ನವದೆಹಲಿ: ಪ್ರತಿ ವರ್ಷ ಕಾರ್ಮಿಕ ದಿನಾಚರಣೆ ಬಂದಾಗಲೆಲ್ಲಾ ಈ ಒಂದು ಪ್ರತಿಮೆ ಮಾತ್ರ ಕಾರ್ಮಿಕರ ಶ್ರಮದ ಪ್ರತೀಕವಾಗಿ ಕಣ್ಣು ಮುಂದೆ ಬರುತ್ತದೆ. ಚೆನ್ನೈನ ಮರೀನಾ ಬೀಚ್‌ನಲ್ಲಿ Triumph of Labour ಎಂದು ಕರೆಯಲ್ಪಡುವ ಈ ಪ್ರತಿಮೆ, ಶ್ರಮಿಕರ ಗೆಲುವಿನ ಸಂಕೇತವಾಗಿದೆ. ಮದ್ರಾಸ್ ವಿಶ್ವವಿದ್ಯಾಲಯದ ಎದುರಿನ ಅಣ್ಣಾ ಸ್ಕ್ವೇರ್‌ನಲ್ಲಿ ಬೀಚ್‌ನ ಉತ್ತರ ತುದಿಯಲ್ಲಿ ನಿರ್ಮಿಸಲಾಗಿರುವ ಈ ಪ್ರತಿಮೆ ಚೆನ್ನೈನ ಪ್ರಮುಖ ಹೆಗ್ಗುರುತಾಗಿದೆ. ಈ ಪ್ರತಿಮೆಯು ನಾಲ್ಕು ವ್ಯಕ್ತಿಗಳು ಬಂಡೆಯನ್ನು ಸರಿಸಲು ಶ್ರಮಿಸುತ್ತಿರುವುದನ್ನು ತೋರಿಸುತ್ತದೆ, ಇದು ಕಾರ್ಮಿಕ ವರ್ಗದ ಶ್ರಮವನ್ನು ಚಿತ್ರಿಸುತ್ತದೆ.


COMMERCIAL BREAK
SCROLL TO CONTINUE READING

ಅಮೆರಿಕನ್ ಮೆರೀನ್ಗಳು ಐವೊ ಜಿಮಾದಲ್ಲಿ ಧ್ವಜವನ್ನು ಎತ್ತಿದ ಪ್ರಸಿದ್ಧ ವಿಶ್ವ ಸಮರ II ರ ಪೋಟೋವನ್ನು ಇದು ಹೋಲುತ್ತದೆ. ಈ ಶಿಲ್ಪವನ್ನು ಕೆತ್ತಿದ್ದು ದೇಬಿ ಪ್ರಸಾದ್ ರಾಯ್ ಚೌಧರಿ. ವಿಶೇಷವೆಂದರೆ ಈ ಕಡಲತೀರದ ಮೇಲೆ ನಿರ್ಮಿಸಿದ ಅತ್ಯಂತ ಮೊದಲ ಪ್ರತಿಮೆಯಲ್ಲಿ ಇದು ಒಂದು ಎನ್ನಲಾಗಿದೆ. ಅಷ್ಟೇ ಅಲ್ಲದೆ ದೇಶದ ಮೇ ದಿನದ ಮೊದಲ ಸ್ಮರಣಾರ್ಥ ನಡೆದ ಸ್ಥಳದ ಹತ್ತಿರ ಇದನ್ನು ಸ್ಥಾಪಿಸಲಾಗಿದೆ. ಕಡಲ ತೀರವನ್ನು ಸುಂದರಗೊಳಿಸುವ ಕಾಮರಾಜ್ ಸರ್ಕಾರದ ಚಾಲನೆಯ ಭಾಗವಾಗಿ 1959 ರಲ್ಲಿ ಗಣರಾಜ್ಯೋತ್ಸವದ ಮುನ್ನಾ ದಿನದಂದು ಈ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಈ ಪ್ರತಿಮೆಯು ನಗರದಲ್ಲಿ ಮೇ ದಿನದ ಆಚರಣೆಯ ಕೇಂದ್ರ ಬಿಂದುವಾಗಿದೆ.


