History of Ganesh Chaturthi: ದೇಶದೆಲ್ಲೆಡೆ ಗಣೇಶ ಚತುರ್ಥಿ ಬೆಳೆದು ಬಂದ ಬಗೆ...
ಗಣೇಶ ಚತುರ್ಥಿ ಹಬ್ಬವನ್ನು ಪ್ರತಿವರ್ಷ ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸುವುದರಿಂದಾಗಿ ಈ ಹಬ್ಬವು ಈಗ ಸಾಂಸ್ಕೃತಿಕ ವಿದ್ಯಮಾನವಾಗಿ ಪರಿವರ್ತನೆಯಾಗಿದೆ.ಹಾಗಾಗಿ ಈ ಸಂದರ್ಭದಲ್ಲಿ ನಾವು ಗಣೇಶ ಚತುರ್ಥಿ ಹಬ್ಬವನ್ನು ಐತಿಹಾಸಿಕ ದೃಷ್ಟಿಕೋನದಿಂದ ನೋಡುವುದು ಸೂಕ್ತವೆನಿಸುತ್ತದೆ. ನಾವು ಗಣೇಶ್ ಚತುರ್ಥಿಯ ಹಬ್ಬದ ಮೂಲವನ್ನು ಹುಡುಕುತ್ತಾ ಹೋದಾಗ ಇದು ಪ್ರಮುಖವಾಗಿ ಮಹಾರಾಷ್ಟ್ರ ಭಾಗದಲ್ಲಿ ವ್ಯಾಪಕವಾಗಿ ಚಾಲ್ತಿಯಲ್ಲಿರುವುದನ್ನು ಕಾಣುತ್ತೇವೆ.
ಗಣೇಶ ಚತುರ್ಥಿಯ ಐತಿಹಾಸಿಕ ಹಿನ್ನೆಲೆ:
ಗಣೇಶ ಚತುರ್ಥಿಯನ್ನು ಪುಣೆಯಲ್ಲಿ ಸಾಂಪ್ರದಾಯಿಕವಾಗಿ ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಕಾಲದಿಂದಲೂ ಆಚರಿಸಲಾಗುತ್ತದೆ, ಗಣೇಶನು ಪೇಶ್ವೆಗಳ ಕುಲದೇವರಾಗಿದ್ದರಿಂದಾಗಿ ಆಗ ವೈಭವದಿಂದ ಆಚರಿಸಲಾಗುತ್ತಿತ್ತು. ಆದರೆ ಕಾಲಾಂತರದಲ್ಲಿ 1818 ರಲ್ಲಿ ಪೇಶ್ವೆಗಳ ಪತನದೊಂದಿಗೆ ಗಣೇಶೋತ್ಸವದ ಆಚರಣೆ ಮಹಾರಾಷ್ಟ್ರದಲ್ಲಿ ಕಳೆಗುಂದುತ್ತಾ ಬಂದಿತು.ಈ ಹಬ್ಬವು ಆರಂಭದಲ್ಲಿ ಮಹಾರಾಷ್ಟ್ರದಲ್ಲಿ ಖಾಸಗಿ ಕುಟುಂಬದ ಆಚರಣೆಯಾಗಿ ಚಾಲ್ತಿಯಲ್ಲಿತ್ತು, ಆದರೆ ಇದನ್ನು ಜನರ ಹಬ್ಬವಾಗಿ ಪರಿವರ್ತಿಸಿದ ಕೀರ್ತಿ ಬಾಲಗಂಗಾಧರ ತಿಲಕರಿಗೆ ಸಲ್ಲುತ್ತದೆ.ಅದರಲ್ಲೂ ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ಜನರನ್ನು ಸಂಘಟಿಸುವ ನಿಟ್ಟಿನಲ್ಲಿ ಈ ಹಬ್ಬಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿದರು.
ಪುಣೆ ನಿವಾಸಿಯಾಗಿದ್ದ ಕೃಷ್ಣಾಜಿಪಂತ್ ಖಾಸ್ಗಿವಾಲೆ ಅವರು ಗ್ವಾಲಿಯರ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸುವುದನ್ನು ನೋಡಿದ ನಂತರ ಅದನ್ನು ಮೊದಲ ಬಾರಿಗೆ ತಮ್ಮ ಸ್ನೇಹಿತರ ಗಮನಕ್ಕೆ ತಂದರು. ಇದರ ಭಾಗವಾಗಿ ಭೌ ರಂಗಾರಿ ಎಂದೂ ಕರೆಯಲ್ಪಡುವ ಜವಲೆ ಅವರು 1892 ರಲ್ಲಿ ಪುಣೆ ನಗರದಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಗಣೇಶನ ವಿಗ್ರಹವನ್ನು ಸ್ಥಾಪಿಸಿದರು.
