ರತನ್ ಟಾಟಾ: ಉದ್ಯಮ ಪ್ರಪಂಚದ ವಿನಮ್ರ ದೈತ್ಯ!
ಡಿಸೆಂಬರ್ 28, 1937ರಲ್ಲಿ ಜನಿಸಿದ ರತನ್ ನವಲ್ ಟಾಟಾ ಅವರು ಓರ್ವ ಪ್ರಮುಖ ಭಾರತೀಯ ಉದ್ಯಮಿ, ಸಮಾಜ ಸೇವಕ, ಹಾಗೂ ಟಾಟಾ ಸನ್ಸ್ ಸಮೂಹದ ಮಾಜಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು. ಅವರು 1990 ರಿಂದ 2012ರ ತನಕ ಟಾಟಾ ಗ್ರೂಪ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಡಿಸೆಂಬರ್ 28, 1937ರಲ್ಲಿ ಜನಿಸಿದ ರತನ್ ನವಲ್ ಟಾಟಾ ಅವರು ಓರ್ವ ಪ್ರಮುಖ ಭಾರತೀಯ ಉದ್ಯಮಿ, ಸಮಾಜ ಸೇವಕ, ಹಾಗೂ ಟಾಟಾ ಸನ್ಸ್ ಸಮೂಹದ ಮಾಜಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು. ಅವರು 1990 ರಿಂದ 2012ರ ತನಕ ಟಾಟಾ ಗ್ರೂಪ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಅಕ್ಟೋಬರ್ 2016ರಿಂದ ಫೆಬ್ರವರಿ 2017ರ ತನಕ ಮರಳಿ ಟಾಟಾ ಸಮೂಹದ ಮಧ್ಯಂತರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಪ್ರಸ್ತುತ ಟಾಟಾ ಸಮೂಹದ ದತ್ತಿ ಸಂಸ್ಥೆಗಳ ನೇತೃತ್ವ ವಹಿಸಿ, ಮುನ್ನಡೆಸುತ್ತಿದ್ದಾರೆ. ಅವರಿಗೆ ಭಾರತದ ಉನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಭೂಷಣ (2000) ಮತ್ತು ಪದ್ಮ ವಿಭೂಷಣ ( 2008) ಸಲ್ಲಿಸಲಾಗಿದೆ. ಅವರು ತನ್ನ ಮೌಲ್ಯಯುತ ವ್ಯವಹಾರಗಳು ಮತ್ತು ಸಮಾಜಸೇವೆಯಿಂದ ಜನಪ್ರಿಯರಾಗಿದ್ದಾರೆ.
ರತನ್ ಟಾಟಾ ಅವರು ಟಾಟಾ ಕುಟುಂಬದ ಸದಸ್ಯರಾಗಿದ್ದು, ಟಾಟಾ ಗ್ರೂಪ್ ಸ್ಥಾಪಕರಾದ ಜಮ್‌ಶೆಡ್‌ಜಿ ಟಾಟಾ ಅವರ ಮರಿಮಗನಾಗಿದ್ದಾರೆ. 1975ರಲ್ಲಿ ರತನ್ ಟಾಟಾ ಕಾರ್ನೆಲ್ ಯುನಿವರ್ಸಿಟಿಯ ಕಾಲೇಜ್ ಆಫ್ ಆರ್ಕಿಟೆಕ್ಟ್‌ನಿಂದ ಪದವಿ ಹಾಗೂ ಹಾರ್ವರ್ಡ್ ಬಿಸಿ಼ನೆಸ್ ಸ್ಕೂಲ್‌ನಿಂದ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಪ್ರೋಗ್ರಾಮ್ ನಲ್ಲಿ ಪದವಿ ಗಳಿಸಿದರು. ರತನ್ ಟಾಟಾ ಅವರು 1961ರಲ್ಲಿ ಟಾಟಾ ಗ್ರೂಪ್ಸ್‌ಗೆ ಸೇರ್ಪಡೆಯಾದರು. ಅವರು