ಬೆಂಗಳೂರು: ಚಂದನವನದ ಅಭಿನಯ ಶಾರದೆ ನಟಿ ಜಯಂತಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ವಿಕ್ರಂ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ  ಸುದ್ದಿಗೋಷ್ಠಿಯಲ್ಲಿ ಡಾ. ಸತೀಶ್ ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟಿ ಜಯಂತಿ ಅವರು, "ವೈದ್ಯರು ನನಗೆ ಮರುಜನ್ಮ ಕೊಟ್ಟಿದ್ದಾರೆ. ಹಾಗೇ ನನ್ನ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ" ಎಂದು ತಿಳಿಸಿದರು. ಆಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಜಯಂತಿ ಅವರು ಕಳೆದ 12 ದಿನಗಳಿಂದ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 


"ವೈದ್ಯರು ಅಮ್ಮನಿಗೆ ಫಿಸಿಯೋಥೆರಪಿ ಮಾಡುವಂತೆ ಸಲಹೆ ನೀಡಿದ್ದಾರೆ. ಡಯೆಟ್ ಚಾರ್ಟ್ ಹೇಳಿದ್ದಾರೆ. ಹತ್ತು ದಿನ ನಂತರ ಮತ್ತೆ ಆರೋಗ್ಯ ಪರಿಶೀಲನೆಗೆ ಬರಲು ಹೇಳಿದ್ದಾರೆ" ಎಂದು ಜಯಂತಿ ಅವರ ಪುತ್ರ  ಕೃಷ್ಣ ಕುಮಾರ್ ಹೇಳಿದರು.


ಮಾರ್ಚ್ 26ರಂದು ತೀವ್ರ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಜಯಂತಿ ಅವರನ್ನು ಕನ್ನಿಂಗ್ ಹ್ಯಾಂ ರಸ್ತೆ ಬಳಿ ಇರುವ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದ ನಂತರ ಅವರನ್ನು ವಾರ್ಡ್'ಗೆ ಶಿಫ್ಟ್ ಮಾಡಲಾಗಿತ್ತು. ಆಸ್ಪತ್ರೆಯ ಹಿರಿಯ ವೈದ್ಯ ಡಾಕ್ಟರ್ ಸತೀಶ್ ಚಿಕಿತ್ಸೆ ನೀಡುತ್ತಿದ್ದರು.


ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಮರಾಠಿ ಭಾಷೆಯ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಜಯಂತಿ ಅಭಿನಯಿಸಿದ್ದಾರೆ. ವರನಟ ಡಾ.ರಾಜ್ ಕುಮಾರ್ ಜೊತೆಗೆ ಅತಿ ಹೆಚ್ಚು ಚಿತ್ರಗಳಲ್ಲಿ ನಾಯಕಿ ಆಗಿ ಅಭಿನಯಿಸಿರುವ ಖ್ಯಾತಿ ಕೂಡ ಜಯಂತಿ ಅವರಿಗೆ ಸಲ್ಲುತ್ತದೆ. ಇವರಿಗೆ ಡಾ.ರಾಜ್ ಕುಮಾರ್ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಹಾಗೂ ಫಿಲ್ಮ್ ಫೇರ್ ಸೇರಿದಂತೆ ಹಲವಾರು ಪ್ರಶಸ್ತಿಳು ಲಭಿಸಿವೆ.