಕ್ಕೆ, ಕನ್ನಡಿಗರಿಗೆ ದ್ರೋಹ ಬಗೆದಿದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಿಗ್ಗೆ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. 



ಒಂದೆಡೆ, ಸಿದ್ದರಾಮಯ್ಯ ಅವರು ತಾವು ಬಾದಾಮಿ ಹಾಗೂ ಚಾಮುಂಡೇಶ್ವರಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದರೆ, ಇತರ ಪಕ್ಷಗಳು ಸಿದ್ದರಾಮಯ್ಯ ಅವರು ಸೋಲಿನ ಭಯದಿಂದ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಟೀಕೆಗಳ ಸುರಿಮಳೆಯನ್ನೇ ಮಾಡುತ್ತಿವೆ. ಮತ್ತೊಂದೆಡೆ, ಜನಾರ್ಧನ ರೆಡ್ಡಿಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರೇ ಹೇಳಿದ್ದರೂ ಜನಾರ್ಧನ ರೆಡ್ಡಿ ಬಿಜೆಪಿ ಪರವಾಗಿ ನಿಂತು ಪ್ರಚಾರದಲ್ಲಿ ತೊಡಗುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.