ಬೆಂಗಳೂರು: ರಾಮಾಚಾರಿಯಾಗಿ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ 'ನಾಗರಹಾವು' ಚಿತ್ರ ಇದೀಗ ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ತೆರೆಯ ಮೇಲೆ ಬರಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಚಿತ್ರದ ನೂತನ ಟೀಸರ್ ಬಿಡುಗಡೆಯಾಗಿದ್ದು, ಯು ಟ್ಯೂಬ್'ನಲ್ಲಿ ಟ್ರೆಂಡಿಂಗ್ ಆಗಿದೆ.


COMMERCIAL BREAK
SCROLL TO CONTINUE READING

ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಅಂಬರೀಶ್ ಅಭಿನಯದ ನಾಗರಹಾವು ಚಿತ್ರ ಕನ್ನಡ ಚಿತ್ರರಂಗದಲ್ಲೇ ಎವರ್ ಗ್ರೀನ್ ಚಿತ್ರ. ಚಾಮಯ್ಯ ಮೇಷ್ಟ್ರ ಶಿಷ್ಯನಾಗಿ ಅಭಿಯಿಸಿದ್ದ ವಿಷ್ಣುವರ್ಧನ್ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟ ಚಿತ್ರ. ಈಗ ಮತ್ತೊಮ್ಮೆ ಆ ಚಿತ್ರವನ್ನು ಹೊಸ ಅವತಾರದಲ್ಲಿ ತೆರೆಗೆ ತರಲು ಈಶ್ವರಿ ಪ್ರೋಡಕ್ಷನ್ಸ್ ಸಿದ್ಧವಾಗಿದೆ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಅಂದು 35ಎಂಎಂನಲ್ಲಿ ಬಿಡುಗಡೆಗೊಳಿಸಿದ್ದ ಚಿತ್ರವನ್ನು ಇಂದು ಸಿನಿಮಾಸ್ಕೋಪ್ ಸಿದ್ಧಪಡಿಸುತ್ತಿದೆ. ಅದನ್ನು ದೊಡ್ಡ ಮಟ್ಟದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಬೃಹತ್ ಪರದೆ ಮೇಲೆ ಮೂಡಿಸಲು ಮುಂದಾಗಿದೆ. 


ಹೊಸ ತಂತ್ರಜ್ಞಾನದೊಂದಿಗೆ ತೆರೆಗೆ ಬರಲಿರುವ ನಾಗರಹಾವು ಚಿತ್ರದ ಟೀಸರ್ ಅನ್ನು ಕಿಚ್ಚ ಸುದೀಪ್ ಅವರ ಟ್ವಿಟ್ಟರ್ ಅಕೌಂಟ್ ನಲ್ಲಿ ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ''ವಿಷ್ಣು ಸರ್ ಓರ್ವ ಅದ್ಭುತ ನಟರಾಗಿದ್ದು, ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರ ಚಿತ್ರದ ಟೀಸರ್ ಬಿಡುಗಡೆ ಮಾಡಲು ಅವಕಾಶ ದೊರೆತಿರುವುದು ನನಗೆ ಸಂತೋಷ ತಂದಿದೆ. ಹೊಸ ಅವತಾರದಲ್ಲಿ  ‘ಮರಳಿದ್ದಾರೆ ರಾಮಚಾರಿ’ ಎಂದು ಸುದೀಪ್‌ ಬರೆದುಕೊಂಡಿದ್ದಾರೆ.



ಈಗಾಗಲೇ ಯೂಟ್ಯೂಬ್ 'ನಲ್ಲಿ ಸಖತ್ ಸೌಂಡ್ ಮಾಡಿದೆ. ಕೇವಲ ಒಂದೇ ದಿನದಲ್ಲಿ 2,45,972 ಜನರು ಟೀಸರ್ ವೀಕ್ಷಣೆ ಮಾಡಿದ್ದಾರೆ. ಸದ್ಯ ಈ ಚಿತ್ರದ ಟೀಸರ್ ಯುಟ್ಯೂಬ್'ನಲ್ಲಿ ಟ್ರೆಂಡಿಂಗ್ ವೀಡಿಯೋಗಳಲ್ಲಿ 15ನೇ ಸ್ಥಾನ ಪಡೆದಿದೆ. 


ಆ ಟೀಸರ್ ಅನ್ನು ನೀವೂ ಒಮ್ಮೆ ವೀಕ್ಷಿಸಿ...