ಬೆಂಗಳೂರು: ಕಳೆದ ಕೆಲ ದಿನಗಳಿಂದ ನಗರದ ಪೋರ್ಟಿಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಂದನವನದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.


COMMERCIAL BREAK
SCROLL TO CONTINUE READING

1976ರ ಎಪ್ರಿಲ್ 2ರಂದು ಬಡ ಕುಟುಂಬವೊಂದರಲ್ಲಿ ಜನಿಸಿದ್ದ ಪ್ರಕಾಶ್​, ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಬಳಿಕ ಬುಲೆಟ್ ಪ್ರಕಾಶ್ ಎಂದೇ ಖ್ಯಾತಿ ಪಡೆದಿದ್ದರು. 44 ವರ್ಷದ ಬುಲೆಟ್ ಪ್ರಕಾಶ್ ಗ್ಯಾಸ್ಟಿಕ್ ಸಮಸ್ಯೆಯ ಕಾರಣ ಅವರು ನಗರದ ಪೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲದೆ ಅವರಿಗೆ ಲಿವರ್ ಹಾಗೂ ಕಿಡ್ನಿ ಸಮಸ್ಯೆ ಕಾಣಿಸಿದ್ದು ವೆಂಟಿಲೇಟರ್ ಮೂಲಕ ಉಸಿರಾಟ ನಡೆಸುತ್ತಿದ್ದರು  ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿದ್ದವು. ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಬುಲೆಟ್ ಪ್ರಕಾಶ್ ನಮ್ಮನ್ನಗಲಿದ್ದಾರೆ. ಪ್ರಕಾಶ್ ಅವರ ನಿಧನಕ್ಕೆ ಚಿತ್ರರಂಗ ಸೇರಿದಂತೆ ವಿವಿಧ ರಂಗಗಳ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.


ಪವರ್ ಸ್ಟಾರ್ ಪುನೀತ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಹಲವು ದಿಗ್ಗಜ ಕಲಾವಿದರೊಂದಿಗೆ ಹಾಸ್ಯ ನಟನಾಗಿ ತಮ್ಮದೇ ಆದ ಛಾಪು ಮೂಡಿಸಿದ್ದ ಬುಲೆಟ್ ಪ್ರಕಾಶ್ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಎಲ್ಲರನ್ನೂ ರಂಜಿಸಿದ್ದರು.


ಈಡೇರದ ಬುಲೆಟ್ ಪ್ರಕಾಶ್ ಕನಸು:
ವಿಶೇಷವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಪ್ತರಾಗಿದ್ದ ಬುಲೆಟ್ ಪ್ರಕಾಶ್ ದಚ್ಚು ಜೊತೆಗೆ ಕಲಾಸಿ ಪಾಳ್ಯ ಸೇರಿದಂತೆ ಅನೇಕ ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದರು.  ತಮ್ಮದೇ ಬ್ಯಾನರ್‌ನಲ್ಲಿ ದರ್ಶನ್ ಜೊತೆ ಸಿನಿಮಾ ಮಾಡುವ ಆಸೆ ಇದೇ ಎಂದು ಬುಲೆಟ್ ಪ್ರಕಾಶ್ ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು, ಅದಕ್ಕಾಗಿ ಅವರು ಕಾಯುತ್ತಿದ್ದರು ಕೂಡ, ಆದರೆ ಪದೇ ಪದೇ ಅವರ ಆರೋಗ್ಯ ಕೈಕೊಡುತ್ತಿದ್ದ ಕಾರಣ ಕೊನೆಗೂ ಆದಾಗ್ಯೂ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ತಮ್ಮದೇ ಬ್ಯಾನರ್‌ನಲ್ಲಿ ಒಂದು ಸಿನಿಮಾ ಮಾಡುವ ಅವರ ಬುಲೆಟ್‌ ಪ್ರಕಾಶ್‌ ಅವರ ಕನಸು ಕನಸಾಗಿಯೇ ಉಳಿಯಿತು.