ಟಾಟಾ ಸ್ಟೀಲ್ ಉತ್ಪಾದನಾ ಘಟಕದ ನಿರ್ವಹಣೆ ನಡೆಸಿದ್ದರು. ಜೆಆರ್‌ಡಿ ಟಾಟಾ ಅವರು 1991ರಲ್ಲಿ ನಿವೃತ್ತರಾದ ಬಳಿಕ ರತನ್ ಟಾಟಾ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡರು. ರತನ್ ಟಾಟಾ ಅವರ ಆಡಳಿತದ 21 ವರ್ಷಗಳ ಅವಧಿಯಲ್ಲಿ ಟಾಟಾ ಸಂಸ್ಥೆಯ ಆದಾಯ 40 ಪಟ್ಟಿಗಿಂತ ಹೆಚ್ಚಿನ ಮತ್ತು ಲಾಭ 50 ಪಟ್ಟಿಗೂ ಹೆಚ್ಚು ಹೆಚ್ಚಳ ಕಂಡಿತು. ಅವರ ಅವಧಿಯಲ್ಲಿ ಟಾಟಾ ಟೀ ಟೆಟ್ಲೀಯನ್ನು ಖರೀದಿಸಿತು. ಟಾಟಾ ಮೋಟಾರ್ಸ್ ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಯನ್ನು ಖರೀದಿಸಿತು. ಟಾಟಾ ಸ್ಟೀಲ್ ಸಂಸ್ಥೆ ಕೋರಸ್ ಅನ್ನು ಖರೀದಿಸಿತು. ಈ ಎಲ್ಲ ವ್ಯವಹಾರಗಳ ಮೂಲಕ ಟಾಟಾ ಭಾರತ ಕೇಂದ್ರಿತ ಸಂಸ್ಥೆಯಿಂದ ಜಾಗತಿಕ ಸಂಸ್ಥೆಯಾಗಿ ಬೆಳವಣಿಗೆ ಹೊಂದಿತು.
ರತನ್ ಟಾಟಾ ಅವರು ಭಾರತದಲ್ಲಿ ಓರ್ವ "ವಿನಮ್ರ ಮತ್ತು ನಾಚಿಕೆ" ಸ್ವಭಾವದ ಅವಿವಾಹಿತ ಉದ್ದಿಮೆದಾರ ಎಂದು ಖ್ಯಾತರಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ರತನ್ ಟಾಟಾ ಅವರು ಐಕಿಯ ಸ್ಥಾಪಕ ಇಂಗ್ವಾರ್ ಕೆಂಪಾರ್ಡ್ ಅವರಂತೆ ಹಳೆಯ ಕಾರಿನಲ್ಲಿ ಪ್ರಯಾಣಿಸುವ, ವಿಮಾನದ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುವ ಕಠೋರ ಬಿಲಿಯನೇರ್ ಅಲ್ಲ. ರತನ್ ಟಾಟಾ ಅವರ ಮಾತಿನಂತೆಯೇ ಅವರು ನಾಲ್ಕು ಬಾರಿ ಮದುವೆಯ ಸನಿಹಕ್ಕೆ ಹೋಗಿದ್ದರೂ, ಅವರು ಅವಿವಾಹಿತರಾಗಿಯೇ ಉಳಿದವರು. ಅವರು ತನ್ನ ಪ್ರೀತಿ, ಕಾಳಜಿಯನ್ನು ಪ್ರೀತಿಯಿಂದ ಸಲಹುತ್ತಿರುವ ಎರಡು ಜರ್ಮನ್ ಶೆಫರ್ಡ್ ನಾಯಿಗಳಿಗೆ ನೀಡುತ್ತಿದ್ದಾರೆ. ಅವರು ಟಾಟಾ ಗ್ರೂಪ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಲವು ಸ್ಪೋರ್ಟ್ಸ್ ಕಾರ್‌ಗಳನ್ನೂ ತನ್ನ ಗರಾಜ್‌ನಲ್ಲಿ ಹೊಂದಿದ್ದರು. ವ್ಯವಹಾರದ ಪ್ರಯಾಣಗಳಿಗಾಗಿ ಭಾರತದಲ್ಲಿ ತನ್ನ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸುತ್ತಿದ್ದರು. ಅವರು