ಮುದ್ದಿನ ಮಗನ ಜನ್ಮದಿನಕ್ಕೆ ನಟಿ ಸೋನಾಲಿ ಬೇಂದ್ರೆಯ ಭಾವನಾತ್ಮಕ ಬರಹ
ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಮೊದಲ ಬಾರಿಗೆ ತಮ್ಮ ಮಗ ರಣ್ವೀರ್ ಜನ್ಮದಿನದಂದು ಅವನಿಂದ ದೂರವಿದ್ದಾರೆ.
ಮುಂಬೈ: ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಕಳೆದ ಕೆಲವು ದಿನಗಳಿಂದ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಅವರ 'ಪ್ರೀತ್ಸೆ' ಚಿತ್ರದ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದ ಸೋನಾಲಿ ಬೇಂದ್ರೆ ಮೆಟಸ್ಟ್ಯಾಟಿಸ್ ಕ್ಯಾನ್ಸರ್ ಅಂದರೆ ದೇಹದ ವಿವಿಧ ಭಾಗಗಳಿಗೆ ಹರಡುವ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಮೊದಲ ಬಾರಿಗೆ ತಮ್ಮ ಮಗ ರಣ್ವೀರ್ ಜನ್ಮದಿನದಂದು ಅವನಿಂದ ದೂರವಿರುವುದರ ಬಗ್ಗೆ ಬಹಳ ಭಾವುಕರಾಗಿರುವ ಸೋನಾಲಿ, ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಜೊತೆಗೆ ಭಾವನಾತ್ಮಕವಾದ ಬರಹವನ್ನು ಹಂಚಿಕೊಂಡಿದ್ದಾರೆ.
"ರಣ್ವೀರ್! ನನ್ನ ಸೂರ್ಯ, ನನ್ನ ಚಂದ್ರ, ನನ್ನ ತಾರೆ, ಆಕಾಶ... ಬಹುಶಃ ನಾನು ಸ್ವಲ್ಪ ಭಾವಾತಿರೇಕಳಾಗಿದ್ದೇನೆ, ಆದರೆ ಇದು ನಿನ್ನ 13ನೇ ಹುಟ್ಟು ಹಬ್ಬ. ವಾಹ್! ನಿನ್ನ ಬಗೆಗಿನ ನನ್ನ ಪ್ರೀತಿಯನ್ನು ಅಭಿವ್ಯಕ್ತಿಪಡಿಸುವುದಕ್ಕೆ ತಿಳಿಯುತ್ತಿಲ್ಲ. ನೀನಂದ್ರೆ ನನಗೆಷ್ಟು ಹೆಮ್ಮೆ ಎಂಬುದನ್ನು ನಾನು ಪದಗಳಲ್ಲಿ ವರ್ಣಿಸುವುದಕ್ಕೆ ಸಾಧ್ಯವಿಲ್ಲ. ನಿನ್ನ ವಿವೇಕ, ಹಾಸ್ಯ, ಅಕ್ಕರೆ, ಜೊತೆಗೆ ನಿನ್ನ ತುಂಟತನ ಎಲ್ಲವೂ ನನಗಿಷ್ಟ. ಹುಟ್ಟು ಹಬ್ಬದ ಶುಭಾಶಯಗಳು ಮಗನೇ. ಇದೇ ಮೊದಲ ಬಾರಿಗೆ ನಿನ್ನ ಜನ್ಮದಿನದಂದು ನಾವಿಬ್ಬರೂ ಜೊತೆಯಲ್ಲಿಲ್ಲ. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.ನಾನು ಸದಾಕಾಲ ನಿನ್ನನ್ನು ಅತಿಯಾಗಿ ಪ್ರೀತಿಸುವೆ. ನಿನಗೊಂದು ಅಪ್ಪುಗೆ@rockbehl" ಎಂದು ಸೋನಾಲಿ ಬೇಂದ್ರೆ ಬರೆದಿದ್ದಾರೆ.