ಭಾರತದ ಪ್ರಸಿದ್ಧ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಕುಂಭ ಮೇಳವನ್ನು ಯುನೆಸ್ಕೋ ಮನುಕುಲದ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರ್ಪಡೆ ಮಾಡಿದೆ. ಅಲ್ಲದೆ, ವಿಶ್ವದ ಅತ್ಯಂತ ದೊಡ್ಡ ಶಾಂತಿಯುತ ಯಾತ್ರಾರ್ಥಿಗಳ ಸಮಾಗಮ ಎಂದು ಮೆಚ್ಚುಗೆ ಸೂಚಿಸಿದೆ.


COMMERCIAL BREAK
SCROLL TO CONTINUE READING

ದಕ್ಷಿಣ ಕೊರಿಯಾದ ಜೀಜುವಿನಲ್ಲಿ ನಡೆದ ಸಭೆಯಲ್ಲಿ ಯುನೆಸ್ಕೋ ಸದಸ್ಯರು ಕುಂಭಮೇಳ ಸೇರಿದಂತೆ ಹಲವು ಆಚರಣೆಗಳನ್ನು ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರ್ಪಡೆಗೊಳಿಸಿದ್ದಾರೆ. ವಿವಿಧ ರಾಷ್ಟ್ರಗಳಿಂದ ಬಂದಿದ್ದ ಮನವಿಯನ್ನು ಪರಿಶೀಲಿಸಿದ ಬಳಿಕ ಯುನೆಸ್ಕೋ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ.



ಅಲಹಾಬಾದ್​, ಹರಿದ್ವಾರ, ನಾಸಿಕ್​ ಮತ್ತು ಉಜ್ಜೈನಿಯಲ್ಲಿ ನಡೆಯುವ ಕುಂಭ ಮೇಳವನ್ನು ವಿಶ್ವದ ಅತ್ಯಂತ ಶಾಂತಿಯುತ ಧಾರ್ಮಿಕ ಆಚರಣೆ ಎಂದು ಯುನೆಸ್ಕೋ ಗುರುತಿಸಿದೆ. ಕುಂಭಮೇಳ ಸಹಿಷ್ಣುತೆಗೆ ಮತ್ತು ಜನರ ಪಾಲ್ಗೊಳ್ಳುವಿಕೆಯ ಅತ್ಯಂತ ಪ್ರಮುಖ ಉದಾಹರಣೆಯಾಗಿದೆ. ಈ ಮೌಲ್ಯಗಳು ಇಂದು ಅತ್ಯಂತ ಪ್ರಸ್ತುತವಾಗಿವೆ ಎಂದು ವಿದೇಶಾಂಗ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


ಯುನೆಸ್ಕೋ ಪಟ್ಟಿಗೆ ಕುಂಭಮೇಳ ಸೇರಿರುವುದು ಭಾರತಕ್ಕೆ ಹೆಮ್ಮೆ ಹಾಗೂ ಗೌರವದ ವಿಷಯ ಎಂದು ನರೇಂದ್ರ ಮೋದಿ ಶುಕ್ರವಾರ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.