ನವದೆಹಲಿ: ಪ್ರತಿ ವರ್ಷ ಕ್ರಿಸ್​ಮಸ್​ ಬಂತೆಂದರೆ ಎಲ್ಲ ಮಕ್ಕಳಿಗೂ ಎಲ್ಲಿಲ್ಲದ ಖುಷಿ. ಬಿಳಿ ಗಡ್ಡ, ಕೆಂಪು ಮಕ್ಮಲ್ ಟೋಪಿ, ಎರಡೂ ಭುಜಗಳಲ್ಲಿ ಉಡುಗೊರೆಗಳಿಂದ ತುಂಬಿದ ಚೀಲ ಹೊತ್ತು ಮನೆಮನೆಗೆ ಬರುವ ಸಾಂತಾ ಕ್ಲಾಸ್ ಎಲ್ಲರಲ್ಲೂ ಖುಷಿ, ನಗು, ಸಂತೋಷ ಮೂಡಿಸಿ ಉಡುಗೊರೆಗಳನ್ನು ನೀಡುತ್ತಾನೆ. ಅಷ್ಟೇ ಅಲ್ಲ, ಅಂದು ಮಕ್ಕಳೂ ಸಹ ಸಾಂತಾ ಕ್ಲಾಸ್ ಧಿರಿಸು ಧರಿಸಿ ಸಂಭ್ರಮಿಸುತ್ತಾರೆ. ಆದರೆ ಈ ಸಾಂತಾ ಕ್ಲಾಸ್ ಯಾರು? ಸಾಂತಾ ಕ್ಲಾಸ್'ಗೂ ಕ್ರಿಸ್​ಮಸ್​ಗೂ ಏನು ಸಂಬಂಧ ಅನ್ನೋ ಹಲವು ಪ್ರಶ್ನೆಗಳು ನಿಮ್ಮಲ್ಲಿ ಮೂಡದೇ ಇರದು. ಹಾಗಿದ್ರೆ ಸಾಂತಾಕ್ಲಾಸ್ ಬಗೆಗಿನ ಹಲವು ಕುತೂಹಲಕಾರಿ ಸಂಗತಿಗಳನ್ನು ನೀವು ಇಲ್ಲಿ ತಿಳಿಯಬಹುದು. 


COMMERCIAL BREAK
SCROLL TO CONTINUE READING

ಪ್ರತಿವರ್ಷ ಡಿಸೆಂಬರ್ 25ರಂದು ವಿಶ್ವದೆಲ್ಲೆಡೆ ಕ್ರಿಸ್​ಮಸ್ ದಿನ ಆಚರಿಸಲಾಗುತ್ತದೆ. ಅಂದು ಬರುವ ಸಾಂತಾ ಕ್ಲಾಸ್ ಅನ್ನು ದೇವದೂತನೆಂದೇ ಕರೆಯುತ್ತಾರೆ. ಕೇವಲ ಕ್ರಿಶ್ಚಿಯನ್ ಸಮುದಾಯದ ಮಕ್ಕಳಷ್ಟೇ ಅಲ್ಲದೆ, ಇತರ ಮಕ್ಕಳೂ ಸಹ ಸಾಂತಾಕ್ಲಾಸ್ ಆಗಮನಕ್ಕೆ ಕಾತುರದಿಂದ ಎದುರುನೋಡುತ್ತಾರೆ, ಉಡುಗೊರೆಗಳಿಗಾಗಿ ಕಾದು ಕುಳಿತಿರುತ್ತಾರೆ. 


