ಬೆಂಗಳೂರು: ಅಂಬರೀಶ್ ಅಸ್ತಂಗತ ಹಿನ್ನೆಲೆಯಲ್ಲಿ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರವನ್ನು ಮತ್ತೊಮ್ಮೆ ಬಿಡುಗಡೆ ಮಾಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇಂದು ಅಂಬಿ ತವರು ಜಿಲ್ಲೆಯಾದ ಮಂಡ್ಯದಲ್ಲಿ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರ ಬಿಡುಗಡೆಯಾಗಿದ್ದು, ಬೆಂಗಳೂರು, ಮೈಸೂರು, ಅಮೇರಿಕಾ ಸೇರಿದಂತೆ ಹಲವೆಡೆ ಸಿನಿಮಾ ಮತ್ತೊಮ್ಮೆ ರಿಲೀಸ್ ಆಗಲಿದೆ. 


ನಾಳೆ ಸಂಜೆ ವೇಳೆಗೆ ಯಾವ ಯಾವ ಸಿನಿಮಾ ಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂಬ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿರುವ ನಿರ್ಮಾಪಕ, ವಿತರಕ ಜಾಕ್ ಮಂಜು 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರ ಪ್ರದರ್ಶನದಿಂದ ಬಂದಂತಹ ಸಂಪೂರ್ಣ ಲಾಭವನ್ನು ಅಂಬಿ ಕುಟುಂಬದ ಪರವಾಗಿ ಮಂಡ್ಯ ಬಸ್ ದುರಂತದ ಸಂತ್ರಸ್ತರಿಗೆ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.


'ಅಂಬಿ ನಿಂಗ್ ವಯಸ್ಸಾಯ್ತೋ...' ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಕಡೆಯ ಚಿತ್ರವಾಗಿದ್ದು, 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಅಂಬಿಗೆ ಮತ್ತಷ್ಟು ಉತ್ತಮ ಪಾತ್ರಗಳನ್ನು ಮಾಡಬೇಕೆಂಬ ಚಡಪಡಿಕೆ ಕಾಡಿತ್ತು. ಈ ಚಡಪಡಿಕೆ, ಉತ್ಸಾಹದ ಫಲವೇ 'ಅಂಬಿ ನಿಂಗ್ ವಯಸ್ಸಾಯ್ತೋ..' ಚಿತ್ರ!


ಈ ಬಗ್ಗೆ ಮಾತನಾಡಿದ್ದ ಅಂಬರೀಶ್, ಈಗಾಗಲೇ ಸಾಕಷ್ಟು ಪಾತ್ರಗಳನ್ನು ಮಾಡಿದ್ದೇನೆ. ಆದರೂ ಒಳ್ಳೆ ಪಾತ್ರಗಳನ್ನೂ ಮಾಡುವ ಚಡಪಡಿಕೆ... ವಯಸ್ಸಿಗೆ ಒಪ್ಪುವ ಪರಿಪೂರ್ಣ ಪಾತ್ರಗಳನ್ನು ಮಾಡುವ ಚಡಪಡಿಕೆ ಬಿಡಲೇ ಇಲ್ಲ ಎಂದಿದ್ದರು. ಅಷ್ಟೇ ಅಲ್ಲದೆ, ಇದೇ ಸಂದರ್ಭದಲ್ಲಿ ಅಂಬರೀಶ್, ನನಗಿನ್ನು ವಯಸ್ಸಾಗಿಲ್ಲವೆಂದು ತಮಾಷೆ ಕೂಡ ಮಾಡಿದ್ದರು.


'ಅಂಬಿ ನಿಂಗ್ ವಯಸ್ಸಾಯ್ತೋ' ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಹೊಸ ವರ್ಚಸ್ಸು ತಂದುಕೊಟ್ಟಿತ್ತು. ಸುಮಾರು 14 ವರ್ಷಗಳ ಬ್ರೇಕ್ ಬಳಿಕ ಅಂಬಿ ಈ ಚಿತ್ರದಲ್ಲಿ ಅಭಿನಯಿಸಿದ್ದರು. ಚಿತ್ರದಲ್ಲಿ ರಾಜಾ ಮೀಸೆಯಲ್ಲಿ ಹಳೆಯ ಬುಲೆಟ್ ಹತ್ತಿ ಹೊರಡುವ ಅಂಬಿ ಲುಕ್, ಅವರಲ್ಲಿ ನವ ಚೈತನ್ಯ ಮೂಡಿಸಿತ್ತು.