ತನ್ನ ನಿವೃತ್ತ ಜೀವನಕ್ಕಾಗಿ ಮುಂಬೈಯ ಕಡಲ ತೀರದಲ್ಲಿ ಮೂರು ಮಹಡಿಯ ವಿಲ್ಲಾವನ್ನೂ ನಿರ್ಮಿಸಿದ್ದರು. ಆದರೂ 27 ಮಹಡಿಗಳ, ಸಿನೆಮಾ ಥಿಯೇಟರ್, ಸ್ಪೋರ್ಟ್ಸ್ ಕ್ಲಬ್, ಈಜುಕೊಳಗಳು ಮತ್ತು ವಿಲ್ಲಾದ ಮೇಲೆ ಮೂರು ಹೆಲಿಪ್ಯಾಡ್ ಹೊಂದಿರುವ ವಿಲ್ಲಾ ನಿರ್ಮಿಸಿ, ಅದರಲ್ಲಿ ವಾಸಿಸುತ್ತಿರುವ ಮುಕೇಶ್ ಅಂಬಾನಿಯವರಂತಹ ಮಲ್ಟಿ ಬಿಲಿಯನೇರ್‌ಗಳಿಗೆ ಹೋಲಿಸಿದರೆ ರತನ್ ಟಾಟಾ ಅವರ ಮನೆ ಸರಳ ಎಂದೇ ಹೇಳಬಹುದು! ರತನ್ ಟಾಟಾ ಅವರ ಹವ್ಯಾಸಗಳೂ ಆಸಕ್ತಿಕರವೇ. ಅವರು ಸೂಪರ್‌ಸಾನಿಕ್ ವಿಮಾನ ಪೈಲಟ್ ಆಗಿರುವುದನ್ನು ಇಷ್ಟ ಪಡುತ್ತಿದ್ದರು.
ರತನ್ ಟಾಟಾ ನೇತೃತ್ವದಲ್ಲಿ ಟಾಟಾ ಸಂಸ್ಥೆ ಜಗತ್ತಿನಾದ್ಯಂತ 80 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಏಷ್ಯಾದ ಅತಿದೊಡ್ಡ ಸಾಫ್ಟ್‌ವೇರ್ ಅಭಿವೃದ್ಧಿ ಸಂಸ್ಥೆಯಾಗಿದೆ. ಟಾಟಾ ಗ್ಲೋಬಲ್ ಬೆವರೇಜಸ್ ಜಾಗತಿಕ ಚಹಾ ಮಾರುಕಟ್ಟೆಯಲ್ಲಿ ಎರಡನೇ ಅತಿದೊಡ್ಡ ಸಂಸ್ಥೆಯಾಗಿದೆ. ಟಾಟಾ ಸ್ಟೀಲ್ ಭಾರತದ ನಂಬರ್ ವನ್ ಸ್ಟೀಲ್ ಸಂಸ್ಥೆಯಾಗಿದ್ದು, ಜಗತ್ತಿನಲ್ಲಿ ಏಳನೇ ಸ್ಥಾನದಲ್ಲಿದೆ. ತಾಜ್ ಹೊಟೆಲ್ಸ್ ಮತ್ತು ರೆಸಾರ್ಟ್ಸ್ ಐಷಾರಾಮಿ ಹೊಟೆಲ್ ಉದ್ಯಮದಲ್ಲಿ ಭಾರತದ ಪ್ರಮುಖ ಸಂಸ್ಥೆಯಾಗಿದೆ. ಟಾಟಾ ಪವರ್ ಭಾರತದ ಪ್ರಮುಖ ಖಾಸಗಿ ವಿದ್ಯುತ್ ಸಂಸ್ಥೆಯಾಗಿದೆ. ಟಾಟಾ ಸಮೂಹದಲ್ಲಿ ಬಹುತೇಕ ನೂರು ಸಂಸ್ಥೆಗಳೇ ಇರುವುದರಿಂದ ಈ ಪಟ್ಟಿ ಇನ್ನೂ ಅಪೂರ್ಣವೇ ಆಗಿದೆ. 28 ಸಂಸ್ಥೆಗಳು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ವ್ಯವಹಾರಕ್ಕೆ ನೋಂದಾಯಿತವಾಗಿವೆ. ಟಾಟಾ ಮೋಟಾರ್ಸ್ ಹಾಗೂ ಟಾಟಾ ಕಮ್ಯುನಿಕೇಶನ್ಸ್ ನ್ಯೂಯಾರ್ಕ್‌ನಲ್ಲಿವೆ. 2010-11ರ ಹಣಕಾಸು ವರ್ಷದಲ್ಲಿ ಟಾಟಾ ಗ್ರೂಪ್ ಆದಾಯ 3.8 ಟ್ರಿಲಿಯನ್ ರುಪಾಯಿ (83.5 ಬಿಲಿಯನ್ ಡಾಲರ್) ಆಗಿದ್ದು, ಅದರ ನಿವ್ವಳ ಲಾಭ 2 ಬಿಲಿಯನ್ ಡಾಲರ್ ಆಗಿತ್ತು. ಟಾಟಾ ಸಂಸ್ಥೆಗಳಲ್ಲಿ 420 ಸಾವಿರ ಉದ್ಯೋಗಿಗಳಿದ್ದಾರೆ.
