ಅಯೋಧ್ಯೆಯ ರಾಮ ಮಂದಿರ ನೀಡಲಿದೆಯೇ ಭಾರತದ 6.8% ಪ್ರವಾಸೋದ್ಯಮ ಜಿಡಿಪಿಗೆ ಉತ್ತೇಜನ?
ಭಾರತ 42 ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳನ್ನು ಹೊಂದಿದ್ದು, ಇವುಗಳಲ್ಲಿ ಸಾಕಷ್ಟು ತಾಣಗಳು ಧಾರ್ಮಿಕ ತಾಣಗಳಾಗಿವೆ. ಭಾರತದಲ್ಲಿ ಬಹುತೇಕ ಪ್ರವಾಸಿಗರು ಧಾರ್ಮಿಕ ಪ್ರವಾಸವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಐತಿಹಾಸಿಕ ನಗರವಾದ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ನೆರವೇರಿದ ಬಳಿಕ, ಭಾರತ ತನ್ನ ಧಾರ್ಮಿಕ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಆಲೋಚಿಸುತ್ತಿದೆ. ಅಯೋಧ್ಯೆಯ ಅಭಿವೃದ್ಧಿ ಇನ್ನಿತರ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಹಾದಿ ಮಾಡಿ, ರಾಷ್ಟ್ರಾದ್ಯಂತ ಭಕ್ತರ ಭೇಟಿಯನ್ನು ಹೆಚ್ಚಿಸಲು ನೆರವಾಗುವ ನಿರೀಕ್ಷೆಗಳಿವೆ.
ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನೆರವೇರಿಸಿದರು. ಇದರ ಪರಿಣಾಮವಾಗಿ, ಬಹಳಷ್ಟು ರಾಜಕೀಯ ವಿವಾದಗಳಲ್ಲಿ ಭಾಗವಾಗಿದ್ದ, ಮೌನವಾದ ಅಯೋಧ್ಯಾ ನಗರಕ್ಕೆ ಭಾರತದಾದ್ಯಂತ ಸಾವಿರಾರು ಭಕ್ತಾದಿಗಳು ಬರಲು ಆರಂಭಿಸಿದ್ದಾರೆ.
ಭಾರತದ ಬಹುಸಂಖ್ಯಾತ ಹಿಂದೂಗಳು ಅಯೋಧ್ಯೆ ಮಹಾವಿಷ್ಣುವಿನ ಅವತಾರವಾದ ಶ್ರೀರಾಮನ ಜನ್ಮಸ್ಥಳ ಎಂದು ನಂಬುತ್ತಾರೆ. ಹಿಂದೆ 1992ರಲ್ಲಿ, ಹಿಂದೂ ಸಂಘಟನೆಗಳು ಇದೇ ಪ್ರದೇಶದಲ್ಲಿದ್ದ ಬಾಬ್ರಿ ಮಸೀದಿಯನ್ನು ಕೆಡವಿ, ಬಾಬ್ರಿ ಮಸೀದಿಯನ್ನು ಮೊದಲು ಅದೇ ಜಾಗದಲ್ಲಿದ್ದ ಮಂದಿರದ ಮೇಲೆ ಕಟ್ಟಲಾಗಿತ್ತು ಎಂದಿದ್ದರು.
ರಾಮ ಮಂದಿರವನ್ನು ನಿರ್ಮಿಸುವುದು ಕಳೆದ ಮೂವತ್ತು ವರ್ಷಗಳಿಂದ ಪ್ರಬಲವಾಗಿರುವ ಹಿಂದೂ ರಾಷ್ಟ್ರವಾದಿ ಪಕ್ಷವಾದ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಅಜೆಂಡಾದಲ್ಲಿ ಪ್ರಮುಖ ಅಂಶವಾಗಿತ್ತು.
"ಅಯೋಧ್ಯೆಯಲ್ಲಿ ಇನ್ನು ದೀರ್ಘಕಾಲೀನ ನಿವಾಸಿಗಳು ಮತ್ತು ಪ್ರವಾಸಿಗರ ಸಂಖ್ಯೆ ಸಾಕಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ" ಎಂದು ಅಯೋಧ್ಯೆಯ ಆಧುನೀಕರಣ ಯೋಜನೆಯ ಶಿಲ್ಪಿ ದಿಕ್ಷು ಕುಕ್ರೇಜಾ ಅಭಿಪ್ರಾಯ ಪಟ್ಟಿದ್ದಾರೆ.
