ದಸರಾ ವಿಶೇಷ: ನವರಾತ್ರಿ ಆಚರಣೆಯ ಹಿನ್ನಲೆ
ದಸರಾ ಹಬ್ಬ ಆಶ್ವಯುಜ ಪಾಡ್ಯದ ದಿನ ಪ್ರಾರಂಭಗೊಂಡು ವಿಜಯದಶಮಿಯ ದಿನ ಮುಕ್ತಾಯಗೊಳ್ಳುತ್ತದೆ. ದಸರಾ ಹಬ್ಬ ರಾಜ ಒಡೆಯರ್ ಕಾಲದಿಂದಲೂ ನಡೆದು ಬರುತ್ತಿರುವುದರ ಬಗ್ಗೆ ಉಲ್ಲೇಖಗಳಿದೆ. ಇದು ಒಡೆಯರ್ ವಂಶದಲ್ಲಿ ಪರಂಪರಾನುಗತವಾಗಿ ಆಚರಿಸುತ್ತಾ ಬರುತ್ತಿದೆ.
ಹೆಸರೇ ಹೇಳುತ್ತಿರುವಂತೆ ಒಂಭತ್ತು ದಿನಗಳ ಹಬ್ಬ. ಭಾರತ ದೇಶದಾದ್ಯಂತ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲ್ಪಡುತ್ತದೆ. ಇದನ್ನು ಶರದ್ ನವರಾತ್ರಿ ಎಂದೂ ಸಹ ಕರೆಯುವರು. ಏಕೆಂದರೆ ಶರದ್ ಋತುವಿನಲ್ಲಿ ಆಚರಿಸಲ್ಪಡುವ ಹಬ್ಬ ಇದಾಗಿದೆ.
ದುರ್ಗಾಪೂಜೆ, ರಾಮಲೀಲಾ ಹಾಗೂ ವಿಜಯದಶಮಿ ಇತ್ಯಾದಿ ಹೆಸರುಗಳಿಂದ ಭಾರತದ ಹಲವು ಭಾಗಗಳಲ್ಲಿ ಇದನ್ನು ವಿಭಿನ್ನ ನಾಮಗಳಿಂದ ಆಚರಿಸಲ್ಪಡುವ ಹಬ್ಬ ಇದಾಗಿದೆ. ದಕ್ಷಿಣ ಭಾರತದಲ್ಲಿ ಇದು ವಿಜಯ ದಶಮಿ ಎಂದೇ ಖ್ಯಾತಿ ಪಡೆದಿದೆ.
ದಕ್ಷಿಣ ಭಾರತದಲ್ಲಿ ಒಂಭತ್ತು ದಿನಗಳು ದೇವಿಯನ್ನು ಒಂದೊಂದು ರೂಪದಲ್ಲಿ ಅಲಂಕರಿಸಿ ಪೂಜಿಸುತ್ತಾರೆ. ದೇವಿಯನ್ನು ಕೆಲವರು ಬ್ರಾಹ್ಮೀ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಹಾಗೂ ಚಾಮುಂಡಿ ರೂಪಗಳಲ್ಲಿ ಪೂಜಿಸುತ್ತಾರೆ. ಮತ್ತೆ ಕೆಲವರು ಮಹಾಲಕ್ಷ್ಮಿ, ಸರಸ್ವತಿ ಮತ್ತು ಮಹಾದುರ್ಗೆಯ ರೂಪದಲ್ಲಿ ಪೂಜಿಸುತ್ತಾರೆ.
ಜಗನ್ಮಾತೆಯು ಅಧರ್ಮ ಸಂಹರಿಸಿ ಧರ್ಮವನ್ನು ಸ್ಥಾಪಿಸಿದ ಪ್ರತೀಕವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಹಾಗಾಗಿ ನವರಾತ್ರಿ ಸಂಪೂರ್ಣವಾಗಿ ದೇವಿಯ ಆರಾಧನೆಯಾಗಿದ್ದು, ಶಕ್ತಿ ಸ್ವರೂಪಿನಿಯ ಪೂಜೆ ಪ್ರಧಾನವಾದದ್ದಾಗಿದೆ.
ದಕ್ಷಿಣ ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಕರ್ನಾಟಕದ ಮೈಸೂರಿನಲ್ಲಿ ಇದನ್ನು ವಿಜ್ರುಂಭಣೆಯಿಂದ ದಸರಾ ಹಬ್ಬವೆಂದೇ ಆಚರಿಸುತ್ತಾರೆ. ದಸರಾ ಹಬ್ಬ ಆಶ್ವಯುಜ ಪಾಡ್ಯದ ದಿನ ಪ್ರಾರಂಭಗೊಂಡು ವಿಜಯದಶಮಿಯ ದಿನ ಮುಕ್ತಾಯಗೊಳ್ಳುತ್ತದೆ. ದಸರಾ ಹಬ್ಬ ರಾಜ ಒಡೆಯರ್ ಕಾಲದಿಂದಲೂ ನಡೆದು ಬರುತ್ತಿರುವುದರ ಬಗ್ಗೆ ಉಲ್ಲೇಖಗಳಿದೆ. ಇದು ಒಡೆಯರ್ ವಂಶದಲ್ಲಿ ಪರಂಪರಾನುಗತವಾಗಿ ಆಚರಿಸುತ್ತಾ ಬರಲಾಗುತ್ತಿದೆ.
ಮೈಸೂರು ದಸರೆಯ ಇನ್ನೂ ಕೆಲವು ವಿಶೇಷತೆಗಳೆಂದರೆ ಮನೆ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸುವುದು. ಇದನ್ನೂ 'ಗೊಂಬೆ ಹಬ್ಬ'ವೆಂದೂ ಸಹ ಕರೆಯುವುದುಂಟು. ಸಪ್ತಮಿಯ ದಿನ ಶಾರದಾಪೂಜೆ, ನವಮಿಯ ದಿನ ಆಯುಧ ಪೂಜೆ ಹಾಗೂ ದಶಮಿಯ ದಿನ ಜಂಬೂ ಸವಾರಿ.
