ಬೆಂಗಳೂರು: ಕಳೆದ 2 ವರ್ಷಗಳಿಂದ ಕೋವಿಡ್ ಹಾಗೂ ಲಾಕ್‌ಡೌನ್ ಕಾರಣದಿಂದಾಗಿ ಮಾವಿನ ಹಣ್ಣಿನ ಸೀಸನ್ ಬಂದಿದ್ದೂ ಗೊತ್ತಾಗಲಿಲ್ಲ, ಹೋಗಿದ್ದೂ ಗೊತ್ತಾಗಲಿಲ್ಲ. ಮಾವಿನ ವ್ಯಾಪಾರವನ್ನೇ ನಂಬಿಕೊಂಡಿದ್ದ ವ್ಯಾಪಾರಿಗಳಿಗಂತೂ 2 ವರ್ಷ ನರಕ ತೋರಿಸಿತ್ತು. ಆದ್ರೆ ಈ ವರ್ಷ ವ್ಯಾಪಾರ ಚೆನ್ನಾಗಿ ಆಗುತ್ತೆ ಅಂದುಕೊಂಡಿದ್ದ ವ್ಯಾಪಾರಿಗಳಿಗೆ ಬೇಸರ ಮೂಡಿದೆ. ಯಾಕಂದ್ರೆ ಕೋವಿಡ್, ಬ್ಲಾಕ್ ಫಂಗಸ್ ಸೇರಿದಂತೆ ಎಲ್ಲ ವೈರಸ್‌ಗಳ ಅಬ್ಬರ ಕ್ಷೀಣಿಸಿರೋದು ಎಷ್ಟು ನಿಜವೋ, ಮಾವಿನ ಹಣ್ಣಿನ ಇಳುವರಿಯೂ ಕ್ಷೀಣಿಸಿದೆ ಅನ್ನೋದು ಕೂಡ ಅಷ್ಟೇ ನಿಜವಾಗಿದೆ. ಅಕಾಲಿಕ ಮಳೆ ಹಾಗೂ ಮಾವಿನ ಮರಕ್ಕೆ ಬರೋ ಕೆಲ ರೋಗ, ಇನ್‌ಫೆಕ್ಷನ್‌ಗಳಿಂದ ಫಸಲಿನ ಪ್ರಮಾಣವೇ ತಗ್ಗಿ ಹೋಗಿದೆ. ಹಾಗಾಗಿಯೇ ಹಣ್ಣುಗಳ ರಾಜ ಎಂದೇ ಖ್ಯಾತಿ ಪಡೆದಿರುವ ಮಾವಿನ ಹಣ್ಣಿನ ದರ ಗಗನಮುಖಿಯಾಗಿದೆ. 


COMMERCIAL BREAK
SCROLL TO CONTINUE READING

ಶ್ರೀನಿವಾಸಪುರದಿಂದಲೂ ಬಾರದ ಮಾವಿನ ಹಣ್ಣು:
ಮಾವಿನ ಹಣ್ಣಿನ ದರ ಏರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ವ್ಯಾಪಾರಿಗಳು ಇಷ್ಟು ವರ್ಷಗಳ ಕಾಲ ಆಂಧ್ರಪ್ರದೇಶ, ಶ್ರೀನಿವಾಸಪುರ ಹಾಗೂ ಚನ್ನಪಟ್ಟಣದಿಂದ ಹಣ್ಣಿನ ಸಪ್ಲೈ ಆಗ್ತಿತ್ತು. ಯಾವ ಮಂಡಿಯಲ್ಲಿ ದರ ಕಡಿಮೆ ಇರುತ್ತೋ, ಅಲ್ಲಿಂದ ತಂದು ಮಾರಾಟ ಮಾಡಲಾಗ್ತಿತ್ತು. ಆದ್ರೆ ಈ ಬಾರಿ, ಚನ್ನಪಟ್ಟಣ ಬಿಟ್ಟು ಬೇರೆಲ್ಲಿಂದಲೂ ಇನ್ನೂ ಹಣ್ಣುಗಳು ಬರ್ತಿಲ್ಲ. ಬರ್ತಿರೋ ಹಣ್ಣಿನ ಕ್ವಾಲಿಟಿಯಲ್ಲೂ ಕೊಂಚ ಕಳಪೆಯಾಗಿದೆ. ಜೊತೆಗೆ ಮಂಡಿಗಳಲ್ಲೇ ದರ ಗಗನಮುಖಿಯಾಗಿರೋದ್ರಿಂದ ನಾವೂ ದರ ಏರಿಕೆ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದಿದ್ದಾರೆ.