"ಈ ಬೆಳವಣಿಗೆಗೆ ಪ್ರತಿಕ್ರಿಯೆಯಾಗಿ, ನಾವು ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸಲು ಕ್ರಮ ಕೈಗೊಂಡಿದ್ದೇವೆ. ಇದರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅತ್ಯುನ್ನತ ಗುಣಮಟ್ಟದ ರೈಲ್ವೇ ನಿಲ್ದಾಣಗಳು, ಹಾಗೂ ಆಧುನಿಕ ಬಸ್ ನಿಲ್ದಾಣಗಳು ಸೇರಿವೆ" ಎಂದು ಅವರು ವಿವರಿಸಿದ್ದಾರೆ.
ಅಮೆರಿಕಾ ಮೂಲದ ಹೂಡಿಕೆ ಸಂಸ್ಥೆಯಾದ ಜೆಫೆರೀಸ್ ಪ್ರಕಾರ, ಅಯೋಧ್ಯೆಯಲ್ಲಿ 10 ಬಿಲಿಯನ್ ಡಾಲರ್ (83,000 ಕೋಟಿ ರೂಪಾಯಿ) ಮೌಲ್ಯದಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯಗಳು ವರ್ಷಕ್ಕೆ 50 ಮಿಲಿಯನ್‌ಗೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಸಾಧ್ಯತೆಗಳಿವೆ. ಆಗಮಿಸುವ ಜನರಲ್ಲಿನ ಅಪಾರ ಹೆಚ್ಚಳದ ಕಾರಣದಿಂದ ಹೋಟೆಲ್ ಉದ್ಯಮ ಮತ್ತು ಇತರ ಆರ್ಥಿಕ ವಲಯಗಳು ಸಾಕಷ್ಟು ಅಭಿವೃದ್ಧಿ ಸಾಧಿಸುವ ನಿರೀಕ್ಷೆಗಳಿದ್ದು, ಮೂಲಭೂತ ಸೌಕರ್ಯ ಆಧಾರಿತ ಪ್ರವಾಸೋದ್ಯಮ ಅಭಿವೃದ್ಧಿಗೆ ನಾಂದಿ ಹಾಡಲಿದೆ.
ಪ್ರವಾಸೋದ್ಯಮ ಭಾರತದ ಜಿಡಿಪಿಗೆ 6.8% ಕೊಡುಗೆ ನೀಡುತ್ತಿದ್ದು, ಇದು ಮುಂದುವರಿದ ಆರ್ಥಿಕತೆಗಳಿಗೆ ಹೋಲಿಸಿದರೆ ಸಾಕಷ್ಟು ಕಡಿಮೆಯಾಗಿದೆ. ಭಾರತ ತನ್ನ ಬಹಳಷ್ಟು ಧಾರ್ಮಿಕ ಕೇಂದ್ರಗಳಿಗೆ ಹಿನ್ನಡೆ ಉಂಟುಮಾಡಿರುವ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಡೆಸುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಇನ್ನಿತರ ಸೌಕರ್ಯ ವಂಚಿತ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಮೂಲವಾಗುವ ಸಾಧ್ಯತೆಗಳಿವೆ.
