ಇಂದು ಬೆಳಿಗ್ಗೆ ಮಹತ್ವದ ಜೆಡಿಎಸ್ ಶಾಸಕಾಂಗ ಸಭೆ
ಇಂದು ಬೆಳಿಗ್ಗೆ 10ಕ್ಕೆ ಎಲ್ಲ ಶಾಸಕರೊಂದಿಗೆ ಕುಮಾರಸ್ವಾಮಿ ಮೀಟಿಂಗ್
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಬಹುಮತ ಗಳಿಸುವಲ್ಲಿ ಯಾವುದೇ ಪಕ್ಷ ಸಫಲವಾಗಿಲ್ಲ. ಏತನ್ಮಧ್ಯೆ ರಾಜದಲ್ಲಿ ಕಮಲ ಅರಳುವುದನ್ನು ತಡೆಹಿಡಿಯಲ್ಲೂ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿರುವ ಜೆಡಿಎಸ್ ಗೆ ತನ್ನ ಬೆಂಬಲ ವ್ಯಕ್ತಪಡಿಸಿದೆ. ಎರಡೂ ಪಕ್ಷಗಳ ನಾಯಕರು ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ತಮ್ಮ ಹಕ್ಕು ಮಂಡಿಸಿದ್ದಾರೆ.
ನಂತರ ಕಳೆದ ರಾತ್ರಿ ನಗರದ ಅಶೋಕ ಹೋಟೆಲ್ ನಲ್ಲಿ ಕಾಂಗ್ರೆಸ್, ಜೆಡಿಎಸ್ ನಾಯಕರು ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ಮುಖ್ಯಮಂತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ, ನಮಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಜೆಡಿಎಸ್ ಪಕ್ಷ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದೆ. ರಾಜ್ಯದಲ್ಲಿ ಯಾವ ಆಪರೇಷನ್ ಕಮಲವೂ ನಡೆಯುವುದಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಚುನಾವಣಾ ಪ್ರಚಾರದ ವೇಳೆ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೆಡಿಎಸ್ ಅನ್ನು ಬಿ ಟೀಂ ಎಂದು ಕರೆದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಎಚ್ಡಿಕೆ ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪ ಮಾಡೋದು ಸಹಜ, ಈ ವಿಚಾರ ಈಗ ಅಪ್ರಸ್ತುತ ಎಂದಿದ್ದಾರೆ.
ಇಂದು ಬೆಳಿಗ್ಗೆ 10:00 ಗಂಟೆಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು ಜೆಡಿಎಸ್ ಶಾಸಕಾಂಗ ಸಭೆ ನಡೆಯಲಿದೆ. ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಶಾಸಕಾಂಗ ಸಭೆಗೆ ಎಲ್ಲಾ ನೂತನ ಶಾಸಕರನ್ನು ಆಹ್ವಾನಿಸಿರುವ ಹೆಚ್ಡಿಕೆ, ಶಾಸಕರ ಜೊತೆ ಚರ್ಚೆ ಬಳಿಕ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಹಾಗೂ ಮೈತ್ರಿ ಸರ್ಕಾರದ ಕುರಿತು ಶಾಸಕರ ಬಳಿ ಅಭ್ರಿಪಾಯ ಹಂಚಿಕೊಳ್ಳಲಿದ್ದಾರೆ. ಅಲ್ಲದೆ, ಈ ಸಭೆಯಲ್ಲಿ ರೆಸಾರ್ಟ್ ಗೆ ತೆರಳುವ ಬಗ್ಗೆ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಸರ್ಕಾರ ರಚನೆ ಸಂಬಂಧ ಕಳೆದ ರಾತ್ರಿ ಪಕ್ಷದಲ್ಲಿನ ಕೆಲ ಹಿರಿಯ ಶಾಸಕರೊಂದಿಗೆ ಮಾತ್ರ ಚರ್ಚೆ ನಡೆಸಿರುವ ಎಚ್ಡಿಕೆ, ಜಿಟಿ ದೇವೇಗೌಡ, ಸಾರಾ ಮಹೇಶ್ ಸೇರಿದಂತೆ ಕಲವೇ ಕೆಲವರ ಜೊತೆ ಗೌಪ್ಯ ಸಮಾಲೋಚನೆ ನಡೆಸಿದ್ದು, ಇಂದಿನ ಸಭೆಯಲ್ಲಿ ಯಾವ ರೀತಿಯ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.