ಟಾಟಾ ಸಂಸ್ಥೆಯ ಪರಂಪರೆಯಾದ ಉದ್ಯೋಗಿಗಳನ್ನು ಚೆನ್ನಾಗಿ ನೋಡಿಕೊಳ್ಳುವುದನ್ನು ರತನ್ ಟಾಟಾ ಸಹ ಮುಂದುವರಿಸಿದ್ದರು. ಈ ಹೊಸ ಶತಮಾನದಲ್ಲಿ ಟಾಟಾ ಸಂಸ್ಥೆಯ ಕಾರ್ಪೋರೇಟ್ ಮೌಲ್ಯ ಅಪಾರವಾಗಿ ಹೆಚ್ಚಳ ಕಂಡಿದೆ. ಟಾಟಾ ಸಂಸ್ಥೆ 1912ರಲ್ಲಿ ಜಗತ್ತಲ್ಲೇ ಮೊದಲ ಬಾರಿಗೆ ದಿನದಲ್ಲಿ 8 ಗಂಟೆಗಳ ಉದ್ಯೋಗ ಅವಧಿ ಮತ್ತು 1917ರಲ್ಲಿ ಉದ್ಯೋಗಿಗಳಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ಆರಂಭಿಸಿತು. ಈ ಎಲ್ಲ ಸಾಮಾಜಿಕ ಬದ್ಧತೆಗಳು, ನಿವೃತ್ತ ಉದ್ಯೋಗಿಗಳಿಗೆ ಪಿಂಚಣಿ, ಪರಿಹಾರ, ಹೆರಿಗೆ ರಜೆ, ಹಾಗೂ ಇತರ ಬೋನಸ್‌ಗಳನ್ನು ಟಾಟಾ ಸಂಸ್ಥೆಯ ಸ್ಥಾಪಕರೇ ಆರಂಭಿಸಿದ್ದರು. ಒಂದಷ್ಟು ವರದಿಗಳ ಪ್ರಕಾರ, ಟಾಟಾ ಗ್ರೂಪಿನ ಒಟ್ಟು ಆದಾಯದ 65% ಟಾಟಾ ಕುಟುಂಬದ ಟ್ರಸ್ಟ್ ಮೂಲಕ ಸಮಾಜಸೇವಾ ಕಾರ್ಯಗಳಲ್ಲಿ ಬಳಕೆಯಾಗುತ್ತದೆ.
