ಶತಮಾನದ ಸೂಪರ್ ಸ್ಟಾರ್ Amitabh Bachchanಗೆ ಕಾಡಿದ ಅಂಧತ್ವದ ಭಯ
ಖ್ಯಾತ ಬಾಲಿವುಡ್ ಹಿರಿಯ ನಟ ಹಾಗೂ ಶತಮಾನದ ಸೂಪರ್ ಸ್ಟಾರ್ ಅಮಿತಾಬಭ್ ಬಚ್ಚನ್ ಅವರಿಗೆ ಅಂಧತ್ವದ ಭಯ ಕಾಡಲಾರಂಭಿಸಿದೆ. ಈ ಕುರಿತು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿರುವ ಅಮಿತಾಭ್ ಬಚ್ಚನ್ ತಮ್ಮ ಅಭಿಮಾನಿಗಳ ಜೊತೆಗೆ ತಮ್ಮ ಈ ಚಿಂತೆಯನ್ನು ಹಂಚಿಕೊಂಡಿದ್ದಾರೆ.
ನವದೆಹಲಿ: ಶತಮಾನದ ಸೂಪರ್ ಸ್ಟಾರ್ ಹಾಗೂ ಬಾಲಿವುಡ್ ನ ಖ್ಯಾತ ಹಿರಿಯ ನಟ ಅಮಿತಾಭ್ ಬಚ್ಚನ್ ತಮ್ಮ ದೃಷ್ಟಿಯ ಕುರಿತು ಚಿಂತೆ ಹೊರಹಾಕಿದ್ದಾರೆ. ಈ ಕುರಿತು ತಮ್ಮ ಭೀತಿ ವ್ಯಕ್ತಪಡಿಸಿರುವ ಅವರು, ತಾವು ದೃಷ್ಟಿಹೀನರಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಹೌದು, ಈ ಮಾತನ್ನು ಸ್ವತಃ ಅಮಿತಾಭ್ ಅವರೇ ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿರುವ ಅವರು, "ಈ ಕಣ್ಣುಗಳು ಮಸುಕಾದ ಚಿತ್ರಗಳನ್ನು ನೋಡುತ್ತಿವೆ. ನನ್ನ ಕಣ್ಣುಗಳು ಕೆಲವೊಮ್ಮೆ ಎರಡು ಆಕೃತಿಗಳನ್ನು ನೋಡುತ್ತಿದ್ದು, ಕೆಲವೇ ದಿನಗಳಲ್ಲಿ ಅಂಧತ್ವ ಬರಲಿದೆ ಎಂದು ನಾನು ಭಾವಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.
ಆದರೆ, ನಂತರ ಈ ಕುರಿತು ಬಹಿರಂಗ ಪಡಿಸಿರುವ ಅಮಿತಾಭ್, ತಮ್ಮ ವೈದ್ಯರು ನೀವು ಅಂಧರಾಗುವುದಿಲ್ಲ ಎಂಬ ಸಾಂತ್ವನ ಹೇಳಿದ್ದಾರೆ ಎಂದಿದ್ದಾರೆ. "ವೈದ್ಯರ ಕುರಿತು ತಾವು ಮಾತನಾಡಿದ್ದು, ಅವರು ಸೂಚಿಸಿರುವ ವಿಧಾನಗಳನ್ನು ಪಾಲಿಸಿತ್ತಿದ್ದೇನೆ. ಅವರು ಸೂಚಿಸಿರುವ ಐಡ್ರಾಪ್ ಪ್ರತಿ ಗಂಟೆಗೆ ಕಣ್ಣಲ್ಲಿ ಹಾಕುತ್ತಿದ್ದೇನೆ. ಅವರು ನನಗೆ ನೀವು ಕುರುಡರಾಗುವುದಿಲ್ಲ ಎಂಬ ಸಾಂತ್ವನ ಹೇಳಿದ್ದಾರೆ. ಹೀಗಾಗಿ ಕಂಪ್ಯೂಟರ್ ಜೊತೆ ಕಾಲ ಕಳೆಯಲು ನನ್ನ ಬಳಿ ಸಾಕಷ್ಟು ಕಾಲವಿದೆ. ಕಣ್ಣುಗಳು ಆಯಾಸಗೊಂಡಿವೆ ಅಷ್ಟೇ ಇನ್ನೇನಿಲ್ಲ " ಎಂದಿದ್ದಾರೆ.
ದೇಶಾದ್ಯಂತ ಪಸರಿಸಿರುವ ಕೊರೊನಾ ವೈರಸ್ ಕುರಿತು ಮಾತನಾಡಿರುವ ಅಮಿತಾಭ್ ಬಚ್ಚನ್ ಸಧ್ಯ ಒಳ್ಳೆಯ ಕೆಲಸದಲ್ಲಿ ತೊಡಗಿದ್ದಾರೆ. ಮುಂಬೈನಲ್ಲಿ ದಿನನಿತ್ಯ ಅವಶ್ಯಕತೆ ಇರುವವರಿಗೆ ಸುಮಾರು 2000 ಪ್ಯಾಕೆಟ್ ಆಹಾರ ಸಾಮಗ್ರಿಗಳನ್ನು ಅಮಿತಾಭ್ ವಿತರಿಸುತ್ತಿದ್ದಾರೆ.
ಶೀಘ್ರದಲ್ಲಿಯೇ ಬಿಗ್ ಬಿ ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಅಭಿನಯದ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಬ್ರಹ್ಮಾಸ್ತ್ರ-ಭಾಗ 1 ಡಿಸೆಂಬರ್ 4 ರಂದು ಬಿಡುಗಡೆಗೊಳ್ಳಲಿದೆ. ಈ ಚಿತ್ರ ಹಿಂದಿ, ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಈ ಐದು ಭಾಷೆಗಳಲ್ಲಿ ಬಿಡುಗಡೆಗೆ ಸಿದ್ದವಾಗಿದೆ. ಈ ಚಿತ್ರದಲ್ಲಿ ನಾಗಾರ್ಜುನ್ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.