ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸಿನಿಮಾ ಮತ್ತು ಕಿರುತೆರೆ ನಟ, ನಟಿಯರ ಚಲನಚಿತ್ರ ಮತ್ತು ಸಿನಿಮಾ ಪ್ರಸಾರವನ್ನು ಡಿಡಿ ವಾಹಿನಿಯಲ್ಲಿ ಮಾತ್ರ ನಿರ್ಬಂಧಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸಿನಿಮಾ ನಟ, ನಟಿಯರ ಕಾರ್ಯಕ್ರಮಗಳ ಪ್ರಸಾರ ನಿರ್ಬಂಧಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಿನಿಮಾ ನಟ, ನಟಿಯರ ಕಾರ್ಯಕ್ರಮಗಳು ಮತ್ತು ಸಿನಿಮಾಗಳ ಪ್ರಸಾರಕ್ಕೆ ಸರ್ಕಾರಿ ಸ್ವಾಮ್ಯದ ಡಿಡಿ ವಾಹಿನಿಯಲ್ಲಿ ಮಾತ್ರ ನಿರ್ಬಂಧ ಹೇರಲಾಗಿದ್ದು, ಖಾಸಗಿ ವಾಹಿನಿಗಳಲ್ಲಿ ಕಾರ್ಯಕ್ರಮ ಪ್ರಸಾರಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದಿದ್ದಾರೆ. 


ಇತ್ತೀಚೆಗಷ್ಟೇ ಯಶವಂತಪುರ ಬಿಜೆಪಿ ಅಭ್ಯರ್ಥಿ, ನಟ ಜಗ್ಗೇಶ್ ಅಭಿನಯದ ಸಿನಿಮಾಗಳು ಮತ್ತು ರಿಯಾಲಿಟಿ ಶೋಗಳನ್ನು ನಿರ್ಬಂಧಿಸುವಂತೆ ಯಶವಂತಪುರ ಕಾಂಗ್ರೆಸ್ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. 


ನಟ ಆಗಿರುವ ಜಗ್ಗೇಶ್ ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಖಾಸಗಿ ಚಾನೆಲ್ ಗಳು ಹಾಗೂ ಕೇಬಲ್ ನೆಟ್ ವರ್ಕ್ ಗಳು ಅವರ ಸಿನಿಮಾ ಹಾಗೂ ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡುತ್ತಿದೆ. ಇದು ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತಾಗುತ್ತದೆ. ಹಾಗಾಗಿ ಅವುಗಳು ಮತದಾರರ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಭಾವ ಬಿರುವುದರಿಂದ ಆ ಕಾರ್ಯಕ್ರಮಗಳನ್ನು ನಿರ್ಬಂಧಿಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಅವರು, ಡಿಡಿ ವಾಹಿನಿಯಲ್ಲಿ ಮಾತ್ರ ನಿರ್ಬಂಧ ಹೇರಲಾಗಿದೆ ಎಂದಿದ್ದಾರೆ.