ಟಾಟಾ ಸನ್ಸ್ ಸಂಸ್ಥೆಯ ಗೌರವಾಧ್ಯಕ್ಷರಾಗಿರುವ ರತನ್ ಟಾಟಾ ಭಾರತದ ಸ್ಟಾರ್ಟಪ್ ವಲಯದ ಅತಿದೊಡ್ಡ ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ. ಆದರೆ ಈ ಕುರಿತು ಕೆಲವೇ ಭಾರತೀಯರಿಗೆ ಅರಿವಿದೆಯಷ್ಟೇ.ಟಾಟಾ ಸನ್ಸ್‌ನಿಂದ ನಿವೃತ್ತಿ ಹೊಂದಿದ ಬಳಿಕ ರತನ್ ಟಾಟಾ ಅವರು ಭಾರತೀಯ ಸ್ಟಾರ್ಟಪ್‌ಗಳಿಗೆ ಹಣ ಹೂಡಿಕೆ ಮಾಡಿ, ಅವುಗಳ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ.ಅವರು ಇಂದಿನ ತನಕ 30ಕ್ಕೂ ಹೆಚ್ಚು ಸ್ಟಾರ್ಟಪ್‌ಗಳಿಗೆ ಹೂಡಿಕೆ ಮಾಡಿದ್ದು, ಅವುಗಳಲ್ಲಿ ಹೆಚ್ಚಿನವು ಅವರ ವೈಯಕ್ತಿಕ ನೆಲೆಯಲ್ಲಾಗಿದೆ. ಇನ್ನುಳಿದವು ಅವರ ಹೂಡಿಕೆ ಸಂಸ್ಥೆಯಾದ ಆರ್‌ಎನ್‌ಟಿ ಕ್ಯಾಪಿಟಲ್ ಅಡ್ವೈಸರ್ಸ್ ಮೂಲಕ ನಡೆಸಲಾಗಿದೆ. ಅವುಗಳಲ್ಲಿ ಬಹುತೇಕ ಸ್ಟಾರ್ಟಪ್‌ಗಳು ಅವುಗಳ ಕ್ಷೇತ್ರಗಳಲ್ಲಿ ನಾಯಕರಾಗಿ ಹೊರಹೊಮ್ಮಿವೆ.
ರತನ್ ಟಾಟಾ ಅವರ ಉಳಿತಾಯವನ್ನು ಭಾರತದ ಪ್ರಮುಖ ಇ ಕಾಮರ್ಸ್ ಸಂಸ್ಥೆಯಾದ ಸ್ನ್ಯಾಪ್‌ಡೀಲ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಅದರೊಡನೆ ಭಾರತದ ಪ್ರೀಮಿಯಂ ಚಹಾ ಆನ್‌ಲೈನ್ ಮಾರಾಟಗಾರ ಟೀಬಾಕ್ಸ್, ಡಿಸ್ಕೌಂಟ್ ಕೂಪನ್ ಮತ್ತು ವೆಬ್‌ಸೈಟ್ ರಿಫಂಡ್ ಒದಗಿಸುವ ಕ್ಯಾಷ್‌ಕರೋ ಡಾಟ್ ಕಾಮ್ ಗಳಲ್ಲಿ ಜನವರಿ 2016ರಲ್ಲಿ ಹೂಡಿಕೆ ಮಾಡಿದ್ದಾರೆ.ಭಾರತದಲ್ಲಿ ಅವರು ಓಲಾ ಕ್ಯಾಬ್ಸ್ ನಂತಹ ಆರಂಭಿಕ ಮತ್ತು ಬೆಳೆದಿರುವ ಸಂಸ್ಥೆಗಳಲ್ಲಿ ಸಣ್ಣ ಪ್ರಮಾಣದ ಹೂಡಕೆ ಮಾಡಿದ್ದಾರೆ.ಏಪ್ರಿಲ್ 2015ರಲ್ಲಿ ಅವರು ಚೀನೀ ಸ್ಮಾರ್ಟ್‌ಫೋನ್ ಸಂಸ್ಥೆಯಾದ ಕ್ಸಿಯಾಮಿಯಲ್ಲಿ ಪಾಲು ಖರೀದಿಸಿದ್ದಾರೆ.ಅಕ್ಟೋಬರ್ 2015ರಲ್ಲಿ ರತನ್ ಟಾಟಾ ಅಮೆರಿಕನ್ ಎಕ್ಸ್‌ಪ್ರೆಸ್ ಜೊತೆ ಸಹಯೋಗದಿಂದ ಬಿಟ್‌ಕಾಯಿನ್ ಸ್ಟಾರ್ಟಪ್ ಅಬ್ರಾದಲ್ಲಿ ಹೂಡಿಕೆ ಮಾಡಿದ್ದಾರೆ.
