ಅಪಘಾತಕ್ಕೀಡಾದ ದರ್ಶನ್ ಕಾರು ನಾಪತ್ತೆ; ಚಾಲೆಂಜಿಂಗ್ ಸ್ಟಾರ್ ಕೈಗೆ ಆಪರೇಷನ್
ದರ್ಶನ್ ಅವರ ಬಲಗೈ ಮೂಳೆ ಮುರಿದುಹೋಗಿದ್ದರಿಂದ ಸತತ ಒಂದೂವರೆ ಗಂಟೆಗಳ ಕಾಲ ತುರ್ತು ಚಿಕಿತ್ಸೆ ನಡೆಸಲಾಗಿದೆ. ಆಪರೇಷನ್ ಯಶಸ್ವಿಯಾಗಿದ್ದು, ದರ್ಶನ್ ಅವರನ್ನು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೈಸೂರು: ಸ್ಯಾಂಡಲ್‌ವುಡ್ ಚಾಲೆಜಿಂಗ್ ಸ್ಟಾರ್ ದರ್ಶನ್ ಹಾಗೂ ನಟ ಪ್ರಜ್ವಲ್ ದೇವರಾಜ್ ಪ್ರಯಾಣಿಸುತ್ತಿದ್ದ ಕಾರು ಇಂದು ಬೆಳಗಿನ ಜಾವ 03:30 ರ ವೇಳೆಗೆ ಅಪಘಾತಕ್ಕೀಡಾಗಿದೆ.
ತಡರಾತ್ರಿ ಖಾಸಗಿ ಹೋಟೆಲ್ ನಿಂದ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ತೆರಳುವ ವೇಳೆ ಈ ಘಟನೆ ನಡೆದಿದೆ. ಮೈಸೂರು ಹೊರವಲಯದ ರಿಂಗ್ ರೋಡ್‌ನ ಹಿನಕಲ್ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಗುದ್ದಿದ ಪರಿಣಾಮ ದರ್ಶನ್ ಬಲ ಕೈ ಮೂಳೆ ಮುರಿದಿದೆ, ಪ್ರಜ್ವಲ್ ದೇವರಾಜ್‌ನ ಎಡಗೈಯ ಬೆರಳಿಗೆ ಪೆಟ್ಟಾಗಿದೆ, ಇನ್ನು ಕಾರಿನಲ್ಲಿದ್ದ ರಾಯ್ ಆಂಟೋನಿ ಕೈ ಮುರಿದಿದೆ. ಗಾಯಾಳುಗಳನ್ನು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಸೇರಿಸಲಾಗಿದೆ. ಎದೆ ಭಾಗಕ್ಕೆ ಗಾಯಗೊಂಡಿರುವ ದೇವರಾಜ್ ಅವರಿಗೆ ಇನ್ನು ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎನ್ನಲಾಗಿದೆ.
ದರ್ಶನ್ ಅವರ ಬಲಗೈ ಮೂಳೆ ಮುರಿದುಹೋಗಿದ್ದರಿಂದ ಸತತ ಒಂದೂವರೆ ಗಂಟೆಗಳ ಕಾಲ ತುರ್ತು ಚಿಕಿತ್ಸೆ ನಡೆಸಲಾಗಿದೆ. ಆಪರೇಷನ್ ಯಶಸ್ವಿಯಾಗಿದ್ದು, ದರ್ಶನ್ ಅವರನ್ನು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ದರ್ಶನ್ ತಾಯಿ ಮೀನಾ ತೂಗುದೀಪ, ಪತ್ನಿ ವಿಜಯಲಕ್ಷ್ಮೀ ದರ್ಶನ್, ದಿನಕರ್ ತೂಗುದೀಪ, ಸೃಜನ್ ಲೋಕೇಶ್ ಸೇರಿದಂತೆ ದೇವರಾಜ್ ಕುಟುಂಬದವರು ಕೂಡ ಆಸ್ಪತ್ರೆಗೆ ಆಗಮಿಸಿದ್ದಾರೆ.
ಅಪಘಾತ ಸಂಭವಿಸಿದ ಬಗ್ಗೆ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಆಗಮಿಸಿ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು ಆಸ್ಪತ್ರೆಗೆ ಒಂದು ತುಕಡಿ ಪೊಲೀಸರನ್ನು ನಿಯೋಜನೆ ಮಾಡಿದ್ದಾರೆ. ಅಭಿಮಾನಿಗಳು ಆಸ್ಪತ್ರೆಯ ಮುಂದೆ ಜಮಾಯಿಸುವ ಸಾಧ್ಯತೆ ಇರುವುದರಿಂದ ಆಸ್ಪತ್ರೆಯ ಸುತ್ತಲೂ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದೆ.
ಅಪಘಾತಕ್ಕೀಡಾದ ದರ್ಶನ್ ಕಾರು ನಾಪತ್ತೆ:
ಕಾರು ಅಪಘಾತವಾದ ಬಗ್ಗೆ ಇದುವರೆಗೆ ಯಾವುದೇ ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ. ಮೈಸೂರಿನ ವಿ.ವಿ.ಪುರಂ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದ್ದು ಇದೀಗ ಪೊಲೀಸರೇ ಆಸ್ಪತ್ರೆಗೆ ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ದರ್ಶನ್ ಅವರ ಕಾರು ಕೂಡ ನಾಪತ್ತೆಯಾಗಿದೆ. ಅಪಘಾತ ಸ್ಥಳದ ಬಗ್ಗೆ ಪೊಲೀಸರಿಗೆ ಮಾಹಿತಿ ಇಲ್ಲ. ಕಾರನ್ನು ಯಾರು ಚಾಲನೆ ಮಾಡುತ್ತಿದ್ದರು ಎಂಬ ಬಗ್ಗೆ ಕೂಡ ಸ್ಪಷ್ಟ ಮಾಹಿತಿ ಇಲ್ಲ. ಈ ಎಲ್ಲಾ ಅಂಶಗಳು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.