ಇದನ್ನೂ ಓದಿ- PM Kisan: ಈ ದಿನ ಬಿಡುಗಡೆಯಾಗಲಿದೆ ಪಿಎಂ ಕಿಸಾನ್ 11ನೇ ಕಂತು


ಯಾವ್ಯಾವ ಮಾವಿನ ಹಣ್ಣಿನ ದರ ಹೇಗಿದೆ ?
ಹಣ್ಣು ದರ ಪ್ರತಿ ಕೆಜಿ/ ರೂಪಾಯಿಗಳಲ್ಲಿ
ರಸಪೂರಿ 150 -200
ಸೇಂಧೂರ 100 - 150
ಬಾಗಿನಪಲ್ಲಿ 150 - 200
ರಾಜಗೀರ 150
ಕಾಲಾಪಹಾಡ್ 150 - 200
ಬಾದಾಮಿ  200 - 250
ರತ್ನಗಿರಿ ಅಲ್ಫಾನ್ಸೋ 350 - 400
ಮಲಗೋಬಾ 200 - 250
ಇಮಾಮ್‌ಪಸಂದ್ 250 - 300

ಇದನ್ನೂ ಓದಿ- Indian Coins: ನಾಣ್ಯಗಳ ಮೇಲಿರುವ ಗುರುತಿನ ಹಿಂದಿನ ರಹಸ್ಯವನ್ನು ತಿಳಿಯಿರಿ


ದರ ಏರಿಕೆಯಿಂದಾಗಿ ವ್ಯಾಪಾರವೂ ಅಂದುಕೊಂಡಷ್ಟು ಆಗ್ತಿಲ್ಲ ಅಂತ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಆರಂಭವಾಗೋ ಮಾವಿನಹಣ್ಣಿನ ವ್ಯಾಪಾರ ಮೇ ತಿಂಗಳವರೆಗೂ ನಡೆಯುತ್ತೆ. ಮಾರ್ಚ್ ಆರಂಭದಲ್ಲಿ ದರಗಳು ಕೊಂಚ ಹೆಚ್ಚಿದ್ರೂ ಏಪ್ರಿಲ್‌ ಆರಂಭದಲ್ಲಿ ಇಳಿಕೆಯಾಗಬೇಕಿತ್ತು. ಆದ್ರೀಗ ಮಾವಿನ ಹಣ್ಣಿನ ಬೆಲೆ ಮಾರ್ಚ್‌ನಲ್ಲಿದ್ದಕ್ಕಿಂತ ದುಪ್ಪಟ್ಟು ಹೆಚ್ಚಾಗಿದ್ದು, ಮೇ ನಲ್ಲಿ ಮತ್ತಷ್ಟು ಏರಿಕೆಯಾಗೋ ಸಾಧ್ಯತೆ ಇದೆ ಎಂದು ಹಾಪ್ ಕಾಮ್ಸ್ ನ ಅಧಿಕಾರಿಗಳು ಹೇಳುತ್ತಿದ್ದಾರೆ.  
ಜೊತೆಗೆ ಈ ಬಾರಿ ಅಕಾಲಿಕ ಮಳೆಯಿಂದ ಕುಂಠಿತವಾಗಿರೋ ಇಳುವರಿಯಿಂದ ಮುಂದಿನ ವರ್ಷದ ವ್ಯಾಪಾರದ ಮೇಲೂ ನೆಗಟಿವ್ ಎಫೆಕ್ಟ್ ಇದ್ದೇ ಇರುತ್ತೆ ಅನ್ನೋದು ವ್ಯಾಪಾರಸ್ಥರ ಅಭಿಪ್ರಾಯವಾಗಿದೆ. ಒಟ್ನಲ್ಲಿ, ದರ ಏರಿಕೆಯ ಪಟ್ಟಿಯಲ್ಲಿ ಮಾವಿನ ಹಣ್ಣೂ ಈಗ ರೇಸ್‌ಗೆ ಬಂದಿರೋ ಕಾರಣದಿಂದ ಗ್ರಾಹಕರಿಗೂ ಹಾಗೂ ವ್ಯಾಪಾರಸ್ಥರಿಗೂ ಕಿರಿಕಿರಿಯಾಗಿರೋದಂತೂ ಸತ್ಯ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.