ಕನ್ನಡದ ಸಾಹಿತ್ಯ ಸಮ್ಮೇಳನ ನಡೆದು ಬಂದ ದಾರಿ
ಕನ್ನಡss ಕನ್ನಡss ಬರ್ರಿ ನಮ್ಮ ಸಂಗಡ... ಎನ್ನುತ್ತಲೇ ತಮ್ಮ ವಿಭಿನ್ನ ರೀತಿಯ ಸಾಹಿತ್ಯ ಪ್ರಕಾರಗಳಿಂದ ಗಮನ ಸೆಳೆದ ಕವಿ ಚಂದ್ರಶೇಖರ ಪಾಟೀಲ್, ಈಗ ಮೈಸೂರಿನಲ್ಲಿ ನಡೆಯಲಿರುವ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು. ಇಂಥ ಸಂದರ್ಭದಲ್ಲಿ ನಾವು ಒಟ್ಟಾರೆಯಾಗಿ ಕರ್ನಾಟಕದಲ್ಲಿ ಒಟ್ಟಾರೆ ಸಾಹಿತ್ಯ ಸಮ್ಮೇಳನ ಬೆಳೆದು ಬಂದಿರುವ ಹಿನ್ನಲೆಯನ್ನು ಸ್ಮರಿಸಬೇಕಾಗಿದೆ.
ಸಮ್ಮೇಳನದ ಪರಿಕಲ್ಪನೆಯ ಹುಟ್ಟು:
1914 ರಲ್ಲಿ ಮೈಸೂರಿನಲ್ಲಿ ನಡೆದ ಆರ್ಥಿಕ ಸಮ್ಮೇಳನದಲ್ಲಿ ಮೊದಲ ಬಾರಿಗೆ ಕನ್ನಡ ಭಾಷೆಯನ್ನೂ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ರಾವ್ ಬಹದ್ದೂರ್ ಎಂ.ಶಾಮರಾವ್,ಕರ್ಪೂರ್, ಶ್ರೀನಿವಾಸರಾವ್,ಮತ್ತು ಪಿ.ಎಸ್.ಅಚ್ಯುತರಾವರನ್ನು ಒಳಗೊಂಡ ಸಮೀತಿಯು ಕೆಲವು ತೀರ್ಮಾನಗಳನ್ನು ತೆಗೆದುಕೊಂಡಿತು.
ಅಂತವುಗಳಲ್ಲಿ ಪ್ರಮುಖವಾಗಿ ಕನ್ನಡ ಭಾಷೆಗೆ ಯೋಗ್ಯವಾದ ವ್ಯಾಕರಣ,ಚರಿತ್ರೆ ಮತ್ತು ನಿಘಂಟುಗಳ ಕುರಿತಾದ ಪುಸ್ತಕಗಳನ್ನು ಪ್ರಕಟಿಸುವ ಜವಾಬ್ದಾರಿಯನ್ನು ಹೊರಲಾಯಿತು. ಮತ್ತು ತತ್ವಶಾಸ್ತ್ರ ಪ್ರಕೃತಿ ವಿಜ್ಞಾನ,ಚರಿತ್ರೆ ಕುರಿತಾದ ಪುಸ್ತಕಗಳನ್ನು ಕನ್ನಡದಲ್ಲಿ ತರುವುದು ಎನ್ನುವ ವಿಷಯಗಳ ಕುರಿತಾಗಿ ಚರ್ಚಿಸಲಾಯಿತು.ರೀತಿಯ ಉದ್ದೇಶಗಳೊಂದಿಗೆ ಪ್ರಾರಂಭಗೊಂಡು ಮುಂದೆ ಅದು ಸಾಹಿತ್ಯ ಸಮ್ಮೇಳನವನ್ನು ಪ್ರತಿವರ್ಷ ಆಚರಿಸುವ ಪರಂಪರೆಗೆ ನಾಂದಿ ಹಾಡಿತು ಎಂದು ಹೇಳಬಹುದು.
