CAA ಗೆ ಬೆಂಬಲ ನೀಡಿರುವ ರಜಿನಿಕಾಂತ್ ಹೇಳಿದ್ದೇನು?
ಒಂದು ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ಭಾರತೀಯ ಮುಸ್ಲಿಂಮರಿಗೆ ಯಾವುದೇ ರೀತಿಯ ತೊಂದರೆ ಉಂಟು ಮಾಡಿದರೆ, ಅವರನ್ನು ಬೆಂಬಲಕ್ಕೆ ನಿಲ್ಲುವ ಮೊದಲ ವ್ಯಕ್ತಿ ನಾನಾಗಲಿದ್ದೇನೆ ಎಂದು ದಕ್ಷಿಣ ಚಿತ್ರರಂಗದ ಖ್ಯಾತ ಸೂಪರ್ ಸ್ಟಾರ್ ರಜಿನಿಕಾಂತ್ ಹೇಳಿದ್ದಾರೆ. ಅಷ್ಟೇ ಅಲ್ಲ NPR ಕೂಡ ದೇಶದ ಹಿತದೃಷ್ಟಿಯಿಂದ ತುಂಬಾ ಮಹತ್ವದ್ದಾಗಿದೆ ಎಂದೂ ಕೂಡ ಅವರು ಹೇಳಿದ್ದಾರೆ.
ನವದೆಹಲಿ: CAA ಕುರಿತು ದಕ್ಷಿಣ ಚಿತ್ರರಂಗದ ಖ್ಯಾತ ಸೂಪರ್ ಸ್ಟಾರ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. CAA ಕುರಿತು ಮಾತನಾಡಿರುವ ಅವರು, ಈ ಕಾಯ್ದೆಯ ಬಗ್ಗೆ ಮುಸ್ಲಿಮರು ಭಯಪಡುವ ಅಗತ್ಯವಿಲ್ಲ. ಇದು ನಮ್ಮ ದೇಶದ ಮುಸ್ಲಿಮರಿಗೆ ಯಾವುದೇ ರೀತಿಯ ಹಾನಿ ಉಂಟುಮಾಡುವುದಿಲ್ಲ. ಒಂದು ವೇಳೆ ಅದು ಹಾನಿ ಮಾಡಿದ್ದೆ ಅದಲ್ಲಿ ಮುಸ್ಲಿಮರ ಬೆಂಬಲಕ್ಕೆ ನಿಲ್ಲುವ ಮೊದಲ ವ್ಯಕ್ತಿ ನಾನಾಗಲಿದ್ದೇನೆ ಎಂದು ಹೇಳಿದ್ದಾರೆ. ಇದೇ ವೇಳೆ NPR ಕುರಿತು ಹೇಳಿಕೆ ನೀಡಿರುವ ಅವರು, NPR ದೇಶದ ಹಿತದೃಷ್ಟಿಯಿಂದ ಮಹತ್ವದ್ದಾಗಿದ್ದು, NCR ಇನ್ನೂ ದೇಶಾದ್ಯಂತ ಜಾರಿಗೆ ಬಂದಿಲ್ಲ ಎಂದಿದ್ದಾರೆ.
ಇದಕ್ಕೂ ಮೊದಲು CAA ಅನ್ನು ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ರಜಿನಿಕಾಂತ್ ಅಸಮಾಧಾನ ಹೊರಹಾಕಿದ್ದರು. ದೇಶದ ಸದ್ಯದ ಪರಿಸ್ಥಿತಿ ತಮಗೆ ನೋವು ತಂದಿದೆ ಎಂದು ಅವರು ಟ್ವೀಟ್ ಮಾಡಿದ್ದರು. ಹಿಂಸೆ ಯಾವುದೇ ಒಂದು ಸಮಸ್ಯೆಯ ಪರಿಹಾರ ಅಲ್ಲ, ಆದಷ್ಟು ಒಗ್ಗಟ್ಟನ್ನು ಪ್ರದರ್ಶಿಸಿ, ದೇಶದ ರಕ್ಷಣೆ ಹಾಗೂ ಹಿತದ ಕುರಿತು ಯೋಜಿಸಿ ಎಂದು ಹೇಳಿದ್ದರು. ಇದೇವೇಳೆ ಅವರು ಹಿಂಸಾಚಾರದಿಂದ ದೂರ ಉಳಿಯುವಂತೆ ದೇಶದ ನಾಗರಿಕರಲ್ಲಿ ಮನವಿ ಮಾಡಿದ್ದರು.
ಈ ಹಿಂದೆ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ಮೊಟಕುಗೊಳಿಸುವ ಭಾರತ ಸರ್ಕಾರದ ನಿರ್ಣಯಕ್ಕೆ ಸ್ವಾಗತ ಕೋರಿದ್ದರು. ಇದಕ್ಕಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಕೂಡ ಸಲ್ಲಿಸಿದ್ದರು. ಲೋಕಸಭೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಮಾಡಿರುವ ಭಾಷಣಕ್ಕೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ, ಮೋದಿ ಮತ್ತು ಶಾ ಜೋಡಿಯನ್ನು ಕೃಷ್ಣ ಮತ್ತು ಅರ್ಜುನರ ಜೋಡಿಗೆ ಹೋಲಿಸಿದ್ದರು.
ಸಂಸತ್ತಿಯ ಎರಡು ಸದನಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಅನುಮೋದನೆ ನೀಡಿದ ಬಳಿಕ ಇದನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ಕಾಯ್ದೆ ಮುಸ್ಲಿಮರ ಹಿತಾಸಕ್ತಿಗೆ ಧಕ್ಕೆ ತರಲಿದೆ ಎಂದು ಪ್ರತಿಪಕ್ಷಗಳು ಹೇಳುತ್ತಿವೆ. ಆದರೆ, ಈ ಕಾಯ್ದೆಯಡಿ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ಥಾನ್ ನಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ವಲಸೆ ಬಂದ ಮತ್ತು ಅಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ, ಸಿಖ್, ಪಾರಸಿ, ಕ್ರಿಶ್ಚಿಯನ್, ಬೌದ್ಧ ಹಾಗೂ ಜೈನ ಧರ್ಮೀಯರಿಗೆ ಭಾರತದ ಪೌರತ್ವ ಕಲ್ಪಿಸುವ ಉದ್ದೇಶ ಈ ಕಾಯ್ದೆ ಹೊಂದಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.
ಖ್ಯಾತ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಕೂಡ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ CAA ಹಾಗೂ NRC ಗಳಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ವಿಡಿಯೋ ಹಂಚಿಕೊಂಡಿರುವ ಅವರು, "72 ವರ್ಷಗಳ ಬಳಿಕವೂ ಟ್ರಾಫಿಕ್ ನಿಯಮ ಇನ್ನೂ ಅರ್ಥವಾಗದ ಕೆಲ ಮಹಾನುಭಾವರಿಗೆ, ಬಯಲು ಶೌಚದ ಕುರಿತು ಅರಿವು ಮೂಡಿಸಲು ಲಕ್ಷಾಂತರ ರೂ. ಹಣ ವ್ಯಯಿಸಿ ಜಾಹಿರಾತುಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಕಳೆದ ಮೂರು ವರ್ಷಗಳಲ್ಲಿ GST ಅರ್ಥವಾಗದ ಇವರಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಕೇವಲ ಎರಡೇ ಎರಡು ದಿನಗಳಲ್ಲಿ ಅರ್ಥವಾಗಿದೆ" ಎಂದು ಹೇಳಿದ್ದಾರೆ.