ನವರಾತ್ರಿಯ ಒಂಭತ್ತು ದಿನಗಳ ಪೈಕಿ ಸಪ್ತಮಿಯ ದಿನ ಶಾರದಾಪೂಜೆ ಮಾಡುತ್ತಾರೆ. ಆ ದಿನ ಎಲ್ಲಾ ಪುಸ್ತಕಗಳನ್ನೂ ಇಟ್ಟು ಪೂಜೆಸಲ್ಲಿಸಿ ವಿದ್ಯೆ ನೀಡುವಂತೆ ಶಾರದೆಯನ್ನು ಆರಾಧಿಸುತ್ತಾರೆ. ಹಾಗೆಯೇ ಅಷ್ಟಮಿಯ ದಿನ ದುರ್ಗಾ ಪೂಜೆಯನ್ನು ಸಲ್ಲಿಸುತ್ತಾರೆ.
ನವಮಿಯ ದಿನ ಎಲ್ಲಾ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಆದ್ದರಿಂದಲೇ ಇದನ್ನು 'ಆಯುಧಪೂಜೆ' ಎಂದು ಕರೆಯಲಾಗುವುದು. ಮೈಸೂರು ಅರಮನೆಯಲ್ಲಿ ಎಲ್ಲಾ ಯುದ್ಧೋಪಕರಣಗಳಿಗೆ ಪೂಜೆ ಸಲ್ಲಿಸಿದರೆ, ಮನೆಗಳಲ್ಲಿ ವಾಹನಗಳಿಗೆ ಮತ್ತು ಮನೆಯಲ್ಲಿರುವ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.
ದಶಮಿಯ ದಿನ ವಿಶ್ವ ವಿಖ್ಯಾತ ಜಂಬೂಸವಾರಿ ನಡೆಯುತ್ತದೆ. ಚಿನ್ನದ ಅಂಬಾರಿಯಲ್ಲಿ ನಾಡದೇವಿ ಚಾಮುಂಡೇಶ್ವರಿಯನ್ನಿಟ್ಟು ಅರಮನೆಯಿಂದ ಬನ್ನಿ ಮಂಟಪದ ವರೆಗೂ ಮೆರವಣಿಗೆ ನಡೆಸಲಾಗುತ್ತದೆ. ಇದೇ ಎಲ್ಲರ ನೆಚ್ಚಿನ 'ಜಂಬೂ ಸವಾರಿ'. ಇದರೊಂದಿಗೆ ದಸರೆಗೆ ತೆರೆಬಿಳುತ್ತದೆ. ಹೀಗೆ ಮೈಸೂರಿನಲ್ಲಿ ನವರಾತ್ರಿ ಆಚರಿಸಲ್ಪಡುತ್ತದೆ.
ನವರಾತ್ರಿ ಆಚರಣೆಯ ಹಿನ್ನಲೆಗಳು:
ನವರಾತ್ರಿ ಆಚರಣೆಯ ಹಿಂದೆ ನಾವು ಅನೇಕ ಪೌರಾಣಿಕ ಕಥೆಗಳನ್ನು ಕಾಣಬಹುದು. ಕೆಲವೆಡೆ ಶಕ್ತಿದೇವತೆಯಾದ ಚಾಮುಂಡೇಶ್ವರಿಯು 9 ದಿನಗಳು ದೇವಾನುದೇವತೆಗಳ ಶಕ್ತಿ ಪಡೆದು ಮಹಿಷಾಸುರನನ್ನು ಕೊಂದಿದ್ದರ ಪ್ರತೀಕವಾಗಿ ನವರಾತ್ರಿ ಆಚರಿಸುತ್ತಾರೆ. ಇನ್ನೂ ಕೆಲವೆಡೆ ಶ್ರೀರಾಮ ಲಂಕೆಯ ಮೇಲೆ ದಂಡೆತ್ತಿ ಹೋಗಿ ರಾವಣನನ್ನು ಕೊಂದ ದಿನವೇ ವಿಜಯದಶಮಿ ಎಂದು ಅದರ ಪ್ರತೀಕವಾಗಿ ನವರಾತ್ರಿ ಆಚರಿಸುತ್ತಾರೆ.
ಮತ್ತೊಂದು ಉಲ್ಲೇಖವೆಂದರೆ - ವನವಾಸದಲ್ಲಿದ್ದ ಪಾಂಡವರು ತಮ್ಮ ಅಜ್ಞಾತ ವಾಸ ಮುಗಿಸಿ ಅದರಲ್ಲೂ ಬೃಹನ್ನಳೆ ವೇಷದಲ್ಲಿದ್ದ ಅರ್ಜುನ ತನ್ನ ಆಯುಧ ಇಟ್ಟಿದ್ದ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿ ಆಯುಧ ಪಡೆದ ದಿನದ ಪ್ರತೀಕವಾಗಿ ನವರಾತ್ರಿಯಲ್ಲಿ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸುವ ಪದ್ದತಿಯೂ ಇದೆ.
ಒಟ್ಟಾರೆಯಾಗಿ ನವರಾತ್ರಿ ಭಾರತದ ಸಂಸ್ಕೃತಿಯೊಂದಿಗೆ ಬೆರೆತಿರುವ ಪುರಾತನ ಐತಿಹ್ಯ ಹಬ್ಬ. ವಿಭಿನ್ನ ಭಾಗದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲ್ಪಡುವ ಹಬ್ಬ.