ಮೇ ದಿನದ ಪ್ರತಿಮೆಗಿರುವ ಐತಿಹಾಸಿಕ ಹಿನ್ನಲೆ: 


ಮೇ 1923 ರ ಬೇಸಿಗೆಯ ಸಂಜೆ, ಕಾರ್ಮಿಕ ಸಂಘದ ಮುಖಂಡರಾದ ಎಂ. ಸಿಂಗರವೆಲಾರ್, ಟ್ರಿಪ್ಲಿಕೇನ್ ಬಳಿಯ ಮರೀನಾ ಬೀಚ್‌ನಲ್ಲಿ ಸಭೆ ನಡೆಸಿ, ಕಾರ್ಮಿಕರ ಹಕ್ಕುಗಳನ್ನು ಗುರುತಿಸಬೇಕೆಂದು ಕರೆ ನೀಡಿದರು ಮತ್ತು ಕಾರ್ಮಿಕರ ಹಕ್ಕುಗಳನ್ನು ಪ್ರತಿನಿಧಿಸಲು ರಾಜಕೀಯ ಪಕ್ಷವನ್ನು ರಚಿಸುವುದಾಗಿ ಪ್ರತಿಜ್ಞೆ ಮಾಡಿದರು, ಅದು ಭಾರತದ ಮೊದಲ ಮೇ ದಿನದ ರ್ಯಾಲಿಯಾಗಿತ್ತು. ಇದರ ನೆನಪಿಗಾಗಿ, ಕಾರ್ಮಿಕರ ಪ್ರತಿಮೆಯನ್ನು ಶ್ರಮದ ಕೆಲಸದಲ್ಲಿ ತೊಡಗಿರುವ ಕಾರ್ಮಿಕರ ತಂಡದ ಸ್ಪೂರ್ತಿದಾಯಕ ಭಂಗಿಯನ್ನು ಚಿತ್ರಿಸಲಾಗಿದೆ.


ಆಗಿನ ಮದ್ರಾಸ್ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಕ್ರಾಫ್ಟ್ಸ್( ಇಂದು ತಮಿಳುನಾಡು ಸರ್ಕಾರಿ ಕಾಲೇಜ್ ಆಫ್ ಫೈನ್ ಆರ್ಟ್ಸ್ ಆಗಿದೆ) ನ ಮೊದಲ ಭಾರತೀಯ ಪ್ರಾಂಶುಪಾಲರಾಗಿದ್ದ ದೆಬಿ ಪ್ರಸಾದ್ ರಾಯ್ ಚೌಧರಿ ಅವರು ಈ ಶಿಲ್ಪದ ಕೆತ್ತನೆ ಮಾಡಿದ್ದಾರೆ. ಜನವರಿ 25, 1959 ರಂದು ಇದನ್ನು ಸ್ಥಾಪಿಸಲಾಯಿತು, ಆಗಿನ ಮದ್ರಾಸ್ ಗವರ್ನರ್ ಬಿಷ್ಣುರಾಮ್ ಮೇಧಿ ಅನಾವರಣಗೊಳಿಸಿದರು. ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಕ್ರಾಫ್ಟ್ಸ್‌ನ ರಾತ್ರಿ ಕಾವಲುಗಾರ ಎ.ಪಿ.ಶ್ರೀನಿವಾಸನ್ ಎಡದಿಂದ ಎರಡನೇ ಮತ್ತು ನಾಲ್ಕನೇ ವ್ಯಕ್ತಿಗೆ ಮಾದರಿಯಾಗಿದ್ದರೆ, ರಾಮು ಎಂಬ ವಿದ್ಯಾರ್ಥಿ ಇತರ ಇಬ್ಬರು ವ್ಯಕ್ತಿಗಳಿಗೆ ಮಾದರಿಯಾಗಿದ್ದಾನೆ.