ಬೆಂಗಳೂರು: ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಅವರನ್ನು ಅಪಹರಿಸಿ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟ ದುನಿಯಾ ವಿಜಯ್ ಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.


COMMERCIAL BREAK
SCROLL TO CONTINUE READING

ಎಸಿಎಂಎಂ ನ್ಯಾಯಾಲಯದಲ್ಲಿ ಈ ಹಿಂದೆ ವಿಜಯ್ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದ ಹಿನ್ನೆಲೆಯಲ್ಲಿ ಸೆಷನ್ಸ್ ನ್ಯಾಯಾಲಯದಲ್ಲಿ ವಿಜಯ್ ಮತ್ತು ಸಹಚರರು ಸೆಷನ್ಸ್ ಕೋರ್ಟ್​ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಪೂರ್ಣಗೊಳಿಸಿದ್ದ ಕೋರ್ಟ್​, ತೀರ್ಪುನ್ನು ಇಂದಿಗೆ ಕಾಯ್ದಿರಿಸಿತ್ತು. ಇದೀಗ ಸೆಷನ್ಸ್​ ಕೋರ್ಟ್ ದುನಿಯಾ ವಿಜಯ್ ಸೇರಿದಂತೆ ಇತರ ಆರೋಪಿಗಳಿಗೆ ಒಂದು ಲಕ್ಷ ರೂ.ಬಾಂಡ್, ಇಬ್ಬರು ಶ್ಯೂರಿಟಿಗಳ ಷರತ್ತು ವಿಧಿಸಿ, ಜಾಮೀನು ಮಂಜೂರು ಮಾಡಿದೆ.


ಅಷ್ಟೇ ಅಲ್ಲದೆ, ಮಾಧ್ಯಮಗಳಿವೆ, ಎಚ್ಚರಿಕೆಯಿಂದ ವರ್ತಿಸಲಿ. ಈಗೇನೋ ಜಾಮೀನು ನೀಡಿದ್ದೇನೆ. ಆದರೆ ಮುಂದೆ ಹೀಗೆ ವರ್ತಿಸದಿರಿ, ಹೀರೋ ಆಗಿ ಇತರರಿಗೆ ಮಾದರಿಯಾಗಬೇಕು ಎಂದು ನ್ಯಾಯಾಧೀಶರು ದುನಿಯಾ ವಿಜಯ್ ಪರ ವಕೀಲರಿಗೆ ಬುದ್ಧಿವಾದ ಹೇಳಿ ಜಾಮೀನು ಮಂಜೂರು ಮಾಡಿದ್ದಾರೆ.


ಬೆಂಗಳೂರಿನ ಅಂಬೇಡ್ಕರ್‌ ಭವನದಲ್ಲಿ ಸೆಪ್ಟೆಂಬರ್ 22ರ ರಾತ್ರಿ ನಡೆದ ಜಗಳವೊಂದು ಘರ್ಷಣೆಗೆ ತಿರುಗಿ, ಜಿಮ್‌ ಟ್ರೈನರ್‌ ಆಗಿರುವ ಪಾನಿಪುರಿ ಕಿಟ್ಟಿ ಅವರ ತಮ್ಮನ ಮಗ ಮಾರುತಿ ಗೌಡ ಎನ್ನುವ ಯುವಕನನ್ನು ದುನಿಯಾ ವಿಜಿ ಮತ್ತು ಮೂವರು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹೈಗ್ರೌಂಡ್ಸ್‌ ಪೊಲೀಸ್ ಠಾಣೆಯಲ್ಲಿ ದುನಿಯಾ ವಿಜಯ್ ಮತ್ತು ಅವರ ಸ್ನೇಹಿತರ ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದುನಿಯಾ ವಿಜಯ್ ಮತ್ತು ಆರೋಪಿಗಳನ್ನು ಬಂಧಿಸಿದ್ದರು. ನಂತರ ಕೋರ್ಟ್ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.