ಅದರ ಭಾಗವಾಗಿ 1915 ರಲ್ಲಿ ಅಂದಿನ ಮೈಸೂರು ಸಂಸ್ಥಾನದ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ಭಾಷೆಯ ರಕ್ಷಣೆ, ಹಾಗೂ ಕನ್ನಡ ನಾಡಿನ ಸಂಸ್ಕೃತಿಯ ಹಿರಿಮೆಯನ್ನು ಹೆಚ್ಚಿಸಲು ಒಂದು ಸಂಸ್ಥೆಯು ಅಗತ್ಯವಾದ್ದರಿಂದ ಆ ನಿಟ್ಟಿನಲ್ಲಿ ರಾಜರು ಕನ್ನಡ ಸಾಹಿತ್ಯ ಪರಿಷತ್ ನ್ನು ಸ್ಥಾಪಿಸಿದರು. ಆ ಮೂಲಕ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪ್ರತಿವರ್ಷ ರಾಜ್ಯದಲ್ಲೆಡೆ ಆಚರಿಸುವ ಕಾರ್ಯಕ್ರಮವಾಗಿ ಈ ಪರಂಪರೆ ಕಳೆದ ನೂರು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಸಾಹಿತ್ಯ ಸಮ್ಮೇಳನವು ಮುಖ್ಯವಾಗಿ ಪ್ರತಿ ವರ್ಷ ಭಾಷೆ ಮತ್ತು ನಾಡಿನ ಕುರಿತಾಗಿರುವ ವಿಷಯಗಳನ್ನೂ ಒಂದೆಡೆ ಕಲೆತು ಚರ್ಚಿಸುವ ಒಂದು ಬೃಹತ್ ವೇದಿಕೆಯಾಗಿ ಮಾರ್ಪಟ್ಟಿದೆ ಎಂದು ಹೇಳಬಹುದು.ಇಂಥ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಮತ್ತು ನಾಡು ನುಡಿಗೆ ದುಡಿಯುವ ಮಹನೀಯರನ್ನು ಅಧ್ಯಕ್ಷರನ್ನಾಗಿ ಸಾಹಿತ್ಯ ಪರಿಷತ್ ಆಯ್ಕೆ ಮಾಡುತ್ತದೆ.ಆ ಮೂಲಕ ಅಂತ ಮಹನೀಯರು ಇಂತಹ ವೇದಿಕೆಯ ಮೂಲಕ ಕನ್ನಡವನ್ನು ಕಟ್ಟುವ ಬಗೆ ಮತ್ತು ಸವಾಲುಗಳನ್ನು ಸರ್ಕಾರಕ್ಕೆ ಜಾರಿಗೆ ತರಲು ಮನವಿ ಮಾಡಲಾಗುತ್ತದೆ.
ಈ ಹಿನ್ನಲೆಯಲ್ಲಿ ನೂರಕ್ಕೂ ಹೆಚ್ಚಿನ ವರ್ಷದ ಈ ಪರಂಪರೆಯಲ್ಲಿ ಇಲ್ಲಿಯವರೆಗೂ 82 ಸಾಹಿತ್ಯ ಸಮ್ಮೇಳನಗಳು ಜರುಗಿವೆ. ಅದರಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಎಚ್.ವಿ.ನಂಜುಂಡಯ್ಯರವರು ವಹಿಸಿದ್ದರು. ನಂತರ 1916 ಬೆಂಗಳೂರು ಮತ್ತು 1917 ಮೈಸೂರಿನಲ್ಲಿ ನಡೆದ ಸಮ್ಮೇಳನದ ಅದ್ಯಕ್ಷತೆಯನ್ನು ಕೂಡಾ ಅವರೇ ವಹಿಸಿದ್ದರು ಎನ್ನುವುದು ಗಮನಾರ್ಹ ಸಂಗತಿ.