ಭಾರತ 42 ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳನ್ನು ಹೊಂದಿದ್ದು, ಇವುಗಳಲ್ಲಿ ಸಾಕಷ್ಟು ತಾಣಗಳು ಧಾರ್ಮಿಕ ತಾಣಗಳಾಗಿವೆ. ಭಾರತದಲ್ಲಿ ಬಹುತೇಕ ಪ್ರವಾಸಿಗರು ಧಾರ್ಮಿಕ ಪ್ರವಾಸವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಸೋಮವಾರ ರಾಮ ಮಂದಿರದ ಉದ್ಘಾಟನೆಯೊಡನೆ ದೇಶಾದ್ಯಂತ ಹಿಂದೂಗಳು ಸಂಭ್ರಮಾಚರಣೆ ನಡೆಸಿದರು. ವನವಾಸ ಮುಗಿಸಿ ಶ್ರೀರಾಮ ಅಯೋಧ್ಯೆಗೆ ಬಂದಾಗ ದೀಪಾವಳಿ ಆಚರಣೆ ಆರಂಭಗೊಂಡಿತ್ತು ಎಂಬ ಹಿನ್ನೆಲೆಯಲ್ಲಿ, ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆಯನ್ನೂ ದೀಪಾವಳಿಯ ರೀತಿಯಲ್ಲಿ ಆಚರಿಸಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದರು. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ರಾಮ ಮಂದಿರ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ 1 ಟ್ರಿಲಿಯನ್ ರೂಪಾಯಿ ಅಥವಾ ಒಂದು ಲಕ್ಷ ಕೋಟಿ ರೂಪಾಯಿಗಳ (12 ಬಿಲಿಯನ್ ಡಾಲರ್) ಮೌಲ್ಯದ ವ್ಯಾಪಾರ ನಡೆದಿದ್ದು, ಇದರಲ್ಲಿ ರಾಮ ಮಂದಿರದ ಮಾದರಿಗಳ ವ್ಯಾಪಾರ, ಸಿಡಿಮದ್ದು ಮತ್ತು ಆಹಾರ ಮಾರಾಟವೂ ಸೇರಿದೆ ಎಂದು ತಿಳಿಸಿದೆ.
ಔದ್ಯಮಿಕ ನಾಯಕರ ಪ್ರಕಾರ, ಈಗ ಹೆಚ್ಚಾಗಿರುವ ಧಾರ್ಮಿಕ ಉತ್ಸುಕತೆ ಇನ್ನೂ ಹೆಚ್ಚಿನ ಉದ್ಯಮ ಸಾಧ್ಯತೆಗಳಿಗೆ ನೆರವಾಗಲಿವೆ. ಧಾರ್ಮಿಕ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಗಳ ವೃದ್ಧಿ ಇದಕ್ಕೆ ನೆರವಾಗುವ ಸಾಧ್ಯತೆಗಳಿವೆ.
ಕುಕ್ರೇಜಾ ಅವರು 2,500 ವರ್ಷಗಳ ಇತಿಹಾಸವಿರುವ ಅಯೋಧ್ಯಾ ನಗರದಲ್ಲಿ ಪ್ರಸ್ತುತ ಉತ್ಖನ್ನಗಳು ಮತ್ತು ಆಧುನೀಕರಣಗಳು ನೆರವೇರಲಿವೆ. ಈ ಅಭಿವೃದ್ಧಿ ಕಾರ್ಯಗಳಲ್ಲಿ, ರಸ್ತೆಗಳ ಅಗಲೀಕರಣ, ಬಹು ಅಂತಸ್ತುಗಳ ಪಾರ್ಕಿಂಗ್ ವ್ಯವಸ್ಥೆಗಳ ನಿರ್ಮಾಣ ಮತ್ತು ಸುಸ್ಥಿರ ಸಾಗಾಣಿಕೆಗಾಗಿ ಇಲೆಕ್ಟ್ರಿಕ್ ವಾಹನಗಳ ನಿಲ್ದಾಣಗಳ ಸ್ಥಾಪನೆಗಳು ಸೇರಿವೆ.
ಕುಕ್ರೇಜಾ ಅವರು ತಮ್ಮ ಹೆಚ್ಚಿನ ಗಮನ ವಿಶಾಲವಾದ ಪಾದಚಾರಿ ಮಾರ್ಗಗಳ ಮೂಲಕ ನಡೆದಾಡುವವರಿಗೆ ಅನುಕೂಲ ಕಲ್ಪಿಸುವ ಕಡೆ ಇದ್ದು, ಅದರೊಡನೆ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಮಾರ್ಗ ವ್ಯವಸ್ಥೆಗಳನ್ನು ಒದಗಿಸುವುದಾಗಿದೆ. ಆ ಮೂಲಕ ಖಾಸಗಿ ಕಾರುಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವುದಾಗಿದೆ ಎಂದು ವಿವರಿಸಿದ್ದಾರೆ. ಈ ಪ್ರಯತ್ನಗಳು ಅಯೋಧ್ಯೆಯಲ್ಲಿ ಮುಂದುವರಿಯಲಿರುವ ಅಭಿವೃದ್ಧಿಯ ಪ್ರಮುಖ ಅಂಶಗಳಾಗಿವೆ ಎಂದಿದ್ದಾರೆ.
