ನವದೆಹಲಿ: ನಾಳೆ (ಮೇ.19) ರಂದು ಸಂಜೆ 4 ಗಂಟೆಗೆ ಬಹುಮತ ಸಾಬೀತು ಪಡಿಸಲು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದುವರಿಸಿದ ಸುಪ್ರೀಂಕೋರ್ಟಿನ ಎ.ಕೆ. ಸಿಕ್ರಿ ನೇತೃತ್ವದ ತ್ರಿಸದಸ್ಯ ಪೀಠ ಯಾರಿಗೂ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ನಾಳೆಯೇ ವಿಶ್ವಾಸಮತ ಯಾಚನೆ ಮಾಡಬೇಕು ಎಂದು ಅಂತಿಮ ಆದೇಶದಲ್ಲಿ ತಿಳಿಸಿದೆ. 


COMMERCIAL BREAK
SCROLL TO CONTINUE READING

ವಾದ-ಪ್ರತಿವಾದಗಳನ್ನು ಆಲಿಸಿದ ಸುಪ್ರೀಂಕೋರ್ಟ್ ರಾಜ್ಯಪಾಲರ ನಿರ್ಣಯದ ಬಗ್ಗೆ ವಿಸ್ತೃತ ವಿಚಾರಣೆ ನಡೆಸಬೇಕೆ? ಅಥವಾ ನಾಳೆಯೇ ವಿಶ್ವಾಸಮತ ಯಾಚನೆಗೆ ಸೂಚಿಸಬೇಕೆ? ಎಂದು ಅರ್ಜಿದಾರರಿಗೆ(ಕಾಂಗ್ರೆಸ್–ಜೆಡಿಎಸ್‌ ‘ಮೈತ್ರಿ’ ವಕೀಲರ) 2 ಆಯ್ಕೆ ನೀಡಿತು. 


ನಾಳೆಯೇ ವಿಶ್ವಾಸಮತ ಯಾಚಿಸಲು ಸಿದ್ದ ಎಂದು ಕಾಂಗ್ರೆಸ್–ಜೆಡಿಎಸ್‌ ‘ಮೈತ್ರಿ’ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ಕಪಿಲ್ ಸಿಬಾಲ್ ಪೀಠಕ್ಕೆ ತಿಳಿಸಿದರು. ಆದರೆ, ನಾಳೆಯೇ ವಿಶ್ವಾಸ ಮತ ಯಾಚನೆಗೆ ಬಿಜೆಪಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ವಿರೋಧ ವ್ಯಕ್ತಪಡಿಸಿದರು. ನಾಳೆಯೇ ಬಹುಮತ ಸಾಬೀತು ಪಡಿಸಲು ಸಾಧ್ಯವಿಲ್ಲ. ಯಡಿಯೂರಪ್ಪನವರಿಗೆ ಸಮಯಾವಕಾಶ ಬೇಕು ಎಂಬ ಮುಕುಲ್ ರೋಹಟಗಿ ಮನವಿಯನ್ನು ತ್ರಿಸದಸ್ಯ ಪೀಠ ತಿರಸ್ಕರಿಸಿತು.


ಸುಪ್ರೀಂಕೋರ್ಟ್ ಆದೇಶದಲ್ಲಿ ಏನಿದೆ?


  • ಬಹುಮತ ಸಾಬೀತಾಗುವ ತನಕ ಮುಖ್ಯಮಂತ್ರಿ ಯಡಿಯೂರಪ್ಪ ಯಾವುದೇ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವಂತಿಲ್ಲ.

  • ವಿಶ್ವಾಸಮತ ಯಾಚನೆಗೂ ಮೊದಲು ಆಂಗ್ಲೋ ಇಂಡಿಯನ್ ನಾಮ ನಿರ್ದೇಶನ ಅಥವಾ ನೇಮಕ ಬೇಡ.

  • ಎಲ್ಲಾ ಶಾಸಕರೂ ಸದನದಲ್ಲಿ ಹಾಜರಿರುವಂತೆ ಡಿಜಿಪಿಗೆ ಆದೇಶಿಸುತ್ತೇವೆ. ವಿಶ್ವಾಸಮತಯಾಚನೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಡಿಜಿಪಿಗೆ ಆದೇಶಿಸುತ್ತೇವೆ.

  • ಸಿಸಿಟಿವಿ ಕಣ್ಗಾವಲಿನಲ್ಲಿ ಬಹುಮತ ಸಾಬೀತು ಪಡಿಸಬೇಕು.

  • ಗುಪ್ತ ಮತದಾನಕ್ಕಾಗಿ ಸರ್ಕಾರದ ವಿನಂತಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.