ನವದೆಹಲಿ: ಆಷಾಡ ಮಾಸ ಎಂದ ತಕ್ಷಣ ಎಲ್ಲರೂ ಅದೊಂದು ಕೆಟ್ಟ ಮಾಸ, ಯಾವುದೇ ಶುಭ ಕಾರ್ಯಗಳನ್ನು ಮಾಡುವುದು ಈ ಮಾಸದಲ್ಲಿ ಒಳ್ಳೆಯದಲ್ಲ, ದಂಪತಿಗಳು ದೂರ ಇರಬೇಕು...ಹೀಗೆ ಹಿರಿಯರು ಹೇಳುವ ಸಾಕಷ್ಟು ಮಾತುಗಳನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ, ಕೇವಲ ಈ ಮಾತುಗಳಿಂದ ಆಷಾಡ ಮಾಸದ ಬಗ್ಗೆ ಅಂತಿಮ ಅಭಿಪ್ರಾಯ ಒಳ್ಳೆಯದಲ್ಲ. ಏಕೆಂದರೆ ಈ ಮಾಸಕ್ಕೆ ವಿಶೇಷ ಮಹತ್ವ ಇದೆ... ಅದಕ್ಕೆ ಕಾರಣ ಆಷಾಢ ಏಕಾದಶಿ ಉಪವಾಸ.


COMMERCIAL BREAK
SCROLL TO CONTINUE READING

ಆಷಾಡ ಮಾಸದ ಏಕಾದಶಿ ಉಪವಾಸಕ್ಕೆ ಕಾರಣ ಏನು?
ಆಷಾಢ ಮಾಸದ ಶುಕ್ಲ ಪಕ್ಷದಲ್ಲಿನ ಏಕಾದಶಿಯನ್ನು ‘ದೇವಶಯನಿ(ದೇವರ ನಿದ್ರೆಯ) ಏಕಾದಶಿ’ ಎನ್ನುತ್ತಾರೆ ಮತ್ತು ಕೃಷ್ಣ ಪಕ್ಷದಲ್ಲಿನ ಏಕಾದಶಿಯನ್ನು ‘ಕಾಮಿಕಾ ಏಕಾದಶಿ’ ಎನ್ನುತ್ತಾರೆ. ಪುರಾಣದ ಪ್ರಕಾರ, ಒಮ್ಮೆ ದೇವತೆಗಳು ಮತ್ತು ರಾಕ್ಷಸರ ನಡುವೆ ಯುದ್ಧ ಆರಂಭವಾದಾಗ, ಕುಂಭದೈತ್ಯನ ಮಗನಾದ ಮೃದುಮಾನ್ಯನು ತಪಸ್ಸು ಮಾಡಿ ಶಂಕರನಿಂದ ಅಮರತ್ವವನ್ನು ಪಡೆಯುತ್ತಾನೆ. ಆದ್ದರಿಂದ ಅವನು ಬ್ರಹ್ಮದೇವ, ವಿಷ್ಣು, ಶಿವ ಎಲ್ಲ ದೇವತೆಗಳಿಗೆ ಅಜೇಯನಾದ. ದೇವತೆಗಳು ಅವನ ಭಯದಿಂದ ತ್ರಿಕುಟ ಪರ್ವತದ ಮೇಲೆ ನೆಲ್ಲಿಕಾಯಿ ಮರದ ಕೆಳಗಿನ ಗುಹೆಯಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ. ಅಂದು ಅವರು ಆಹಾರವಿಲ್ಲದೆ ಉಪವಾಸ ಇರಬೇಕಾಗುತ್ತದೆ. ಅಲ್ಲದೆ, ಮಳೆ ನೀರಿನಲ್ಲಿಯೇ ಸ್ನಾನ ಮಾಡುತ್ತಾರೆ. ಆ ಸಂದರ್ಭದಲ್ಲಿ ದೇವತೆಗಳ ಸಹವಾಸದಿಂದ ಒಂದು ಶಕ್ತಿ ಉತ್ಪತ್ತಿಯಾಗಿ ಹೊರಬಂದು, ಗುಹೆಯ ಹೊರಗೆ ಕಾಯುತ್ತಿದ್ದ ಮ್ರುದುಮಾನ್ಯ ರಾಕ್ಷಸನನ್ನು ಸಂಹಾರ ಮಾಡುತ್ತದೆ. ಹೀಗೆ ದೇವತೆಗಳ ಉಪವಾಸದಿಂದ ಉಗಮವಾದ ಶಕ್ತಿದೇವತೆಯೇ, ಏಕಾದಶಿ ದೇವತೆ ಎನ್ನಲಾಗಿದೆ. ಹಾಗಾಗಿ ವರ್ಷದ ಇತರ ಏಕಾದಶಿಗಳಲ್ಲಿ  ಉಪವಾಸ ವ್ರತ ಆಚರಣೆ ಮಾಡುವುದಕ್ಕಿಂತ, ಆಷಾಢ ಏಕಾದಶಿಯಲ್ಲಿ ಮಾಡುವ ಉಪವಾಸ ಹೆಚ್ಚು ಶಕ್ತಿಶಾಲಿ ಹಾಗೂ ಫಲಪ್ರದ ಎನ್ನಲಾಗುತ್ತದೆ. 