ಕ್ರಿಸ್ಮಸ್ ದಿನದಂದು ಕೆಂಪುಬಣ್ಣದ ಬಟ್ಟೆ ತೊಟ್ಟು ಬರುವ ಸಾಂತಾ ಕ್ಲಾಸ್'ಗೆ ಮಕ್ಕಳೆಂದರೆ ಬಲು ಪ್ರೀತಿ. ಅದಕ್ಕಾಗಿಯೇ ಮಕ್ಕಳಿಗಾಗಿ ಸಾಕಷ್ಟು ಉಡುಗೊರೆಗಳು, ಸಿಹಿತಿಂಡಿಗಳನ್ನು ತಂದು ಹಂಚುತ್ತಾರೆ. ಆಗ ಈ ಸಾಂತಾ ಕ್ಲಾಸ್ ಯಾರು? ಎಲ್ಲಿಂದ ಬರುತ್ತಾರೆ ಎಂಬ ಪ್ರಶ್ನೆಗಳು ಮಕ್ಕಳಲ್ಲಿ ಮೂಡದೇ ಇರದು. ಆಗ ಪೋಷಕರು ಸಾಂತಾಕ್ಲಾಸ್ ದೇವದೂತ ಎಂದೂ, ಸ್ವರ್ಗದಿಂದ ಬಂದು ಎಲ್ಲರಿಗೂ ಉಡುಗೊರೆ, ಸಿಹಿತಿಂಡಿ ನೀಡಿ ವಾಪಸಾಗುತ್ತಾರೆ ಅಂತ ಹೇಳಿ ಸುಮ್ಮನಿರುಸುತ್ತಾರೆ. 


ಇತಿಹಾಸದ ಪ್ರಕಾರ ಕ್ರಿ.ಪೂ 300ರಲ್ಲಿ ಟರ್ಕಿಯ ಮೈರಾ ನಗರದಲ್ಲಿ ಸೇಂಟ್ ನಿಕೋಲಸ್ ಎಂಬ ವ್ಯಕ್ತಿ ವಾಸವಾಗಿದ್ದ. ಆಗರ್ಭ ಶ್ರೀಮಂತ ಆಗಿದ್ದ ನಿಕೋಲಸ್ ಜನರಗೆ ಸಹಾಯ ಮಾಡುತ್ತಿದ್ದ. ಯಾರೂ ಕೂಡ ಕಷ್ಟಪಡಬಾರದು ಎಂಬುದು ಆತನ ಆಸೆಯಾಗಿತ್ತು. ಯಾವಾಗಲೂ ಖುಷಿಯಾಗಿರುತ್ತಿದ್ದ. ಆದರೆ ಮಕ್ಕಳು ಬೇಜಾರಾಗಿದ್ದರೆ ವಿಶೇಷವಾದ ಉಡುಪು ತೊಟ್ಟು ಅವರಿಗೆ ಉಡುಗೊರೆಗಳನ್ನು ನೀಡಿ ಖುಷಿಪಡಿಸುತ್ತಿದ್ದ. ಈತ ಜೀಸಸ್ ಮರಣ ಹೊಂದುವ 280 ವರ್ಷಗಳ ಹಿಂದೆ ಜನಿಸಿದ್ದ ಎಂದು ನಂಬಲಾಗಿದೆ. 


ತನ್ನ 17ನೇ ವಯಸ್ಸಿನಲ್ಲಿ ಪಾದ್ರಿಯಾದ ಸೇಂಟ್ ನಿಕೋಲಸ್ ತನ್ನ ಜೀವನದುದ್ದಕ್ಕೂ ಮಧ್ಯರಾತ್ರಿಯಲ್ಲಿ ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಿದ್ದ. ಆತನ ಸಾವಿನ ನಂತರ ಚರ್ಚ್ ಅನುಯಾಯಿಗಳು ಈ ಅಭ್ಯಾಸವನ್ನು ಮುಂದುವರೆಸಿದರು. ಅಂದಿನಿಂದ ಈ ಕ್ರಮ ಒಂದು ಆಚರಣೆಯಾಗಿ ವಿಶ್ವಾದ್ಯಂತ ಪಸರಿಸಿತು. ಕುಟುಂಬದ ಹಿರಿಯರು ನಿಕೋಲಸ್ ತೊಡುತ್ತಿದ್ದಂತಹ ಉಡುಗೆ ಧರಿಸಿ ಮಕ್ಕಳಿಗಾಗಿ ಉಡುಗೊರೆಗಳನ್ನು ನೀಡಲಾರಂಭಿಸಿದರು. ಅವರನ್ನೇ ಇಂದಿಗೂ ಮಕ್ಕಳು ಸಾಂತಾ ಕ್ಲಾಸ್ ಎಂದು ನಂಬುತ್ತಾರೆ.