ರಾಯಚೂರು ವಿದ್ಯಾರ್ಥಿನಿ ಮಧು ಸಾವು: ತ್ವರಿತವಾಗಿ ಸೂಕ್ತ ತನಿಖೆಗೆ ಆಗ್ರಹಿಸಿದ ದರ್ಶನ್
ಇಂಥ ಅಮಾನುಷ ಕೃತ್ಯವನ್ನು ಎಸಗಿರುವ ಕೀಚಕರಿಗೆ ಕಾನೂನು ಬದ್ಧವಾಗಿ ತಕ್ಕ ಶಾಸ್ತಿಯಾಗಬೇಕು- ದರ್ಶನ್ ತೂಗುದೀಪ.
ಬೆಂಗಳೂರು: ರಾಯಚೂರಿನಲ್ಲಿ ಅನುಮಾನಾಸ್ಪದ ಸಾವಿಗೀಡಾಗಿರುವ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಅವರ ಸಾವಿನ ಪ್ರಕರಣದ ಬಗ್ಗೆ ಅತೀ ಶೀಘ್ರದಲ್ಲೇ ಸೂಕ್ತ ತನಿಖೆ ನಡೆಸುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗ್ರಹಿಸಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ತಿಳಿಸಿರುವ ದರ್ಶನ್, ರಾಯಚೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧುವಿನ ಅನುಮಾನಾಸ್ಪದ ಸಾವಿನ ತನಿಖೆ ಅತೀ ಶೀಘ್ರದಲ್ಲಿ ಸರಿಯಾಗಿ ನಡೆದು ಇಂಥ ಅಮಾನುಷ ಕೃತ್ಯವನ್ನು ಎಸಗಿರುವ ಕೀಚಕರಿಗೆ ಕಾನೂನು ಬದ್ಧವಾಗಿ ತಕ್ಕ ಶಾಸ್ತಿಯಾಗಬೇಕೆಂದು ಕೋರಿಕೊಳ್ಳುತ್ತಿದ್ದೇನೆ. ಈ ರೇಪ್ ಮತ್ತು ಮರ್ಡರ್ ಕೃತ್ಯಕ್ಕೆ ಇನ್ನಷ್ಟು ಕಠಿಣವಾದ ಕಾನೂನು ನಮ್ಮ ದೇಶದಲ್ಲಿ ರೂಪುಗೊಳ್ಳಬೇಕು ಎಂದಿದ್ದಾರೆ.
ಇತ್ತೀಚಿಗೆ ರಾಯಚೂರಿನ ಮಾಣಿಕ್ ಪ್ರಭು ದೇವಸ್ಥಾನದ ಗುಡ್ಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿತ್ತು. ನಂತರ ಅದನ್ನು ರಾಯಚೂರು ನಗರದ ಐಡಿಎಸ್ಎಂಟಿ ಬಡಾವಣೆಯಲ್ಲಿರುವ ನಾಗರಾಜ ಪತ್ತಾರ ಎಂಬುವವರ ಮಗಳು 23 ವರ್ಷ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಎಂದು ಗುರುತಿಸಲಾಗಿತ್ತು. ರಾಯಚೂರಿನ ನವೋದಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಆಕೆ ಎಪ್ರಿಲ್ 15 ರಂದು ಮುಂಜಾನೆ ಕಾಲೇಜಿಗೆ ಹೋಗುತ್ತೇನೆ ಎಂದು ಹೋದವಳು ಕಾಣೆಯಾಗಿದ್ದರು. ಪೋಷಕರು ಆಕೆಯನ್ನು ಹುಡುಕುತ್ತಿದ್ದ ವೇಳೆ ಗುಡ್ಡದಲ್ಲಿ ಆ ಯುವತಿ ಶವವಾಗಿ ಪತ್ತೆಯಾಗಿದ್ದರು.
ವಿದ್ಯಾರ್ಥಿನಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ #Justic For Madhu ಹ್ಯಾಷ್ ಟ್ಯಾಗ್ ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಲಾಗುತ್ತಿದೆ.