ಏಕಾದಶಿಯಂದು ಉಪವಾಸ ಏಕೆ ಮಾಡಬೇಕು?
ಆಷಾಢ ಏಕಾದಶಿಯಂದು ಉಪವಾಸ ವ್ರತ ಕೈಗೊಂಡರೆ ವ್ಯಕ್ತಿ ಮಾಡಿದ ಪಾಪಗಳೆಲ್ಲ ನಾಶವಾಗುತ್ತವೆ ಎಂಬ ನಂಬಿಕೆ ನಮ್ಮಲ್ಲಿದೆ. ಪ್ರತಿ ಮಾಸದಲ್ಲೂ ಬರುವ ಎರಡು ಏಕಾದಶಿ ಅಂದರೆ ವರ್ಷಕ್ಕೆ ಬರುವ ಎಲ್ಲಾ 24 ಏಕಾದಶಿಗಳಲ್ಲೂ ಉಪವಾಸ ವ್ರತ ಕೈಗೊಳ್ಳುವವರಿದ್ದಾರೆ. ತಾವು ಬದುಕಿನಲ್ಲಿ ಮಾಡಿದ ತಪ್ಪುಗಳನ್ನೆಲಾ ಕ್ಷಮಿಸಿ, ಪಾಪಗಳನ್ನು ಹೋಗಲಾಡಿಸುವಂತೆ ಆ ದೇವನಲ್ಲಿ ಪ್ರಾರ್ಥಿಸುತ್ತಾರೆ. ಆದರೆ, ಎಲ್ಲ ಏಕಾದಶಿಗಿಂತ ಆಷಾಢ ಏಕಾದಶಿಯಂದು ಉಪವಾಸ ಮಾಡಿದರೆ ಆ ದೇವರು ಹೆಚ್ಚು ಸಂತುಷ್ಟನಾಗುತ್ತಾನೆ, ಪಾಪಕರ್ಮಗಳನ್ನೆಲ್ಲಾ ಕಳೆಯುತ್ತಾನೆ ಎಂಬ ನಂಬಿಕೆ ಇರುವುದರಿಂದಲೇ, ಜನರು ಈ ಏಕಾದಶಿಯಂದು ಕಠಿಣ ಉಪವಾಸ ಮಾಡುತ್ತಾರೆ. 


‘ದೇವಶಯನಿ(ದೇವರ ನಿದ್ರೆಯ) ಏಕಾದಶಿ’ ಎನ್ನುವುದು ಏಕೆ?
ಆಷಾಢ ಶುದ್ಧ ಏಕಾದಶಿಯನ್ನು ಶಯನಿ ಏಕಾದಶಿ, ಮಹಾ ಏಕಾದಶಿ, ಪ್ರಥಮ ಏಕಾದಶಿ, ಪದ್ಮ ಏಕಾದಶಿ, ದೇವಶಯನಿ ಏಕಾದಶಿ, ದೇವಪೋಢಿ ಏಕಾದಶಿ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಈ ದಿನದಂದು ಭಗವಾನ್ ವಿಷ್ಣುವು ನಿದ್ರಿಸಲು ತೆರಳುತ್ತಾನೆಂಬ ನಂಬಿಕೆಯಿದೆ. ವಿಷ್ಣುವು ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆಗೆ ಈ ದಿನ ಮಲಗಿ ನಿದ್ದೆಗೆ ಜಾರುತ್ತಾನೆ ಎಂಬ ನಂಬಿಕೆ ಇದೆ. ಈ ಕಾರಣದಿಂದ ಇದನ್ನು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ ಎಂದು ಕರೆಯಲಾಗುತ್ತದೆ. ಶುಕ್ಲ ಪಕ್ಷದ ಆಷಾಡ ಏಕಾದಶಿಯಂದು ನಿದ್ದೆಗೆ ತೆರಳುವ ವಿಷ್ಣು, ಕೃಷ್ಣಪಕ್ಷದ ಏಕಾದಶಿಯಂದು, ಅಂದರೆ ನಾಲ್ಕು ತಿಂಗಳ ನಂತರ ನಿದ್ದೆಯಿಂದ ಎಚ್ಚರಗೊಳ್ಳುತ್ತಾನೆ. ಹಾಗಾಗಿ ವಿಷ್ಣು ನಿದ್ದೆಗೆ ತೆರಳುವ ಆಷಾಢ ಏಕಾದಶಿಯಂದು ದೇವರನ್ನು ಸಂತುಷ್ಟಗೊಳಿಸಲು ಜನರು ಕಠಿಣ ಉಪವಾಸ ವ್ರತ ಕೈಗೊಳ್ಳುತ್ತಾರೆ. ಏಕಾದಶಿಯಂದು ಪ್ರಾತಃಸ್ನಾನ ಮಾಡಿ ತುಳಸಿಯನ್ನು ಅರ್ಪಿಸಿ, ವಿಷ್ಣುವಿಗೆ ಪೂಜೆ ಸಲ್ಲಿಸಿ, ದಿನಪೂರ್ತಿ ಉಪವಾಸ ಇರುತ್ತಾರೆ.