2016ರಲ್ಲಿ ರತನ್ ಟಾಟಾ ಅವಿವಾಹಿತರು ವಾಸಿಸಲು ಸಂಪೂರ್ಣ ಸುಸಜ್ಜಿತ ಅಪಾರ್ಟ್‌ಮೆಂಟ್ ಹುಡುಕುವ ನೆಸ್ಟ್‌ವೇ ಎಂಬ ಆನ್‌ಲೈನ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದರು. ಅದನ್ನು ಜ಼ೆನಿಫೈ ಖರೀದಿಸಿ, ಕುಟುಂಬಗಳಿಗೆ ವಾಸಕ್ಕೆ ಮನೆ ಬಾಡಿಗೆಗೆ ಒದಗಿಸುವ ಯೋಜನೆಯನ್ನು ಆರಂಭಿಸಿತು.ಬಳಿಕ ಅವರು ಸಾಕುಪ್ರಾಣಿಗಳ ಕಾಳಜಿಯ ಆನ್‌ಲೈನ್ ಜಾಲತಾಣ ಡಾಗ್‌ಸ್ಪಾಟ್‌ನಲ್ಲೂ ಹೂಡಿಕೆ ಮಾಡಿದ್ದರು.ಗುಜರಾತಿನ ಸನಂದ್ ಘಟಕದಿಂದ ಟಿಗರ್ ಇಲೆಕ್ಟ್ರಿಕ್ ಕಾರುಗಳ ಮೊದಲ ತಂಡ ಹೊರಬಂದಾಗ ರತನ್ ಟಾಟಾ "ಟಿಗರ್ ಭಾರತದ ಇಲೆಕ್ಟ್ರಿಕ್ ವಾಹನ ಕನಸು ಮತ್ತು ಆಸೆಗಳನ್ನು ವೇಗವಾಗಿ ನನಸು ಮಾಡಿದೆ" ಎಂದಿದ್ದರು.
ಅದರೊಡನೆ ರತನ್ ಟಾಟಾ ಲೆನ್ಸ್‌ಕಾರ್ಟ್, ಕಾರ್ ದೇಖೋ, ಫಸ್ಟ್ ಕ್ರೈ, ಅರ್ಬನ್ ಕಂಪನಿ ಇತ್ಯಾದಿಗಳಲ್ಲೂ ಹೂಡಿಕೆ ಮಾಡಿದ್ದಾರೆ.2022ರಲ್ಲಿ ಅವರು ಹಿರಿಯ ನಾಗರಿಕರಿಗೆ ಸೇವೆಯ ರೂಪದಲ್ಲಿ ಒಡನಾಟ ನೀಡುವ ಗುಡ್ ಫೆಲೋಸ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ.ಹಲವರಿಗೆ ತಿಳಿದಿರದ ವಿಚಾರವೆಂದರೆ, ರತನ್ ಟಾಟಾ ಅವರು ಭಾರತೀಯ ಸೇನಾಪಡೆಗಳಿಗೆ ಹಲವು ಉದ್ಯಮಗಳನ್ನು ಸ್ಥಾಪಿಸಿದ್ದಾರೆ. ಟಾಟಾ ಸನ್ಸ್ ಭೂಮಿ ಮತ್ತು ವಾಯು ಆಧಾರಿತ ರಕ್ಷಣಾ ಉತ್ಪಾದನಾ ಸಂಸ್ಥೆಗಳಲ್ಲೂ ಹೂಡಿಕೆ ಮಾಡಿದೆ. ಇವುಗಳಲ್ಲಿ ಹಲವು ಉತ್ಪನ್ನಗಳು ಜಗತ್ತಿನಾದ್ಯಂತ ಮಾರಾಟವಾಗುತ್ತಿವೆ.ಕೆಲವು ವ್ಯಕ್ತಿಗಳು ಯಾವತ್ತೂ ನಿವೃತ್ತರಾಗದೆ, ಸದಾ ಹೊಸತನವನ್ನು ಹುಡುಕುತ್ತಿರುತ್ತಾರೆ. ಇಂದು 85ನೇ ಜನ್ಮದಿನವನ್ನು ಆಚರಿಸುತ್ತಿರುವ ರತನ್ ಟಾಟಾ ಅವರೂ ಅಂಥವರಲ್ಲೊಬ್ಬರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.