ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ವಿವಿಪ್ಯಾಟ್!
ಈ ಬಾರಿಯ ಚುನಾವಣೆಯಲ್ಲಿ ಇವಿಎಂ ಜೊತೆಗೆ ವಿವಿಪ್ಯಾಟ್(ಮತ ಖಾತರಿ ಯಂತ್ರ) ಇರಲಿದೆ.
ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ವಿವಿಪ್ಯಾಟ್ ಬಳಕೆ ಮಾಡುವ ಕುರಿತು ಚುನಾವಣಾ ಆಯೋಗ ನಿರ್ಧರಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಇವಿಎಂ ಜೊತೆಗೆ ವಿವಿಪ್ಯಾಟ್(ಮತ ಖಾತರಿ ಯಂತ್ರ) ಇರಲಿದೆ.
ವಿದ್ಯುನ್ಮಾನ ಮತಯಂತ್ರಗಳ ಬಗೆಗಿನಸಂದೇಹ ನಿವಾರಿಸುವ ಸಲುವಾಗಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿವಿಪ್ಯಾಟ್ ಗಳನ್ನು ಬಳಸಲಾಗುತ್ತಿದೆ. ಇವಿಎಂ ನಲ್ಲಿ ಅಭ್ಯರ್ಥಿಗಳ ಭಾವಚಿತ್ರ ಇರಲಿದ್ದು, ಇದರ ಸಹಾಯದಿಂದ ಮತದಾರರು ಚಲಾಯಿಸಿದ ಮತವು ಯಾವ ಅಭ್ಯರ್ಥಿಗೆ ಮತ್ತು ಚಿಹ್ನೆಗೆ ಚಲಾವಣೆಯಾಗಿದೆ ಎಂದು ವಿವಿಪ್ಯಾಟ್ ಮುದ್ರಿತ ಪತ್ರಿಕೆಯ ಮೂಲಕ ತಿಳಿಯಬಹುದು.
ಏನಿದು ವಿವಿಪ್ಯಾಟ್?
ವಿವಿಪ್ಯಾಟ್ ಎಂದರೆ ಮತ ಖಾತರಿಪಡಿಸುವ ವೋಟರ್ ವೆರಿಫೈಡ್ ಪೇಪರ್ ಆಡಿಟ್(ವಿವಿಪ್ಯಾಟ್). ಮತದಾರರು ತಾವು ಆಯ್ಕೆ ಮಾಡಬೇಕಿರುವ ವ್ಯಕ್ತಿಯ ಹೆಸರಿನ ಮುಂದಿನ ಗುಂಡಿ ಒತ್ತಿದ ನಂತರ ಮತ ಯಂತ್ರದ ಪಕ್ಕದಲ್ಲೇ ಇಡಲಾಗುವ ವಿವಿಪ್ಯಾಟ್(ಮತ ಖಾತರಿ ಯಂತ್ರ) ಮೂಲಕ ಅಭ್ಯರ್ಥಿಯ ಹೆಸರಿನಲ್ಲಿ ಮುದ್ರಿತವಾದ ಚೀಟಿ ಮತದಾನದ ಪೆಟ್ಟಿಗೆಯಲ್ಲಿ ಬೀಳುತ್ತದೆ. ಇದರಿಂದ ಮತದಾರರು ತಾವು ಯಾವ ಅಭ್ಯರ್ಥಿಗೆ ಮತದಾನ ಮಾಡಿದ್ದೇವೆ ಎಂಬ ಸ್ಪಷ್ಟ ಮಾಹಿತಿ ಪಡೆಯಬಹುದಾಗಿದೆ.