ಮೊದಲ ಸಮ್ಮೇಳನದ ಅಧ್ಯಕ್ಷತೆಯನ್ನು ಮಾತನಾಡುತ್ತಾ ಅವರು "ಅನೇಕ ಮಹನೀಯರು ಹೊರಗಿನಿಂದ ದಯಮಾಡಿ ಸೇರಿರುವ ಈ ಸಭೆಯಲ್ಲಿ ಮೈಸೂರು ದೇಶದಲ್ಲಿ ವಾಡಿಕೆಯಾಗಿರುವ ಕನ್ನಡವೇ ಈ ಸ್ಥಾನಕ್ಕೆ ಯೋಗ್ಯವಾದುದೆಂದು ಹೇಳಲು ಸ್ವಲ್ಪ ಸಂಕೋಚಪಡಬೇಕಾಗಿದೆ. ಆದರೂ ನಾನು ಹೀಗೆ ನಂಬಿರುವೆನೆಂದು ಹೇಳುವ ಮಾತು ಕೇವಲ ಸ್ವದೇಶ ಪಕ್ಷವಾದ ದುರಭಿಮಾನದಿಂದ ನಾನು ಹೇಳಿದಂತೆ ಭಾವಿಸಕೂಡದು"(ಕಸಾಪ) ಎಂದು ಹೇಳಿದರು. ಆ ಮೂಲಕವಾಗಿ ಗ್ರಾಂಥಿಕ ಕನ್ನಡವು ಮೈಸೂರು ಪ್ರಾಂತ್ಯದ ರೀತಿಯಲ್ಲಿರಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದ್ದರು.
1915 ರಲ್ಲಿ ಬೆಂಗಳೂರಿನಲ್ಲಿ ಎಚ್ ವಿ ನಂಜುಂಡಯ್ಯ ರವರ ಅಧ್ಯಕ್ಷತೆಯಲ್ಲಿ ನಡೆದ ಮೊದಲನೆಯ ಸಮ್ಮೇಳನದಿಂದ ಪ್ರಸ್ತುತ ಮೈಸೂರಿನಲ್ಲಿ ಚಂದ್ರಶೇಖರ್ ಪಾಟೀಲ್(ಚಂಪಾ) ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ 83ನೇ ಸಮ್ಮೇಳನದವರೆಗೆ ಕನ್ನಡ ಸಾಹಿತ್ಯ,ಸಂಸ್ಕೃತಿ ಭಾಷೆ,ಎಲ್ಲ ವಿಭಾಗಗಳಲ್ಲಿ ಕನ್ನಡ ಮತ್ತು ಕರ್ನಾಟಕ ಹಲವಾರು ರೀತಿಯ ಬದಲಾವಣೆಯನ್ನು ಕಂಡಿದೆ. ಅಲ್ಲದೆ ಅದರ ಜೊತೆ ಭಾಷೆ ಮತ್ತು ನುಡಿಗೆ ಬಂದೊದಗಿರುವ ಸಮಸ್ಯೆ ಮತ್ತು ಸವಾಲುಗಳು ಕೂಡ ವಿಭಿನ್ನವಾಗಿವೆ ಎಂದು ಹೇಳಬಹುದು.
ಈ ಎಲ್ಲ ಹಿನ್ನಲೆಯ ಜೊತೆಗೆ ಇದು ಕನ್ನಡದ ಜಾತ್ರೆಯಾಗಿಯೂ ಕೂಡಾ ಪರಿವರ್ತನೆಯಾಗಿದೆ ಎಂದು ಹೇಳಬಹುದು. ಆ ಮೂಲಕ ಇದು ಭಿನ್ನ ಪ್ರಾಂತ್ಯ ಅಥವಾ ಪ್ರದೇಶಗಳ ಜನರನ್ನು ಒಂದೆಡೆ ಸೇರಿಸುವ ಮೂಲಕ ಕನ್ನಡದ ಒಗ್ಗಟ್ಟು ಮತ್ತು ಹಿರಿಮೆಯನ್ನು ಎತ್ತಿಹಿಡಿಯಲು ಇಂಥ ವೇದಿಕೆಗಳು ನಿಜವಾಗಿಯೂ ಸಹಕಾರಿಯಾಗುತ್ತವೆ.ಆದ್ದರಿಂದ ಕಳೆದ ನೂರು ವರ್ಷಗಳಿಂದ ಸಾಹಿತ್ಯ ಸಮ್ಮೇಳನಗಳು ಜನರು ಹಾಗೂ ಸಂಸ್ಕೃತಿಯನ್ನು ಬೆಸೆಯುವ ಕೆಲಸವನ್ನು ಮಾಡುತ್ತಿವೆ.ಆದ್ದರಿಂದ ಇಂಥ ಸಮ್ಮೇಳನಗಳು ನಾಡಿನಲ್ಲಿ ಹೀಗೆಯೇ ಮುಂದೆ ಸಾಗಲಿ ಎನ್ನುವುದು ಕನ್ನಡಿಗರೆಲ್ಲರ ಆಶಯವಾಗಿದೆ.