ಕೂಡಲೇ ವಿಷ್ಣು ಸ್ಮಾರಕ ನಿರ್ಮಾಣ ಮಾಡಿ; ಸಿಎಂಗೆ ಭಾರತಿ ವಿಷ್ಣುವರ್ಧನ್ ಮನವಿ
ಸರ್ಕಾರ ಕೂಡಲೇ ಅಂತಿಮ ನಿರ್ಧಾರ ಕೈಗೊಂಡು ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ.
ಬೆಂಗಳೂರು: ಮೈಸೂರಿನಲ್ಲಿಯೇ ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡುವಂತೆ ನಿರ್ಮಾಪಕ ಹಾಗೂ ಶಾಸಕ ಮುನಿರತ್ನ ಮೂಲಕ ಭಾರತಿ ವಿಷ್ಣುವರ್ಧನ್ ಅವರು ಸರ್ಕಾರಕ್ಕೆ ಮನವಿ ಪತ್ರ ಕಳುಹಿಸಿದ್ದಾರೆ.
ನಟ ವಿಷ್ಣುವರ್ಧನ್ ಸ್ಮಾರಕ ವಿಚಾರವಾಗಿ ಶಾಸಕ, ನಿರ್ಮಾಪಕ ಮುನಿರತ್ನ ಹಾಗು ನಿರ್ಮಾಪಕ ಕೆ. ಮಂಜು ಇಂದು ಭಾರತಿ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿದರು. ಈ ವೇಳೆ ವಿಷ್ಣು ಕುಟುಂಬ ವರ್ಗದವರು ಸ್ಮಾರಕ ನಿರ್ಮಾಣ ವಿಚಾರವಾಗಿ ಸರ್ಕಾರಕ್ಕೆ ಮನವಿ ಪತ್ರ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ ಅವರು, ಸ್ಮಾರಕ ನಿರ್ಮಾಣ ಕುರಿತು ಮುಖ್ಯಮಂತ್ರಿಗೆ ಮನವಿ ಪತ್ರ ಬರೆದು, ನನಗೆ ನೀಡಿದ್ದಾರೆ. ಇದನ್ನು ಮುಖ್ಯಮಂತ್ರಿಗಳಿಗೆ ತಲುಪಿಸಿ ಕೂಡಲೇ ಸ್ಮಾರಕ ನಿರ್ಮಾಣ ಮಾಡುವಂತೆ ಒತ್ತಾಯಿಸುತ್ತೇನೆ. ಸರ್ಕಾರ ಈ ಬಗ್ಗೆ ಕೂಡಲೇ ನಿರ್ಧಾರ ಕೈಗೊಳ್ಳಲಿದೆ. ರಾಜ್, ಅಂಬರೀಶ್ ಸ್ಮಾರಕದಂತೆಯೇ ವಿಷ್ಟು ಸ್ಮಾರಕವೂ ನಿರ್ಮಾಣವಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತಿ ವಿಷ್ಣುವರ್ಧನ್, ಈಗಾಗಲೇ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ಆಗಿದೆ. ಆದರೆ ಕೆಲವು ಕಾನೂನು ಸಮಸ್ಯೆಗಳು ಎದುರಾದ್ದರಿಂದ ನಿರ್ಮಾಣ ಕಾರ್ಯ ನಿಂತಿದೆ. ಹಾಗಾಗಿ ಈ ಬಗ್ಗೆ ಸರ್ಕಾರ ಕೂಡಲೇ ಅಂತಿಮ ನಿರ್ಧಾರ ಕೈಗೊಂಡು ಸ್ಮಾರಕ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.