ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಬಗ್ಗೆ ದರ್ಶನ್ ಹೇಳಿದ್ದೇನು?
ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ನಿಜವಾದ ಹೀರೋ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ಮೈಸೂರು: ಪಾಕ್ ವಶದಿಂದ ಇಂದು ಭಾರತಕ್ಕೆ ಹಿಂತಿರುಗುತ್ತಿರುವ ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ನಿಜವಾದ ಹೀರೋ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ನಗರದ ಸಂದೇಶ್ ದಿ ಪ್ರಿನ್ಸ್ ಹೊಟೇಲ್ ನಲ್ಲಿ ಆಯೋಜಿಸಿರುವ ದರ್ಶನ್ ಅವರೇ ತೆಗೆದ ವನ್ಯಜೀವ ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಪಾಕ್ ನೆಲದಲ್ಲಿ ನಿಂತು ಮಾತನಾಡಲು ನಿಜಕ್ಕೂ ಧೈರ್ಯ ಬೇಕು. ನಾನು ಅಭಿನಂದನ್ ಅವರ ಮಾತುಗಳನ್ನು ಕೇಳಿದ್ದೇನೆ. ಅವರೇ ನಿಜವಾದ ಹೀರೋ, ನಾವೆಲ್ಲಾ ಡಮ್ಮಿಗಳು. ಅವರು ಭಾರತಕ್ಕೆ ಮರಳುತ್ತಿರುವುದು ನಿಜಕ್ಕೂ ಸಂತೋಷ ತಂದಿದೆ" ಎಂದು ಹೇಳಿ ದರ್ಶನ್ ಸಲ್ಯೂಟ್ ಹೊಡೆದರು.
ವ್ನಯಜಿವಿ ಛಾಯಾಚಿತ್ರ ಪ್ರದರ್ಶನದ ಕುರಿತು ಮಾತನಾಡಿದ ದರ್ಶನ್, ಕಬಿನಿ, ಕೇರಳ, ಬಂಡೀಪುರ ಸೇರಿದಂತೆ ಹಲವೆಡೆ ಓಡಾಡಿ ಈ ವನ್ಯಜೀವಿ ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದೇನೆ. ಕಾಡಿನಲ್ಲಿ ಪ್ರಾಣಿಗಳನ್ನು ನೋಡುವುದು, ಅವುಗಳ ಫೋಟೋ ತೆಗೆಯುವುದು ನಿಜಕ್ಕೂ ರೋಮಾಂಚನಕಾರಿ ಅನುಭವ. ಅಂತಹ ಅಪರೂಪದ ಕ್ಷಣಗಳನ್ನು ಛಾಯಾಚಿತ್ರದ ಮೂಲಕ ನಿಮ್ಮ ಮುಂದಿಟ್ಟಿದ್ದೇನೆ. ಈ ಪ್ರದರ್ಶನದಿಂದ ಬಂದ ಹಣವನ್ನು ಅರಣ್ಯ ಸಂರಕ್ಷಣೆಗೆ ಖರ್ಚು ಮಾಡುತ್ತೇನೆ ಎಂದರಲ್ಲದೆ, ಅರಣ್ಯ ಸಂರಕ್ಷಣೆಗೆ ಕರೆ ನೀಡಿದರು.