ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ಆರಂಭ: ಮತಗಟ್ಟೆಯಲ್ಲಿ ಮೊದಲ ಮತ ಚಲಾಯಿಸಿದ ಬಿ.ಎಸ್. ಯಡಿಯೂರಪ್ಪ
ಶಿಕಾರಿಪುರ ಕ್ಷೇತ್ರದ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಪುತ್ತೂರಿನಲ್ಲಿ ಮತ ಚಲಾಯಿಸಿದ ಕೇಂದ್ರ ಸಚಿವ ಸದಾನಂದಗೌಡ.
ಬೆಂಗಳೂರು: ಸೂಕ್ತ ಭದ್ರತೆಯ ಅಡಿಯಲ್ಲಿ ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ. ಒಟ್ಟು 224 ವಿಧಾನಸಭಾ ಕ್ಷೇತ್ರಗಳಲ್ಲಿ 222 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. ಶಿಕಾರಿಪುರ ಕ್ಷೇತ್ರದಿಂದ ಕಣಕ್ಕಿಳಿಡಿರುವ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಶಿಕಾರಿಪುರ ಕ್ಷೇತ್ರದ ಮತಗಟ್ಟೆಯಲ್ಲಿ ಮೊದಲ ಮತವನ್ನು ಹಾಕಿದರು.
ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮತಗಟ್ಟೆಗೆ ತೆರಳಿದ ಬಿಎಸ್ವೈ, ತಮ್ಮ ಮನೆಯ ಸಮೀಪದಲ್ಲಿಯೇ ಇರುವ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಬಳಿಕ ಮಾತನಾಡಿದ ಅವರು ಸಿದ್ದರಾಮಯ್ಯ ಸರ್ಕಾರದಿಂದ ಜನರು ಬೇಸತ್ತಿದ್ದಾರೆ. ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ ಎಂದು ಹೇಳಿದರು.
ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಸದಾನಂದ ಗೌಡ ಪುತ್ತೂರಿನಲ್ಲಿ ಮತ ಚಲಾಯಿಸಿದ್ದಾರೆ. ಈ ಬಾರಿ ಮತದಾನ ಶೇಕಡಾವಾರು ಹೆಚ್ಚಳವಾಗಲಿದೆ ಎಂದ ಕೇಂದ್ರ ಸಚಿವರು, "ಈ ಬಾರಿ ಮತದಾನದಲ್ಲಿ ಹೆಚ್ಚಾಗುವುದು ಕರ್ನಾಟಕದ ಸಿದ್ದರಾಮಯ್ಯ ಸರ್ಕಾರವನ್ನು ತೆಗೆದುಹಾಕಲು ಜನರು ಬಯಸುತ್ತಾರೆ" ಎಂದರು.