ಅಯೋಧ್ಯಾ ನಗರದ ಮರು ನಿರ್ಮಾಣಕ್ಕೆ ಪೂರ್ವಭಾವಿಯಾಗಿ, ಇತರ ಭಾರತೀಯ ಪ್ರಮುಖ ಧಾರ್ಮಿಕ ಕೇಂದ್ರಗಳಾದ ತಿರುಪತಿ, ಅಮೃತಸರ, ಉಜ್ಜಯಿನಿ, ಹಾಗೂ ವಾರಣಾಸಿಗಳನ್ನು ಅಧ್ಯಯನ ನಡೆಸಿ, ಅದರೊಡನೆ ವಿದೇಶೀ ಧಾರ್ಮಿಕ ತಾಣಗಳಾದ ವ್ಯಾಟಿಕನ್ ಸಿಟಿ, ಜೆರುಸಲೇಮ್, ಮತ್ತು ಕಾಂಬೋಡಿಯಾಗಳನ್ನೂ ಅಧ್ಯಯನ ನಡೆಸಲಾಗಿದೆ.
ಕುಕ್ರೇಜಾ ಅವರು ತಮ್ಮ ಅಧ್ಯಯನದ ಪ್ರಕಾರ ಭಾರತದಲ್ಲಿರುವ ದೇಗುಲ ನಗರಗಳು ಸಾಮಾನ್ಯವಾಗಿ ಸಹಜವಾಗಿಯೇ ಬೆಳೆಯುತ್ತವೆ ಎಂದು ಹೇಳಿದ್ದಾರೆ. ಇದರಿಂದಾಗಿ ಅಲ್ಲಿನ ಸ್ಥಳೀಯ ಆಡಳಿತಕ್ಕೆ ಮೂಲಭೂತ ವ್ಯವಸ್ಥೆಗಳ ನಿರ್ವಹಣೆ ಕಷ್ಟಕರವಾಗುತ್ತದೆ. ಆದರೆ, ವಿದೇಶೀ ಧಾರ್ಮಿಕ ಕೇಂದ್ರಗಳನ್ನು ಬಹುತೇಕ ವ್ಯವಸ್ಥಿತವಾಗಿ ಯೋಜನೆ ರೂಪಿಸಿ ಅಭಿವೃದ್ಧಿ ಪಡಿಸಲಾಗಿರುತ್ತದೆ.
ಈ ಹಿನ್ನೆಲೆಯಲ್ಲಿ, ಅಯೋಧ್ಯೆಯಲ್ಲಿ 1,200 ಎಕರೆ ಪ್ರದೇಶದಲ್ಲಿ ಸ್ಮಾರ್ಟ್ ನಗರದ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಯೋಜನೆ ನಗರದ ಸೌಂದರ್ಯ ಹಾಳುಮಾಡುವಂತಹ ನೇತಾಡುವ ವೈರ್‌ಗಳು, ತೆರೆದ ಚರಂಡಿಗಳ ಸಮಸ್ಯೆಗಳನ್ನು ನಿವಾರಿಸಿ, ಅವುಗಳ ಬದಲು ಪ್ರವಾಸಿಗರಿಗೆ ಸ್ವಚ್ಛ, ಸುರಕ್ಷಿತ ವಾಸದ ವ್ಯವಸ್ಥೆ ಒದಗಿಸುವ ಗುರಿ ಹೊಂದಿತ್ತು.
