ಬೆಂಗಳೂರು: ಕರಾವಳಿ ಕ್ರೀಡೆ ಕಂಬಳಕ್ಕೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅಂಕಿತ ಹಾಕುವ ಮೂಲಕ ಹಸಿರು ನಿಶಾನೆ ತೋರಿದ್ದು ಕಂಬಳವನ್ನು ನಡೆಸಬೇಕೋ, ಬೇಡವೋ ಎಂಬ ಗೊಂದಲಕ್ಕೆ ತೆರೆ ಬಿದ್ದಿದೆ. 


COMMERCIAL BREAK
SCROLL TO CONTINUE READING

ಪೇಟಾ ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ಕಂಬಳಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಸುಗ್ರೀವಾಜ್ಞೆ ಬಳಿಕ ಮಸೂದೆಗೆ ತಿದ್ದುಪಡಿ ತಂದು ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದಿದ್ದ ಸರ್ಕಾರ ಮಸೂದೆಯನ್ನು ರಾಜ್ಯಪಾಲರಿಗೆ ಕಳುಹಿಸಿತ್ತು.


ರಾಜ್ಯಪಾಲ ವಜುಭಾಯಿ ವಾಲಾ ತಿದ್ದುಪಡಿಯನ್ನು ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಿದ್ದರು. ಇದೀಗ ವಿಧೇಯಕ ತಿದ್ದುಪಡಿಯಾದ ಏಳು ತಿಂಗಳ ಬಳಿಕ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಕಂಬಳ ತಿದ್ದುಪಡಿ ವಿಧೇಯಕಕ್ಕೆ ಅಂಕಿತ ಹಾಕಿದ್ದಾರೆ.


2017ರಲ್ಲಿ ತಮಿಳುನಾಡಿನ 'ಜಲ್ಲಿಕಟ್ಟು' ಮತ್ತು ಕರ್ನಾಟಕದ 'ಕಂಬಳ' ಎರಡೂ ಗ್ರಾಮೀಣ ಕ್ರೀಡೆಗಳು ದೇಶಾದ್ಯಂತ ಬಹಳ ಚರ್ಚೆಗೆ ಗ್ರಾಸವಾಗಿದ್ದವು. ಅಲ್ಲದೆ ಪೇಟಾದಂತಹ ಪ್ರಾಣಿ ದಯಾ ಸಂಸ್ಥೆಗಳು ಇಂತಹ ಪ್ರಾಣಿ ಹಿಂಸಾ ಕ್ರೀಡೆಗಳಿಗೆ ವಿರೋಧ ವ್ಯಕ್ತ ಪಡಿಸಿದ್ದವು. ಮತ್ತೊಂದೆಡೆ ಜನಪದೀಯ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಕೆಲವು ಕಾನೂನು ಬಾಧ್ಯತೆಗಳ ನಡುವೆ ಗ್ರಾಮೀಣ ಸೊಗಡನ್ನು ಕಾಪಾಡಲು ಕರ್ನಾಟಕ ರಾಜ್ಯ ಸರ್ಕಾರ ನಿರ್ಧರಿಸಿತ್ತು.