ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜಕೀಯ ಪಕ್ಷಗಳು ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದ್ದು, ಬಿಜೆಪಿ ಇಂದು ಶಾಸಕಾಂಗ ಪಕ್ಷದ ಸಭೆ ನಡೆಸಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದೆ. 


COMMERCIAL BREAK
SCROLL TO CONTINUE READING

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, "ನನ್ನನ್ನು ಶಾಸಕಾಂಗ ಪಕ್ಷದ  ನಾಯಕನಾಗಿ ಆಯ್ಕೆ ಮಾಡಿದ್ದಾರೆ. ಆ ಪ್ರತಿಯನ್ನು ರಾಜ್ಯಪಾಲರಿಗೆ ಕೊಟ್ಟು ಆದಷ್ಟು ಬೇಗ ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿದ್ದೇನೆ. ರಾಜ್ಯಪಾಲರು ನನ್ನ ಮನವಿಯನ್ನು ಅಂಗೀಕರಿಸಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡುತ್ತಾರೆ ಎಂಬ ಭರವಸೆ ಇದೆ. ರಾಜ್ಯಪಾಲರಿಂದ ಪತ್ರ ಬಂದ ಕೂಡಲೇ ಮುಖ್ಯಮಂತ್ರಿ ಆಗುವ ಬಗ್ಗೆ ತಿಳಿಸುತ್ತೇನೆ" ಎಂದು ಯಡಿಯೂರಪ್ಪ ಹೇಳಿದರು. 


ಸಭೆಗೂ ಮುನ್ನ ಮಾತನಾಡುತ್ತಾ, ಜನ ಬಿಜೆಪಿಗೆ ಆಶೀರ್ವಾದ ನೀಡಿದ್ದಾರೆ. ನಾನು ನಾಳೆಯೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು. ಕಾಂಗ್ರೆಸ್ ಪಕ್ಷ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ ಎಂದು ಯಡಿಯೂರಪ್ಪ ಆರೋಪಿಸಿದರು.