ಕುಕ್ರೇಜಾ ಅವರು ತಮ್ಮ ಯೋಜನೆಗಳಲ್ಲಿ, ಸ್ಥಳೀಯರಿಗೆ ಆರ್ಥಿಕವಾಗಿ ನೆರವಾಗುವ ನಿಟ್ಟಿನಲ್ಲಿ ಮತ್ತು ಪ್ರವಾಸಿಗರ ಅನುಭವವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಹೋಮ್ ಸ್ಟೇ ವ್ಯವಸ್ಥೆಗಳನ್ನು ಉತ್ತಮಪಡಿಸುವ ಯೋಜನೆಗಳು ಸೇರಿವೆ ಎಂದಿದ್ದಾರೆ. ವಿವಿಧ ರೀತಿಯ ವಸತಿ ವ್ಯವಸ್ಥೆಗಳನ್ನು ಉದ್ದೇಶಿಸಲಾಗಿದ್ದು, ಇದರಲ್ಲಿ ಬಾಡಿಗೆ ರಹಿತ ವ್ಯವಸ್ಥೆಗಳೂ ಸೇರಿವೆ ಎಂದಿದ್ದಾರೆ.
ಪ್ರಸ್ತುತ ಅಯೋಧ್ಯೆಯಲ್ಲಿ ಒಂದೇ ಅತ್ಯುನ್ನತ ಗುಣಮಟ್ಟದ ವಸತಿ ವ್ಯವಸ್ಥೆಯಿದೆ. 80 ಕೊಠಡಿಗಳನ್ನು ಹೊಂದಿರುವ ಈ ಹೊಟೆಲ್ ಅನ್ನು ರ‌್ಯಾಡಿಸನ್ ಹೋಟೆಲ್ ಗುಂಪಿನ ಭಾಗವಾದ ಸರೋವರ್ ಹೋಟೆಲ್ ಗ್ರೂಪ್ ನಿರ್ವಹಿಸುತ್ತಿದೆ.
ಸರೋವರ್ ಗ್ರೂಪ್ ಆಫ್ ಹೋಟೆಲ್ ಅಧ್ಯಕ್ಷರು ಮತ್ತು ನಿರ್ವಾಹಕ ನಿರ್ದೇಶಕರಾಗಿರುವ ಅಜಯ್ ಬಕಾಯ ಅವರು ವರ್ಷಾದ್ಯಂತ ಅಯೋಧ್ಯೆಯ ತಮ್ಮ ಹೋಟೆಲ್ 90% ತುಂಬಿರುವ ನಿರೀಕ್ಷೆ ಹೊಂದಿದ್ದಾರೆ. ಪ್ರಸ್ತುತ ಅಯೋಧ್ಯೆಯಲ್ಲಿ ವಿವಿಧ ಹೊಟೆಲ್ ಸಂಸ್ಥೆಗಳು 15-20 ಹೊಟೆಲ್‌ಗಳನ್ನು ನಿರ್ಮಿಸುತ್ತಿವೆ ಎಂದು ಅವರು ಮಾಹಿತಿ ನೀಡುತ್ತಾರೆ. ಮುಂದಿನ ಐದರಿಂದ ಆರು ವರ್ಷಗಳ ಅವಧಿಯಲ್ಲಿ, ಅಯೋಧ್ಯೆಯಲ್ಲಿ 2,500ರಿಂದ 3,000 ಹೆಚ್ಚುವರಿ ಹೊಟೆಲ್ ಕೊಠಡಿಗಳು ಲಭ್ಯವಾಗಲಿವೆ ಎಂದು ಅವರು ನಿರೀಕ್ಷಿಸುತ್ತಾರೆ.
ನೂರಕ್ಕೂ ಹೆಚ್ಚು ಹೋಟೆಲ್‌ಗಳನ್ನು ಹೊಂದಿರುವ ಸರೋವರ್ ಹೊಟೆಲ್ ಗ್ರೂಪ್ ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರಮುಖ ವಹಿವಾಟು ಹೊಂದಿದೆ. ಈ ಸಂಸ್ಥೆ ಸಿಖ್ಖರ ಪವಿತ್ರ ಸ್ವರ್ಣ ಮಂದಿರವಿರುವ ಪಂಜಾಬಿನ ಅಮೃತಸರದಲ್ಲಿ, ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ಮಂದಿರದ ಬಳಿ ತನ್ನ ಹೊಟೆಲ್‌ಗಳನ್ನು ಹೊಂದಿದೆ.
