ಮುಂಬೈ:ಖ್ಯಾತ ಬಾಲಿವುಡ್ ನಟ ಅಜಯ್ ದೇವಗನ್ ಅವರ ಚಿತ್ರ 'ತಾನಾಜಿ-ದಿ ಅನ್ಸಂಗ್ ವಾರಿಯರ್' ಚಿತ್ರಕ್ಕೆ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜನವರಿ 10ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ 'ತಾನಾಜಿ' ಬಿಡುಗಡೆಯಾದ ಮೊದಲ ದಿನದಿಂದಲೂ ಕೂಡ ಬಾಕ್ಸ್ ಆಫೀಸ್ ಮೇಲೆ ತನ್ನ ನಾಗಾಲೋಟ ಮುಂದುವರೆಸಿದೆ. ಬಿಡುಗಡೆಯಾದ ಮೊದಲ ವಾರದಲ್ಲಿ 100 ಕೋಟಿ ರೂ. ಗಳಿಕೆ ಮಾಡಿರುವ ಈ ಚಿತ್ರ ಎರಡನೆಯ ವಾರಾಂತ್ಯಕ್ಕೆ ಕೂಡ ತನ್ನ ಬಾಕ್ಸ್ ಆಫೀಸ್ ಮೇಲೆ ತನ್ನ ಜಾಲ್ವಾ ಮುಂದುವರೆಸಿದೆ. ಈ ಮಧ್ಯೆ ಬಾಕ್ಸ್ ಆಫೀಸ್ ನಲ್ಲಿ ಗಳಿಕೆಯ ವಿಚಾರದಲ್ಲಿ ಈ ಚಿತ್ರ ಹೊಸ ದಾಖಲೆಯೊಂದನ್ನು ಬರೆಯುವಲ್ಲಿ ಯಶಸ್ವಿಯಾಗಿದೆ.
ಬಾಕ್ಸ್ ಆಫೀಸ್ ಇಂಡಿಯಾ ಅನುಸಾರ ಚಿತ್ರ ಬಿಡುಗಡೆಯಾದ ಎರಡನೇ ಶುಕ್ರವಾರ ರೂ.9.50 ಕೋಟಿ ರೂ.ಗಳಿಕೆ ಮಾಡಿ 'ಟಾಪ್ ಸೆಕೆಂಡ್ ಫ್ರೈಡೆ' ಪಟ್ಟಿಯಲ್ಲಿ 10ನೇ ಶ್ರೇಣಿ ಅಲಂಕರಿಸಿದೆ. ಇದಕ್ಕೂ ಮೊದಲು ದೀಪಿಕಾ ಅಭಿನಯದ 'ಪದ್ಮಾವತ್' ಚಿತ್ರ ಈ ಸ್ಥಾನ ಅಲಂಕರಿಸಿತ್ತು. ತನ್ನ ಎರಡನೇ ವಾರಾಂತ್ಯಕ್ಕೆ ಈ ಚಿತ್ರ ಸುಮಾರು 25ಕೋಟಿ.ರೂ ಕಲೆ ಹಾಕಿದ್ದು, ಚಿತ್ರದ ಒಟ್ಟು ಗಳಿಕೆ 141 ಕೋಟಿ.ರೂ.ಗಳಿಗೆ ತಲುಪಿದೆ. ಓಂ ರಾವುತ್ ನಿರ್ದೆಶದದ 'ತಾನಾಜಿ:ದಿ ಅನ್ಸಂಗ್ ವಾರಿಯರ್ ಚಿತ್ರದಲ್ಲಿ ಅಜಯ್ ದೇವಗನ್ ಜೊತೆಗೆ ಸೈಫ್ ಅಲಿ ಖಾನ್, ಕಾಜೋಲ್, ಶರದ್ ಕೇಳ್ಕರ್, ನೇಹಾ ಶರ್ಮಾ, ಪದ್ಮಾವತಿ ರಾವ್ ಪ್ರಮುಖ ಭೂಮಿಕೆಯಲ್ಲಿದ್ದಾರೆ.
'ತಾನಾಜಿ-ದಿ ಅನ್ಸಂಗ್ ವಾರಿಯರ್' ಮೂಲಕ ಬಾಲಿವುಡ್ ನಲ್ಲಿ ನಿರ್ದೇಶನ ಕ್ಷೇತ್ರಕ್ಕೆ ಕಾಲಿಟ್ಟಿರುವ ಓಂ ರಾವುತ್, ತಾವು ಒಂದು ಒಳ್ಳೆಯ ಐತಿಹಾಸಿಕ ಚಿತ್ರ ರಚಿಸಬಲ್ಲೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಚಿತ್ರದ ಒಂದೊಂದು ದೃಶ್ಯದ ಮೇಲೆ ಓಂ ರಾವುತ್ ಅತಿ ಸೂಕ್ಷ್ಮವಾಗಿ ಕೆಲಸ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲ ಮರಾಠಿಗರ ಶೌರ್ಯ ಮತ್ತು ಸಾಹಸವನ್ನು ಬಿಂಬಿಸಲು ಯಶಸ್ವಿಯಾಗಿದೆ. ತುಂಬಾ ಸಮಯದ ಬಳಿಕ ಸೈಫ್ ಅಲಿ ಖಾನ್ ಅವರು ಉತ್ತಮ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ ಅಥವಾ ತುಂಬಾ ಹೊತ್ತಿನ ಬಳಿಕ ದೊಡ್ಡ ತೆರೆಯ ಮೇಲೆ ಒಂದು ಉತ್ತಮ ಅಭಿನಯದ ಮೂಲಕ ರಿಎಂಟ್ರಿ ನೀಡಿದ್ದಾರೆ ಎನ್ನಬಹುದು.