Crime News: ನಾಲ್ಕು ವರ್ಷದ ಕಂದಮ್ಮನನ್ನೇ ಕೊಲೆಗೈದು ಬ್ಯಾಗ್‌ನಲ್ಲಿ ಶವವಿಟ್ಟುಕೊಂಡು ಕಾರಿನಲ್ಲಿ ಗೋವಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳನ್ನು ಚಿತ್ರದುರ್ಗದ ಐಮಂಗಲ ಠಾಣೆ ಪೊಲೀಸರು ಸೋಮವಾರ (ಜನವರಿ 08, 2024)  ರಾತ್ರಿ ಬಂಧಿಸಿದ್ದಾರೆ. 


COMMERCIAL BREAK
SCROLL TO CONTINUE READING

ಬಂಧಿತ ಆರೋಪಿ ಮಹಿಳೆಯನ್ನು ಸುಚನಾ ಸೇಠ್ ಎಂದು ಗುರುತಿಸಲಾಗಿದ್ದು, ಈಕೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಸ್ಟಾರ್ಟ್ಅಪ್ ಸಂಸ್ಥಾಪಾಕಿ ಎಂದು ತಿಳಿದುಬಂದಿದೆ. ಇನ್ನು ಆರೋಪಿ ಬಂಧನದ ಬಳಿಕ ಚಿತ್ರದುರ್ಗಕ್ಕೆ ಆಗಮಿಸಿದ ಗೋವಾ ಪೊಲೀಸರು ಸುಚನಾ ಸೇಥ್‌ ಅವರನ್ನು ಗೋವಾಕ್ಕೆ ಕರೆದು ಕೊಂಡು ಹೋಗಿದ್ದಾರೆ.


ಮೈಂಡ್‌ಫುಲ್‌ ಎಐ ಲ್ಯಾಬ್ಸ್‌ ಎಂಬ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಸ್ಟಾರ್ಟ್ಅಪ್ ಕಂಪನಿಯ ಸಹ  ಸಂಸ್ಥಾಪಕಿ, ಸಿಇಒ ಕೂಡ ಆಗಿರುವ 39 ವರ್ಷದ ಸುಚನಾ  ಸೇಠ್, ತನ್ನ ನಾಲ್ಕು ವರ್ಷದ ಮಗನೊಂದಿಗೆ ಇದೇ ಶನಿವಾರ (ಜನವರಿ 06)  ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆ ಅರ್ಪಾಟ್‌ಮೆಂಟ್‌ಗೆ ಬಂದಿದ್ದಳು. ಎರಡು ದಿನಗಳ ಕಾಲ ಅಲ್ಲಿಯೇ ಇದ್ದ ಸುಚನಾ  ಸೇಠ್ ಭಾನುವಾರ(ಜನವರಿ 07)  ಬೆಂಗಳೂರಿಗೆ ಟ್ಯಾಕ್ಸಿ ಬುಕ್ ಮಾಡುವಂತೆ ಅರ್ಪಾಟ್‌ಮೆಂಟ್‌ ಸಿಬ್ಬಂದಿಗೆ ಹೇಳಿದ್ದಾಳೆ. ಈ ಸಂದರ್ಭದಲ್ಲಿ ಅಪಾರ್ಟ್ಮೆಂಟ್ ಸಿಬ್ಬಂದಿ ಆಕೆಗೆ ವಿಮಾನದಲ್ಲಿ ತೆರಳುವಂತೆ ಸಲಹೆ ನೀಡಿದರೂ ತಾನು ಟ್ಯಾಕ್ಸಿಯಲ್ಲಿಯೇ ಹೋಗಬೇಕೆಂದಿರುವ ಮಹಿಳೆ ಸಿಬ್ಬಂದಿಗೆ ಟ್ಯಾಕ್ಸಿ ಬುಕ್ ಮಾಡಲು ತಾಕೀತು ಮಾಡಿದ್ದಾಳೆ. 


