ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಇನ್ನುಮುಂದೆ ಗರ್ಭಗುಡಿಗೆ ಪ್ರವೇಶಿಸುವ ಭಕ್ತರಿಗೆ (ಪುರುಷರು ಮತ್ತು ಮಹಿಳೆಯರಿಗೆ) ಡ್ರೆಸ್ ಕೋಡ್ ಪರಿಚಯಿಸಲಾಗಿದೆ. ಹೊಸ ನಿಯಮದ ಪ್ರಕಾರ, ಪುರುಷರು ಭಾರತೀಯ ಹಿಂದೂ ಸಾಂಪ್ರದಾಯಿಕ ಉಡುಪಿನ 'ಧೋತಿ-ಕುರ್ತಾ' ಮತ್ತು ಮಹಿಳೆಯರು ಸೀರೆ ಅಥವಾ ಕುರ್ತಾ ಧರಿಸಿ ಮಾತ್ರ ದೇವಾಲಯದ ಗರ್ಭಗುಡಿಯೊಳಗೆ ಪ್ರವೇಶ ಪಡೆಯಬಹುದಾಗಿದೆ.  


COMMERCIAL BREAK
SCROLL TO CONTINUE READING

ನಮಸ್ಕಾರ ಸಲ್ಲಿಸಲು ಭಕ್ತರಿಗೆ ಗರ್ಭಗೃಹಕ್ಕೆ ಪ್ರವೇಶಿಸಲು ಅನುಮತಿ ಬೆಳಿಗ್ಗೆ 11 ರವರೆಗೆ ಇರುತ್ತದೆ. ಕಾಶಿ ವಿದ್ವತ್ ಪರಿಷತ್ ಈ ನಿರ್ಧಾರ ಕೈಗೊಂಡಿದೆ. ನಿಯಮವನ್ನು ಕಟ್ಟುನಿಟ್ಟಾಗಿ ಅನ್ವಯಿಸಲಾಗುವುದು ಮತ್ತು ಪ್ಯಾಂಟ್, ಶರ್ಟ್ ಮತ್ತು ಜೀನ್ಸ್ ಧರಿಸಿದ ಜನರು ದೂರದಿಂದ ದೇವರಿಗೆ ನಮಸ್ಕರಿಸಲು ಸಾಧ್ಯವಾಗುತ್ತದೆ. ಅವರಿಗೆ ದೇವಾಲಯದ ಗರ್ಭಗುಡಿಗೆ ಪ್ರವೇಶಿಸಲು ಅವಕಾಶವಿರುವುದಿಲ್ಲ. ಈ ಹೊಸ ನಿಯಮವನ್ನು ಜಾರಿಗೆ ತರುವ ದಿನಾಂಕಗಳನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, ಶೀಘ್ರದಲ್ಲೇ ಈ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.


ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರವಾಗಿರುವ ವಾರಣಾಸಿ ಪವಿತ್ರ ಪಟ್ಟಣ ಎಂದು ಮಹತ್ವ ಪಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಹಲವಾರು ಅಭಿವೃದ್ಧಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮಾರ್ಚ್ 2019 ರಲ್ಲಿ ಪಿಎಂ ಮೋದಿ ಪ್ರಸಿದ್ಧ ದೇವಾಲಯಕ್ಕೆ ಅಪ್ರೋಚ್ ರಸ್ತೆಯ ಅಡಿಪಾಯ ಹಾಕಿದರು ಮತ್ತು ಸುಂದರೀಕರಣ ಮತ್ತು ಬಲಪಡಿಸುವ ಯೋಜನೆಯನ್ನು ಅನಾವರಣಗೊಳಿಸಿದರು.


ಗಂಗಾ ನದಿ ಮತ್ತು ಕಾಶಿ ವಿಶ್ವನಾಥ ದೇವಾಲಯದ ನಡುವೆ ನೇರ ಸಂಪರ್ಕವನ್ನು ಸ್ಥಾಪಿಸಲಾಗುತ್ತಿದೆ. ಈ ಯೋಜನೆಯು ಬೇರೆಡೆ ಇದೇ ರೀತಿಯ ಯೋಜನೆಗಳಿಗೆ ಮಾದರಿಯಾಗಲಿದೆ ಮತ್ತು ಕಾಶಿಗೆ ಹೊಸ ಜಾಗತಿಕ ಗುರುತನ್ನು ನೀಡುತ್ತದೆ ಎಂದು ಪಿಎಂ ಮೋದಿ ಹೇಳಿದ್ದಾರೆ.


ವಾರಣಾಸಿಯಲ್ಲಿನ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಯೋಗಿ ಆದಿತ್ಯನಾಥ್ ಸರ್ಕಾರವು ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯ ಸೇರಿದಂತೆ ನಗರದ ಸುಮಾರು 108 ಧಾರ್ಮಿಕ ಸ್ಥಳಗಳನ್ನು ಸಂಪರ್ಕಿಸುವ ಪವಿತ್ರ ಮಾರ್ಗವನ್ನು ನಿರ್ಮಿಸಲು ನಿರ್ಧರಿಸಿದೆ. ಕಾಶಿ ವಿಶ್ವನಾಥ್, ನವಭೌರಿ, ಮಾನಸ್ ಜ್ಯೋತಿರ್ಲಿಂಗ ಮತ್ತು ನವದುರ್ಗ ಸೇರಿದಂತೆ ಧಾರ್ಮಿಕ ತಾಣಗಳನ್ನು ಹೊಸ ಮಾರ್ಗದ ಮೂಲಕ ಸಂಪರ್ಕಿಸಲಾಗುವುದು ಎಂದು ವಾರಣಾಸಿಗೆ ಸೇರಿದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ನೀಲಕಂಠ ತಿವಾರಿ ಹೇಳಿದ್ದಾರೆ. ಸಚಿವರ ಪ್ರಕಾರ, ಪ್ರವಾಸಿಗರು ಮತ್ತು ಭಕ್ತರು ಒಂದೇ ಮಾರ್ಗವನ್ನು ಅನುಸರಿಸಿ ವಿವಿಧ ಪವಿತ್ರ ಸ್ಥಳಗಳಿಗೆ ಭೇಟಿ ನೀಡಲು ಅನುಕೂಲವಾಗಲಿದೆ.