ಚಾಮರಾಜನಗರ : ಏ... ಸಿದ್ದರಾಮಯ್ಯ, ಲೋಕಾಯುಕ್ತ ಬಲಬಡಿಸುತ್ತೇನೆ ಅಂತ ಪ್ರಣಾಳಿಕೆಯಲ್ಲಿ ಹಾಕಿದ್ದೀಯ. ಹಾಗಾದ್ರೆ ಈ ಐದು ವರ್ಷಗಳ ಕಾಲ ಕತ್ತೆ ಕಾಯ್ತಿದ್ರಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲೇ‌ ಪ್ರಶ್ನೆ ಹಾಕಿದ್ದಾರೆ.


COMMERCIAL BREAK
SCROLL TO CONTINUE READING

ಚಾಮರಾಜನಗರದ ಸಂತೇಮರಹಳ್ಳಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುತ್ತೇವೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಸಿದ್ದರಾಮಯ್ಯ ಅವರ ಲಜ್ಜೆಗೆಟ್ಟ ಹೇಳಿಕೆ. ‘ಪ್ರಧಾನಿ ಮೋದಿಯನ್ನು ಟೀಕೆ ಮಾಡುವುದನ್ನು ನಿಲ್ಲಿಸಿ’. ‘ಐದು ವರ್ಷದಿಂದ ನೀವು ಕತ್ತೆ ಕಾಯುತ್ತಿದ್ರಾ’, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊರಗಿನವರು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ರಾಹುಲ್ ಗಾಂಧಿ ಏನು ಇವರ ಚಿಕ್ಕಮ್ಮನ ಮಗನೇ? ಎಂದು ಯಡಿಯೂರಪ್ಪ ಪ್ರಶ್ನಿಸಿದರಲ್ಲದೆ, ಕರ್ನಾಟಕವನ್ನು ಎಟಿಎಂ ಮಾಡಿಕೊಂಡು, ಜನರ ತೆರಿಗೆ ಹಣವನ್ನು ಲೂಟಿ ಮಾಡಿ, ಕಾಂಗ್ರೆಸ್ ಪಕ್ಷಕ್ಕೆ ಫಂಡ್ ಆಗಿ ಬಳಕೆ ಮಾಡಿಕೊಂಡು ರಾಜಕೀಯ ದೊಂಬರಾಟ ಆಡುತ್ತಿದೆ ಎಂದು ಆರೋಪಿಸಿದರು. 



ಉತ್ತರಪ್ರದೇಶ, ಮಹಾರಾಷ್ಟ್ರದ ಮಾದರಿಯಲ್ಲಿ ಇಲ್ಲೂ ಸಾಲ ಮನ್ನಾ ಮಾಡಲಾಗುತ್ತದೆ. ಆರ್ಥಿಕ ಪರಿಸ್ಥಿತಿಯನ್ನು ಆಧರಿಸಿ ಸಾಲ ಮನ್ನಾ ಮಾಡಲಾಗುತ್ತದೆ. ನೀರಾವರಿ ಯೋಜನೆಗೆ 1 ಲಕ್ಷ ಕೋಟಿಗೂ ಹೆಚ್ಚು ಹಣ ಮೀಸಲಿಡಲು ತೀರ್ಮಾನಿಸಲಾಗಿದೆ. ರೈತರು ಬೆಳೆದ ಬೆಳೆಗೆ ಒಂದೂವರೆ ಪಟ್ಟು ಬೆಂಬಲ ಬೆಲೆ ನೀಡಿ, ರೈತರ ಆದಾಯ ಹೆಚ್ಚಿಸಲು ಮೋದಿ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.


ಈ ಬಾರಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಗಳು ಸ್ಪರ್ಧಿಸುತ್ತಿದ್ದಾರೆ. ನಾವು ಬಹುಮತ ಪಡೆಯುತ್ತೇವೆ. ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆ ಮೈತ್ರಿ ಇಲ್ಲ. ಮೇ 3 ಅಥವಾ ಮೇ 4 ರಂದು ನಾವು ಚುಣಾವಣೆ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಅಂದರಿಂದ 4% ಮತ ಹೆಚ್ಚಾಗಲಿದೆ. ಚುನಾವಣಾ ಪ್ರಣಾಳಿಕೆ ನೋಡಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ನೀವೆಲ್ಲರೂ ವಿಜಯೋತ್ಸವ ಆಚರಿಸಬೇಕು. ಪಕ್ಷದ ಕಾರ್ಯಕರ್ತರು ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು 12 ದಿನ ಕೆಲಸ ಮಾಡಿ. 12 ದಿನದ ಬಳಿಕ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಲಿದೆ. ರಾಜ್ಯದ ಅಭಿವೃದ್ಧಿಗೆ ಬದ್ಧವಾಗಿದ್ದೇನೆ ಎಂದು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.