ಇದನ್ನೂ ಓದಿ- ಮಗು ಮಾರಾಟ ಜಾಲ ಭೇದಿಸಿದ ಪೊಲೀಸರು: ತಾಯಿ ಸೇರಿ ಐವರ ಬಂಧನ


ಸೋಮವಾರ (ಜನವರಿ 8)  ಬೆಳಿಗ್ಗೆ ಅರ್ಪಾಟ್‌ಮೆಂಟ್‌ಗೆ ಬಂದ ಟ್ಯಾಕ್ಸಿಯಲ್ಲಿ ತನ್ನ ಮಗುವಿನ ಶವವನ್ನು ಬ್ಯಾಗ್‌ನಲ್ಲಿ ತುಂಬಿ ಆ ಬ್ಯಾಗ್ ತೆಗೆದುಕೊಂಡು ಮಹಿಳೆ ಪಯಣ ಬೆಳೆಸಿದ್ದಾಳೆ. ಮಹಿಳೆಯ ಅನುಮಾನಾಸ್ಪದ ನಡವಳಿಕೆಯನ್ನು ಗಮನಿಸಿದ ಸಿಬ್ಬಂದಿ ಮಹಿಳೆ ತೆರಳುತ್ತಿದ್ದಂತೆ ಆಕೆ ತಂಗಿದ್ದ ಕೊಠಡಿಗೆ ಹೋಗಿ ಪರಿಶೀಲಿಸಿದಾಗ ಅಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. 


ಈ ಸಂದರ್ಭದಲ್ಲಿ ಆಕೆಯೊಂದಿಗಿದ್ದ ಮಗುವಿನ ಕೊಲೆಯಾಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ ಅಪಾರ್ಟ್ಮೆಂಟ್ ಸಿಬ್ಬಂದಿ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಎಚ್ಚೆತ್ತ ಆಡಳಿತ ಮಂಡಳಿ, ಟ್ಯಾಕ್ಸಿ ಚಾಲಕನನ್ನು ಸಂಪರ್ಕಿಸಿ ಸುಚನಾ  ಸೇಠ್ ಅವರ ಜತೆ ಮಾತನಾಡುತ್ತಾ ಮಗುವಿನ ವಿಚಾರ ಪ್ರಸ್ತಾಪಿಸುವಂತೆ ಸೂಚಿಸಿದ್ದಾರೆ. ಅದರಂತೆ ಚಾಲಕ ಮಾತನಾಡುತ್ತಾ ಮಗುವಿನ ಬಗ್ಗೆ ಕೇಳಿದಾಗ, ಮಗ ತನ್ನ ಸ್ನೇಹಿತನೊಂದಿಗೆ ಇದ್ದಾನೆ ಎಂದು ಹೇಳಿ ಆಕೆ ವಿಳಾಸವನ್ನು ಸಹ ನೀಡಿದ್ದಾಳೆ. ಆದರೆ ಆ ವಿಳಾಸ ನಕಲಿ ಎಂದು ತಿಳಿದು ಬಂದಿದೆ. ಈ ಎಲ್ಲ ವಿಷಯಗಳ ಬಗ್ಗೆ ಅಪಾರ್ಟ್ಮೆಂಟ್ ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿ ಗೋವಾ ಪೊಲೀಸರಿಗೆ ವಿವರವಾಗಿ ಮಾಹಿತಿ ನೀಡಿದ್ದಾರೆ. 


ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಕಾರ್ ಚಾಲಕನನ್ನು ಸಂಪರ್ಕಿಸಿ ಕೊಂಕಣಿಯಲ್ಲಿ ಮಾತನಾಡಿದ ಗೋವಾ ಪೊಲೀಸರು ಟ್ಯಾಕ್ಸಿಯನ್ನು ಸಮೀಪದ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗುವಂತೆ ಆತನಿಗೆ ಸೂಚಿಸಿದ್ದರು. ಪೊಲೀಸರ ಮಾರ್ಗದರ್ಶನದಂತೆ  ಸೋಮವಾರ ಸಂಜೆ ವೇಳೆ  ರಾಷ್ಟ್ರೀಯ ಹೆದ್ದಾರಿಯ ಐಮಂಗಲ ಬಳಿ ಇದ್ದ ಚಾಲಕ ಕಾರನ್ನು ಹೆದ್ದಾರಿ ಪಕ್ಕದ ಪೊಲೀಸ್‌ ಠಾಣೆಗೆ ತೆಗೆದುಕೊಂಡು ಹೋಗಿದ್ದಾನೆ. ಈ ವೇಳೆ ಕಾರನ್ನು ಪರಿಶೀಲಿಸಿದ ಪೊಲೀಸರಿಗೆ ಬ್ಯಾಗ್‌ನಲ್ಲಿ ಮಗುವಿನ ಶವ ಇರುವುದು ಪತ್ತೆಯಾಗಿದೆ. ತಕ್ಷಣವೇ ಪೊಲೀಸರು ಸುಚನಾ  ಸೇಠ್ (39) ಅವರನ್ನು ಬಂಧಿಸಿದ್ದಾರೆ. ಆದಾಗ್ಯೂ,  ಮಗುವಿನ ಹತ್ಯೆ ಹೇಗಾಯಿತು, ಇದಕ್ಕೆ ಕಾರಣವೇನು ಎಂಬಿತ್ಯಾದಿ ವಿಷಯಗಳ ಬಗ್ಗೆ ಸುಚನಾ  ಸೇಠ್ ಈವರೆಗೂ ಏನನ್ನೂ ಹೇಳಿಲ್ಲ ಎಂದು ತಿಳಿದುಬಂದಿದೆ. 


ಇದನ್ನೂ ಓದಿ- ಕಾರ್ಮಿಕರು ಮಲಗಿದ್ದ ಗುಡಿಸಲಿಗೆ ನುಗ್ಗಿದ ಲಾರಿ: ಐವರ ಸ್ಥಿತಿ ಗಂಭೀರ


ಸದ್ಯ ಹತ್ಯೆಗೀಡಾದ ಮಗುವನ್ನು ಮರಣೋತ್ತರ ಪರೀಕ್ಷೆಗಾಗಿ ಹಿರಿಯೂರು ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ. ಸುಚನಾ  ಸೇಠ್ ಬಂಧನದ ಬಳಿಕ ತಡರಾತ್ರಿ ಚಿತ್ರದುರ್ಗಕ್ಕೆ ಆಗಮಿಸಿದ ಗೋವಾ ಪೊಲೀಸರು ಆಕೆಯನ್ನು ಗೋವಾಕ್ಕೆ ಕರೆದು ಕೊಂಡು ಹೋಗಿದ್ದಾರೆ.


ಯಾರು ಈ ಸುಚನಾ  ಸೇಠ್? 
ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಸ್ಟಾರ್ಟ್ಅಪ್ ಆಗಿರುವ ಮೈಂಡ್‌ಫುಲ್‌ ಎಐ ಲ್ಯಾಬ್ಸ್‌ನ ಲಿಂಕ್ಡ್‌ ಇನ್ ಪೇಜ್ ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, "ಸುಚನಾ  ಸೇಠ್ 2021 ರ ಎಐ ಎಥಿಕ್ಸ್‌ನಲ್ಲಿ 100 ಅದ್ಭುತ ಮಹಿಳೆಯರಲ್ಲಿ ಅಗ್ರಸ್ಥಾನದಲ್ಲಿದ್ದರು. ಹಾರ್ವರ್ಡ್‌ ವಿಶ್ವವಿದ್ಯಾಲಯದ ಬರ್ಕ್‌ಮನ್‌ ಕ್ಲೈನ್‌ ಸೆಂಟರ್‌ನಲ್ಲಿ ಸಹವರ್ತಿ ಮತ್ತು ಡೇಟಾ ಸೈನ್ಸ್ ತಂಡಗಳಿಗೆ ಮಾರ್ಗದರ್ಶನ ನೀಡುವಲ್ಲಿ ಈಕೆಗೆ ಸರಿಸುಮಾರು  12 ವರ್ಷದ ಅನುಭವವಿದೆ" ಎಂದು ತಿಳಿದುಬಂದಿದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.