ಸ್ವಾತಂತ್ರ ಚಳುವಳಿಯ ವೇದಿಕೆಯಾದ ಗಣೇಶ ಚತುರ್ಥಿ:
ಲೋಕಮಾನ್ಯ ತಿಲಕರು 1893 ರಲ್ಲಿ ತಮ್ಮ ಪತ್ರಿಕೆ ಕೇಸರಿಯಲ್ಲಿ ಬರೆದ ಲೇಖನದಲ್ಲಿ ಜಾವಲೆಯವರ ಪ್ರಯತ್ನಗಳನ್ನು ಶ್ಲಾಘಿಸಿದರು.ತದನಂತರ ಗಣೇಶ ಚತುರ್ಥಿಯನ್ನು ಸಾರ್ವಜನಿಕವಾಗಿ ಬೃಹತ್ ಪ್ರಮಾಣದಲ್ಲಿ ಆಚರಿಸಲು ಅವರು ಕರೆ ನೀಡಿದರು. ಇದರ ಭಾಗವಾಗಿ ತಿಲಕರು ಮೊದಲ ಬಾರಿಗೆ ಮಂಟಪಗಳಲ್ಲಿ ಬೃಹತ್ ಗಣೇಶನ ಮೂರ್ತಿಗಳನ್ನು ಸ್ಥಾಪಿಸಿದರು, ಅಷ್ಟೇ ಅಲ್ಲದೆ ಹಬ್ಬದ ಕೊನೆಯ ದಿನದಂದು ವಿಗ್ರಹಗಳನ್ನು ನದಿ, ಸಮುದ್ರ ಅಥವಾ ಹಳ್ಳ, ಕೊಳ್ಳಗಳಲ್ಲಿ ವಿಸರ್ಜಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ಸ್ವಾತಂತ್ರ ಚಳುವಳಿ ಸಂದರ್ಭದಲ್ಲಿ ರಾಜಕೀಯ ಸಭೆಗಳನ್ನು ಸೇರಲು ಬ್ರಿಟಿಷರು ನಿರ್ಬಂಧ ಹೇರಿದಾಗ ತಿಲಕರು ಜನರನ್ನು ಚಳುವಳಿಗಾಗಿ ಒಗ್ಗೂಡಿಸಲು ಈ ಹಬ್ಬದ ವೇದಿಕೆಗಳನ್ನು ಬಳಸಿಕೊಳ್ಳತೊಡಗಿದರು.ಈ ಉತ್ಸವವು ಬೌದ್ಧಿಕ ಪ್ರವಚನ, ಕಾವ್ಯವಾಚನಗಳು, ನಾಟಕಗಳು, ಸಂಗೀತ ಕಚೇರಿಗಳು ಮತ್ತು ಜಾನಪದ ನೃತ್ಯಗಳ ಪ್ರಕಾರಗಳಲ್ಲಿ ಸಮುದಾಯದ ಭಾಗವಹಿಸುವಿಕೆ ಮತ್ತು ಒಳಗೊಳ್ಳುವಿಕೆಗೆ ಹೆಚ್ಚಿನ ಉತ್ತೇಜನವನ್ನು ನೀಡಿತು.ಇದರಿಂದಾಗಿ ಮಹಾರಾಷ್ಟ್ರದಲ್ಲಿ ಗಣೇಶೋತ್ಸವ ರಾಷ್ಟ್ರೀಯತೆಯನ್ನು ಮೂಡಿಸುವ ಹಬ್ಬವಾಯಿತು.
ಇನ್ನೂ ಗೋವಾದಲ್ಲಿ ಗಣೇಶ ಚತುರ್ಥಿಯು ಸಾರ್ವಜನಿಕ ಹಬ್ಬಕ್ಕಿಂತ ಹೆಚ್ಚಾಗಿ ಕುಟುಂಬದ ಹಬ್ಬವಾಗಿದೆ. ಅದರಲ್ಲೂ ಪೋರ್ಚುಗೀಸರ ಆಡಳಿತದಲ್ಲಿದ್ದ ಗೋವಾದಲ್ಲಿ ಹಿಂದುಗಳು ಸಾರ್ವಜನಿಕವಾಗಿ ಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ನಿರ್ಬಂಧ ಇದ್ದರಿಂದಾಗಿ ಅಲ್ಲಿನ ಬಹುತೇಕ ಕುಟುಂಬಗಳು ಗಣೇಶನನ್ನು ಎಲೆ, ಕಾಗದ ಅಥವಾ ಸಣ್ಣ ಬೆಳ್ಳಿಯ ವಿಗ್ರಹಗಳ ಮೇಲೆ ಚಿತ್ರಿಸುತ್ತಾರೆ.
ಮೋದಕದ ಮಹತ್ವ:
ಜನರು ಮೋದಕವನ್ನು ಗಣೇಶನ ನೆಚ್ಚಿನ ತಿಂಡಿ ಎಂದು ನಂಬಿರುವುದರಿಂದ ಗಣೇಶೋತ್ಸವದ ಸಂದರ್ಭದಲ್ಲಿ ಇಪ್ಪತ್ತೊಂದು ಮೋದಕಗಳನ್ನು ದೇವರಿಗೆ ಮತ್ತು ಪ್ರಸಾದವಾಗಿ ಅರ್ಪಿಸುವುದರೊಂದಿಗೆ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.ಅದರಲ್ಲೂ ಅಕ್ಕಿ, ಹಾಗೂ ಗೋದಿಯ ಮೋದಕಗಳನ್ನು ಹಬ್ಬದ ಸಂದರ್ಭದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.