ಬಿಜೆಪಿ ಸರ್ಕಾರದ ಕಳೆದ ಹತ್ತು ವರ್ಷಗಳ ಆಡಳಿತ ಅವಧಿಯಲ್ಲಿ, ಅಯೋಧ್ಯೆಯ ಜೊತೆಗೆ ವಾರಣಾಸಿ ಮತ್ತು ಮಥುರಾದಂತಹ ಪವಿತ್ರ ಕ್ಷೇತ್ರಗಳೂ ಅಭಿವೃದ್ಧಿ ಹೊಂದುತ್ತಿವೆ. ಒಂದು ವೇಳೆ ಬಿಜೆಪಿ ಈ ವರ್ಷ ಮರಳಿ ಅಧಿಕಾರ ಪಡೆಯಲು ಸಾಧ್ಯವಾದರೆ, ಈ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ಹೆಚ್ಚಳಗೊಳ್ಳುವ ಸಾಧ್ಯತೆಗಳಿವೆ.
ಓರ್ವ ಪ್ರವಾಸಿ ಬಹುತೇಕ ಹತ್ತು ವರ್ಷಗಳ ಬಳಿಕ, ಕಳೆದ ಡಿಸೆಂಬರ್ ತಿಂಗಳಲ್ಲಿ ವಾರಣಾಸಿಗೆ ತೆರಳಿದಾಗ ಅಲ್ಲಿ ನಡೆದ ಅಭಿವೃದ್ಧಿ ಗಮನಿಸಿ ತಾನು ಆಶ್ಚರ್ಯಚಕಿತನಾದೆ ಎಂದಿದ್ದಾರೆ.
ಅವರು ತಾನು ವಾರಣಾಸಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅಲ್ಲಿ ಆರು ವಿಮಾನಗಳು ಬಂದಿದ್ದು ನೋಡಿ ವಿಶೇಷವೆನಿಸಿತು ಎಂದಿದ್ದರು. ತಾನು ಹಿಂದಿನ ಬಾರಿ ತೆರಳಿದ್ದಾಗ ಅಲ್ಲಿ ಕೇವಲ ಒಂದು ವಿಮಾನ ಮಾತ್ರವೇ ಇತ್ತು ಎಂದು ಅವರು ಮಾಹಿತಿ ನೀಡಿದ್ದಾರೆ. ಕಳೆದ ಬಾರಿ ವಿಮಾನ ನಿಲ್ದಾಣದಿಂದ ನಗರದೊಳಗಿನ ಹೋಟೆಲ್ ತಲುಪಲು ಒಂದೂವರೆ ಗಂಟೆ ಸಮಯ ಹಿಡಿದರೆ, ಈ ಬಾರಿ ಕೇವಲ ಮೂವತ್ತು ನಿಮಿಷಗಳು ಸಾಕಾಯಿತು ಎಂದು ಅವರು ಹೇಳಿದ್ದಾರೆ.
ನಗರದ ರಸ್ತೆಗಳು ಈಗ ವಿಶಾಲವಾಗಿದ್ದು, ಕಾಶಿ ವಿಶ್ವನಾಥ ಮಂದಿರದಿಂದ ಗಂಗಾ ನದಿಗೆ ಪ್ರಾರ್ಥನೆ ಸಲ್ಲಿಸುವ ಸ್ಥಳಕ್ಕೆ ತೆರಳುವ ಮಾರ್ಗಗಳೂ ಅಭಿವೃದ್ಧಿ ಹೊಂದಿವೆ ಎಂದಿದ್ದಾರೆ. "ಅಯೋಧ್ಯೆಯ ರಾಮ ಮಂದಿರದಲ್ಲಿ ಈಗಿನ ಹೆಚ್ಚಿನ ಜನ ಸಂದಣಿ ಕಡಿಮೆಯಾದ ಬಳಿಕ, ನಾನು ಕುಟುಂಬದವರೊಡನೆ ಅಲ್ಲಿಗೆ ತೆರಳುವುದನ್ನು ಎದುರು ನೋಡುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.